Showing posts with label ಹನಿಗವನ. Show all posts
Showing posts with label ಹನಿಗವನ. Show all posts

Thursday, 26 September 2019

ನೆರಳು



ನೆರಳಿನ ಬಗ್ಗೆ ಮೂರು ಚುಟುಕಗಳು

*****************************************

ವಿಷದ ನೆರಳು ವಿಷವನ್ನೆ ಹಡೆವುದು
ಖುಷಿಯ ನೆರಳು ಖುಷಿಯನ್ನೆ ಹೆರುವುದು
ದೋಷ ನೆರಳಿನದಲ್ಲ, ಅದು ಬರಿಯ ಛಾಯೆ
ಶೇಷ ನೆರಳಿನ ಮೂಲ ಆಕೃತಿಯ ಮಾಯೆ!!

****************************************

ನಡೆದರೆ ಜೊತೆ ನಡೆಯುವದು ನೆರಳು
ನಿಂತರೆ ಜೊತೆ ನಿಲ್ಲುವದು ನೆರಳು
ಬರಿದೆ ಭಯವೇಕೆ ನೆರಳಲ್ಲ ಗುಮ್ಮ
ಅದು, ಬಿಡದೆ ಬೆನ್ನಿಗೆ ನಿಂತಿರುವ ಅಮ್ಮ!!

****************************************

ತೊಗಲು ಕಪ್ಪಾದರೂ ಕೊರಳಿನಿಂಪು ಕಪ್ಪಲ್ಲ
ಹಸುವು ಕಪ್ಪಾದರೂ ಹಾಲಿನೊಸಗೆ ಕಪ್ಪಲ್ಲ
ಬಣ್ಣದಲಿ ಏನಿಲ್ಲ, ಅದು ಮಾಯೆ ಮರೆಯದಿರು
ನೆರಳು ಕಪ್ಪಾದರೂ ನೆರಳೀವ ತಂಪು ಕಪ್ಪಲ್ಲ!!

****************************************

✒ ದಿಲೀಪ್ ಹೆಗಡೆ

Sunday, 15 September 2019

ಮುತ್ತುಗಳ ಶುಲ್ಕ..!!

ಸಾಲು ಚುಕ್ಕಿಗಳು ಬಾನಿನೊಳೊಡಮೂಡಿ
ಸಾಲ ಕೇಳುತಿವೆ ನಿನ್ನ ಕಣ್ಣ ಹೊಳಪ..!
ಹಾಲಿ ಪ್ರೇಯಸಿಯ ಮರೆತ ಚಂದಿರ ನೋಡಿ
ಹಾಲ ಬಿಳುಪಿನ ನಿನ್ನ ಮೊಗದ ಝಳಪ..!

ಕುಳಿತು ಜೊತೆಜೊತೆಗೆ ಕಳೆದಿರಲು ಅರೆಘಳಿಗೆ
ಕುಳಿರು ಗಾಳಿಗೆ ಹಾರಿಹುದು ನಿನ್ನ ಕುರುಳು..!
ಕುಳಿಮೂಡೆ ಗಲ್ಲದಲಿ ಕಾದಿಡುವೆ ಕಂಗಳಲಿ..
ಪುಳಕದಿ ಕಾದಿಹೆ ಸರಿಸು ಮುಂಗುರುಳ ಉರುಳು..!

ಬೇಡಿದಾ ಭಯಕೆಗಳು ಬಾಳಿಗೊದಗುವುದಂತೆ
ಬೇಡೆ ನಡೆದಿರೆ ನಭದಿ ಉಲ್ಕಾಪಾತ..!
ಕಾಡಿದಾ ಕ್ಷಣಗಳನು ಮರೆತು ಮನ್ನಿಸು ನನ್ನ
ಬೇಡಿ ಬಂದಿಹೆ ಮುತ್ತುಗಳ ಶುಲ್ಕಸಹಿತ..!!


ಕೀಚಕ ಜೀವಂತ..!!

ಕೀಚಕ ಜೀವಂತ..!
**************

ಅವಳ್ಯಾರದೋ ಕಣ್ಣೋಟದ
ನಶೆಯ ಕವಿತೆಯಾಗಿಸುವ ಹೊತ್ತಿಗೆ
ಮೂರನೇ ಬಾಟಲಿಯ ಕೊನೆಯ
ಪೆಗ್ಗನ್ನು ನೀರಿಲ್ಲದೇ ಗುಟುಕರಿಸಿದ್ದಾನೆ...

ನಿನ್ನೆ ಪರಿಚಯವಾದವಳ ಮಂಚಕ್ಕೆ
ಸೆಳೆದು ಬಿಚ್ಚಮ್ಮಳಾಗಿಸುವ ಹೊತ್ತಿಗೆ
ಸುಖ ಸಂಸಾರಕ್ಕೆ ಸಾವಿರ ಸೂತ್ರಗಳೆಂಬ
ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾನೆ..

"ಯೂ ಆರ್ ಎ ಹೋರ್"
ಎಂದು ಅರಚುವ ಹೊತ್ತಿಗೆ
ತಾನೊಂದು "ಬೀಜದ ಹೋರಿ"
ಎನ್ನುವದ ಮರೆತಿದ್ದಾನೆ...

ಸುಂದರವಾದದ್ದೆಲ್ಲ ತನ್ನದಾಗಿಸುವ
ದುರಾಸೆಯ ದಾವಂತ..
ಬಿಳಿ ಕೂದಲಿಗೆ ಡಾಯ್ ಬಳಿದ
ಮುಖಗಳಲಿ ಕೀಚಕ ಜೀವಂತ...!

Saturday, 23 April 2011

ಮೂರು ಹನಿ...!!

~ ೧ ~ 


ಸ್ವಾರ್ಥಿಗಳ ಲೋಕವಿದು
ಗೆಳೆಯಾ..ಜನರೆದುರು 
ಕಣ್ಣೀರ ಸುರಿಸದಿರು.. ಅದು ತಪ್ಪು...

ಮನದ ಗಾಯಗಳ
ತಪ್ಪಿಯೂ ತೋರದಿರು..
ಎಲ್ಲ ಕೈಯ್ಯಲ್ಲಿ ಹಿಡಿದಿಹರು ಉಪ್ಪು...!!


~ ೨ ~


ಕಾಡದಿರಿ ನೆನಪುಗಳೇ ಇಂದು..
ಜಗದ ಮೆರವಣಿಗೆಯಲಿ
ನಾನು ಸಹ ಒಂದಾಗಿ ಸಾಗ ಬೇಕು

ಜಿನುಗುವಾ ಕಣ್ಣೀರ
ಮರೆಸಿ ನಾ ಮರೆಯಲ್ಲಿ
ಸುಮ್ಮನೆ ಸುಳ್ಳು ನಗೆ ನಗ ಬೇಕು..!



~ ೩ ~


ಬಂಧನದ ಭಯವಿರದೆ
ದಣಿಯದೇ ಕುಣಿಯುತಿಹೆ
ನೋಡಿ ನರ್ತನದಾ ಹೆಜ್ಜೆ..

ಬೆಸೆದು ಬೀಗಿಹನು ಕಾಲ
ಕಾಲ್ಗಳಲಿ ಸರಪಳಿಯ..
ನನಗದುವೆ ಬಣ್ಣದಾ ಗೆಜ್ಜೆ..!!

Saturday, 26 February 2011

ಎರಡು ಹನಿ..!

ವಜ್ರ (ಮುನಿ) Money

ಮಡದಿಗೆ ಕೊಟ್ಟಷ್ಟೂ
ಸಾಲದಂತೆ
ವಜ್ರ ಮತ್ತು Money..
ಪಾಪ..
ಅದಕ್ಕೇ ನಮ್ಮ ರಾಯರು
ಕಚೇರಿಯ ಸಿಬ್ಬಂದಿಗಳ
ಪಾಲಿಗೆ "ವಜ್ರಮುನಿ"..!!


ಮುಟ್ಟಿದರೆ Money

ಮದುವೆಗೆ ಮೊದಲು
ಪ್ರತಿ ಸ್ಪರ್ಶಕೂ ನುಲಿದು ನಲಿದು
ನಾಚಿ ನೀರಾಗುತಿದ್ಲು ಚೆಲುವೆ
ಸಾಕ್ಷಾತ್ ಮುಟ್ಟಿದರೆ ಮುನಿ....!
ಈಗ ಮುಟ್ಟುವದಾದರೆ
ಕೊಡಲೇ ಬೇಕಂತೆ
ಒಂದು ಮೂಟೆ Money..!

Friday, 13 August 2010

ನಾಲ್ಕು ಹನಿಗಳು


ನಿಶೆ ಬಂದು
ನಕ್ಷತ್ರಗಳನೆಲ್ಲ
ನಿನ್ನ ಕಣ್ಣುಗಳಲ್ಲಿ ಬಚ್ಚಿಟ್ಟಿತು
ಪಾಪ..!
ಅಲ್ಲಿ ಆಗಸದಲ್ಲಿ
ಚಂದ್ರ ಏಕಾಂಗಿ


ತುಟಿಯ ತುದಿಗೆ
ನಡೆದು ನಡಿಗೆ
ನಗುವು ಕುಳಿತು ಅತ್ತಿತು

ಬನದಿ ಅರಳಿ
ನಗುವ ಮೊದಲೇ
ಸುಮವು ಮುದುಡಿ ಸತ್ತಿತು


ಚಳಿ ನೀಗಿಸಿದ ಖುಷಿಯಲ್ಲಿ
ಬಿಗಿದು ಅಪ್ಪಲಾದೀತೇ..?
ಬೆಂಕಿ ಸುಡುತ್ತದೆ..

ನೋವ ಮರೆಸಿದ ನೆಪದಲ್ಲಿ
ನಂಟ ಬೆಳೆಸಲಾದೀತೇ..?
ನಶೆ ಕೊಲ್ಲುತ್ತದೆ..!!


ಕೋಟಿ ಮಿಂಚುಳ್ಳಿ
ಮಿನುಗಿದರೂ
ಮೂಡಲಾರದು ಹೊಂಬೆಳಕು

ಇಬ್ಬನಿಯ ಹನಿ
ಎಂದಿಗೂ
ತೊಳೆಯಲಾರದು ಮೈ ಕೊಳಕು




Sunday, 21 June 2009

ಸಬೂಬು..!!

ಗಾಳಿಗೆ ತಂಪು
ಕೋಗಿಲೆಗೆ ದನಿಯ ಇಂಪು...
ಹೂಗಳಿಗೆ ಕಂಪು...
ನದಿಗೆ ಕಲರವ
ಸಾಗರಕೆ ಅಲೆಯ ಸ್ಪರ್ಶ
ಸೂರ್ಯ, ಚಂದ್ರ,
ತಾರೆಗಳಿಗೆಹೊಳಪು...
ನೀನೆ ಕಲಿಸಿರುವೆಯoತೆ...!!
ಅವುಗಳದ್ದು ಒಂದೇ ಪುಕಾರು...
ಗುರುದಕ್ಷಿಣೆ ಸ್ವೀಕರಿಸದೇ
ಬಂದಿರುವೆಯಂತೆ...??
ನಾನೀಗ ಅವುಗಳ ರಾಯಭಾರಿ...
ಸಾವಿರದ ಒಂದು ಮುತ್ತುಗಳನ್ನು
ನಿನಗೆ ಕಾಣಿಕೆಯಾಗಿ ನೀಡಿವೆ....
ಹೇಳು ಚೆಲುವೆ....
ಯಾವಾಗ ಕೊಡಲಿ......??

Tuesday, 19 May 2009

ಹೆಸರಿಡದ ಹನಿಗಳು....!!

ಹಾಗೇ ಹೊಳೆದ ಕೆಲವು ಸಾಲುಗಳು... ಇವುಗಳಿಗೆ ಹೆಸರಿಡುವ ಸಾಹಸ ಮಾಡದೇ ಹಾಗೇ ಪೋಸ್ಟ್ ಮಾಡಿದ್ದೇನೆ... ಓದಿ ಏನನ್ನಿಸಿತು...?? ದಯವಿಟ್ಟು ಹೇಳಿ...

1.

ಅದೇನು ಆತುರ ನಿನಗೆ..??
ನಾನು ಕಣ್ಣು ಮಿಟುಕಿಸುವ ಮೊದಲೇ...
ನನ್ನ ಗಲ್ಲವ ಕಚ್ಛಾಯ್ತು...!!
ಅದೆಷ್ಟು ಗಾಢ ವರ್ಣ
ನಿನ್ನ ಲಿಪ್ ಸ್ಟಿಕ್ನದು..??
ನನಗರಿವಿಲ್ಲದೆಯೇ
ನಾಳಿನ ನ್ಯೂಸ್ ಪೇಪರ್
ಅಚ್ಛಾಯ್ತು.....!!

****************************
2.

ಮಂದಿರದ ಕೇಸರಿ ಪತಾಕೆ....
ಮಸೀದಿಯ ಹಸಿರು ಗೋಡೆ....
ಚರ್ಚಿನ ಬಿಳಿಯ ಬಾಗಿಲು....
ಸೂರ್ಯನುದಯಕ್ಕೆ ಕಾತರಿಸಿವೆ...
ಸೂರ್ಯನ ಬೆಳಕಲ್ಲಿ ಅವುಗಳ
ನೆರಳಿಗೆ ಒಂದೇ ಬಣ್ಣ.....!!

****************************
3.

ನವ ವಧುವಂತೆ
ಸಿಂಗರಿಸಿಕೊಂಡು
ಭೂ ತಾಯಿ
ಮೆರವಣಿಗೆ ಹೊರಟಿದ್ದಾಳೆ...
ಚೆಲುವಿಗೆ
ಮನಸೋತ ತಾರೆಗಳು
ಮೋಡದ ಮರೆಯಲ್ಲಿ ನಿಂತು
ಫೋಟೋ ಕ್ಲಿಕ್ಕಿಸುತ್ತಿವೆ...!!

Wednesday, 22 April 2009

ನಶೆ




ನಶೆಯದೆಷ್ಟು ಚೆಲುವೆ...

ನಿನ್ನ ಕಣ್ಣುಗಳ ರಂಗಿನಲಿ...??

ನೋಡಿ ನಾನಾದೆ ದಂಗು...

ನಿಜ, ಕೇವಲ ಕಣ್ಣುಗಳಲ್ಲ ಅವು...

ನಶೆಯನೀಯೊ ಗಡoಗು...!!

Friday, 10 April 2009

ಪ್ರೀತಿ ಬರಲು...


ಜಾತಿ ಪಂಥ ಅಂದ ಚೆಂದ
ಪ್ರಶ್ನೆಗಿಲ್ಲ ಉತ್ತರ....
ಪ್ರೀತಿ ಬರಲು ಮನದ ಮನೆಗೆ...
ಇರದು ಯಾವ ಅಂತರ...

ಏರಿ ಇಳಿದು ಉರುಳಿ ಹೊರಳಿ....
ಪ್ರೀತಿಯಾಳ ಎತ್ತರ.....
ನಲಿವ ಮನದ ಮಿಡಿತ ತುಡಿತ...
ನಯನ ಭಾಷೆ ಬಿತ್ತರ...

Thursday, 9 April 2009

ನೀ ಬರಲಿಲ್ಲ….!!!




ಕೈಯ್ಯಲ್ಲಿ ಮಲ್ಲಿಗೆ ಮಾಲೆ….,
ಮುದುಡಿ ಹೋದರೂ, ನೀ ಬರಲಿಲ್ಲ….
ಎದೆಯಲ್ಲಿ ಉರಿಯೊ ಜ್ವಾಲೆ….,
ಬತ್ತಿದರೂ ಕಣ್ಣೀರು, ಅದು ಆರಲೇ ಇಲ್ಲ……!!
!

ಹುಟ್ಟು


ನಿನ್ನ
ತೋಳ್ತೆಕ್ಕೆಯಲ್ಲಿ
ಕನಸುಗಳು
ರೆಕ್ಕೆ ಕಟ್ಟುತ್ತವೆ…..
ಕನಸುಗಳಲ್ಲಿ
ಕವನಗಳು
ಹುಟ್ಟುತ್ತವೆ……!!

ಮುತ್ತು...!!



ಚಳಿಯಾಗಿರಲು ಮೈಗೆ..
ಕೊಡುವೆ ಬಿಸಿ ಮುತ್ತು
ಕಹಿಯಾಗಿರಲು ಬಾಳ್ವೆ..
ಕೊಡುವೆ ಸಿಹಿ ಮುತ್ತು
ಒಂದಲ್ಲ.. ಎರಡಲ್ಲ
ಸಾವಿರದ ಹತ್ತು…!!

ಮಂದಿರದ ಘಂಟೆ



ಎಲ್ಲರದ್ದಾಯಿತು ಪ್ರಿಯೆ..
ಇನ್ನು ನಿನ್ನ ಸರದಿ
ಹೊಡೆದು ಹೋಗು ಹೃದಯಕ್ಕೆ..
ನೀ ತೆರೆಯ ತರದಿ..
ಎಲ್ಲ ಹೊಡೆವರು ಎಂದು..
ನಾ ಮಾಡೆ ತ೦ಟೆ..
ಅನಿವಾರ್ಯ ಕರ್ಮವದು ಎನಗೆ..
ನಾ ಮ೦ದಿರದ ಘ೦ಟೆ…!!!




ಸತ್ಯ..!


ಹೋಗುವದಾದರೆ ಹೋಗು
ನೀನಿಲ್ಲದೆಯೂ ಜೀವನ ಸಾಗುತ್ತದೆ….
ಕೂಗುವ ಕೋಳಿಗೆ ಮಸಾಲೆ ಅರೆದಿದ್ದೇನೆ
ಆದರೂ ಪ್ರತಿದಿನ ಬೆಳಗಾಗುತ್ತದೆ….!!!!

ತಪ್ಪು…!



ನಿದ್ದೆ ಮಾಡಿದ್ದು ತಪ್ಪಲ್ಲ
ಕನಸು ಕಂಡಿದ್ದು ತಪ್ಪಲ್ಲ
ಕನಸಲ್ಲಿ ಬಂದಿದ್ದು
ಅವಳ ತಪ್ಪು...

ಹೃದಯಕ್ಕೆ ಕದವಿಲ್ಲ
ಹಿಡಿದಿಡುವ ಹಠವಿಲ್ಲ
ಹೋಗದೆ ಉಳಿದಿದ್ದು
ಅವಳ ತಪ್ಪು...!!