Wednesday 21 July 2010

ಜುಗಲಬಂಧಿ


ಚಿಟಪಟನೆ ಸಾಕ್ಷಿಯಾಗೆ ಮುಂಗಾರಿನ ಮಳೆಹನಿ
ಅರ್ಭಟದಿ ಸಾಥ್ ನೀಡೆ ಆ ಗುಡುಗಿನ ಮಾರ್ಧನಿ
ಅರಿವಾಗದೆ ನಡೆಯಲಿ ಬಿಡು
ನನ್ನ ಕಣ್ಣ ನಿನ್ನ ಕಣ್ಣ ನಡುವೆ ಜುಗಲಬಂಧಿ

ನಡೆವ ಬಾ ಹಿಡಿದು ಕೈಯ್ಯ ಮಳೆಯಲಿ ನಾವ್ ನೆನೆಯುತ
ಮರೆವ ಬಾ ಜಗವ ಜೊತೆಗೆ ಮುತ್ತ ಮಳೆಯ ಸುರಿಸುತ
ಉರಿದು ನಮ್ಮ ಹಳಿದರೇನು
ನನ್ನ ಒಲವ ನಿನ್ನ ಚೆಲುವ ನೋಡಿ ಜಗದ ಮಂದಿ
ನಶೆಗಡಲನು ಕಡೆಯಲಿ ಬಿಡು
ನನ್ನ ಅಧರ ನಿನ್ನ ಅಧರ ನಡೆಸಿ ಜುಗಲಬಂಧಿ

ಬರೆವ ಬಾ ಹೊಸದು ಗೀತೆ ಒಲವ ಉಯ್ಯಾಲೆಯ ಜೀಕುತ
ಕಲಿವ ಬಾ ಹೊಸದು ರಾಗ ನೂರು ವ್ಯಥೆಯ ದೂರ ನೂಕುತ
ಎದೆಯ ವೀಣೆ ತಂತಿ ಮಿಡಿದು
ನನ್ನ ನಿನ್ನ ಹೊಸ ಬಾಳ್ವೆಗೆ ಹಾಡುವ ನಾವ್ ನಾಂದಿ
ಎಡೆಬಿಡದೆ ನಡೆಯಲಿ ಬಿಡು
ನನ್ನುಸಿರಿಗು ನಿನ್ನುಸಿರಿಗು ನಡುವೆ ಜುಗಲಬಂಧಿ

Friday 16 July 2010

ದಿಲ್ ತೋ ಬಚ್ಚಾ ಹೈ ಜಿ..!!


ಹಸಿರು.. ಕೆಂಪು.. ಹಳದಿ... ನೀಲಿ.. ಆಹಾ.. ಕಾಮನ ಬಿಲ್ಲಿನ ಎಲ್ಲ ಬಣ್ಣಗಳೂ ಅದರಲ್ಲಿ ಸೇರಿಕೊಂಡಿತ್ತೋ ಏನೋ...! ನೋಡಿದ ತಕ್ಷಣ ಮನ ಸೂರೆಗೊಂಡುಬಿಟ್ಟಿತ್ತು.. ಹಠ ಮಾಡಿ, ಉಪವಾಸ ಸತ್ಯಾಗೃಹ ಮಾಡಿ, ಕಾಡಿ ಬೇಡಿ, ಏನೇನು ಸಾಧ್ಯವೋ ಎಲ್ಲವನ್ನೂ ಮಾಡಿದ ಮೇಲೆಯೇ ಅಪ್ಪ ಅದನ್ನು ನನಗೆ ಕೊಡಿಸಿದ್ದು... ಅದು ಕೈಗೆ ಸಿಕ್ಕಾಗ ನನಗಾದ ಸಂತಸ ಅಪರಿಮಿತ.. ಅಗಣಿತ.. ಸ್ವರ್ಗವೇ ನನ್ನ ಕೈನಲ್ಲಿ ಎಂಬ ಭ್ರಮೆ ಯಲ್ಲಿ ತೇಲತೊಡಗಿದ್ದೆ..

ಎದೆಗೊತ್ತಿ ಮುದ್ದು ಮಾಡಲು... ಅಮ್ಮ ಬೈದರೆ ದುಃಖ ಹೇಳಿಕೊಳ್ಳಲು... ಖುಷಿಯ ಖಬರ್ ಏನಾದರೂ ಇದ್ರೆ ಹಂಚಿಕೊಳ್ಳಲು.. ಮತ್ತೆ ಕೋಪ ಬಂದ್ರೆ ಎತ್ತಿ ಎಸೆಯಲು ಅದೇ ಬೇಕಿತ್ತು.. ಅದನ್ನ ಎದೆಗಪ್ಪಿ ಮಲಗಿ ಕಂಡ ಕನಸುಗಳಿಗೆ ಲೆಕ್ಕವೇ ಇಲ್ಲ... ಕೀಲಿ ಕೊಟ್ರೆ ಕುಣಿಯುತ್ತಿತ್ತು.. ಅದುಮಿದರೆ ಉಲಿಯುತಿತ್ತು... ನಡೆಯುತ್ತಿತ್ತು.. ಉರುಳುತಿತ್ತು.. ಒಟ್ಟಿನಲ್ಲಿ ಟೋಟಲ್ ಟೈಮ್ ಪಾಸ್..ನನ್ನ ಬಳಿ ಮಾತ್ರ ಇದ್ದಿದ್ರಿಂದ ಗೆಳೆಯರೆದುರು ಗರ್ವ ಪಡ್ತಾ ಇದ್ದೆ.. ಕೊಡೋದಿಲ್ಲ ಅಂತ ಆಟ ಆಡಿಸ್ತಿದ್ದೆ.. ಕೊಟ್ಟು ಹಾಗೇ ಕಸಿದು ಕೊಳ್ತಿದ್ದೆ.. ಅದಕ್ಕಾಗಿ ಗೆಳೆಯರ ಜೊತೆ ಬೇಜಾನ್ ಜಗಳ ಕೂಡ ಆಗಿ ಹೋಗಿತ್ತು ಅನ್ನಿ.. ಆದ್ರೆ ಒಂದಿನ ಆ ಆಟಿಕೆ ಮುರಿದು ಹೋಯ್ತು... ಅತ್ತೆ.. ಕಣ್ಣೀರು ಕಾಲಿಯಾದರೂ ಅತ್ತೆ.. ಅಪ್ಪ ಅಮ್ಮ ಎಷ್ಟು ಹೇಳಿದರೂ, ರಮಿಸಿದರೂ, ಬೈದರೂ ಕೇಳದೇ ಅತ್ತೆ.. ಊಟ ನಿದ್ರೆ ಆಟ ಪಾಠ ಎಲ್ಲ ಮರೆತು ಅತ್ತೆ...

ಸ್ವಲ್ಪ ದಿನದ ನಂತರ ಮನೆಗೆ ಮತ್ತೊಂದು ಹೊಸ ಆಟಿಕೆ ಬಂತು... ಆಹಾ..!! ಕಾಮನ ಬಿಲ್ಲಿನ ಎಲ್ಲ ಬಣ್ಣಗಳೂ ಅದರಲ್ಲಿ ಸೇರಿಕೊಂಡಿತ್ತೋ ಏನೋ...!! ಆಕರ್ಷಕ.. ಮನ ಮೋಹಕ..!!

ಕಾಲ ಯಾರಿಗೂ ನಿಲ್ಲೋದಿಲ್ಲ.. ನಮಗೀಗ "ದೊಡ್ಡವರು" ಅನ್ನೋ ಬೇಡದ, ಬಯಸದ ಪದವಿ ತಾನಾಗೆ ಅಂಟಿಕೊಂಡಿದೆ... ಆದ್ರೇನು ಮಾಡ್ತೀರಿ..?? ದಿಲ್ ತೋ ಅಭೀ ಬಚ್ಚಾ ಹೈ..!! ಕೈನಲ್ಲಿನ ಆಟಿಕೆಗಳು ಮಾತ್ರ ಬದಲಾಗಿವೆ...!!
.
.