Thursday 26 September 2019

ನೆರಳು



ನೆರಳಿನ ಬಗ್ಗೆ ಮೂರು ಚುಟುಕಗಳು

*****************************************

ವಿಷದ ನೆರಳು ವಿಷವನ್ನೆ ಹಡೆವುದು
ಖುಷಿಯ ನೆರಳು ಖುಷಿಯನ್ನೆ ಹೆರುವುದು
ದೋಷ ನೆರಳಿನದಲ್ಲ, ಅದು ಬರಿಯ ಛಾಯೆ
ಶೇಷ ನೆರಳಿನ ಮೂಲ ಆಕೃತಿಯ ಮಾಯೆ!!

****************************************

ನಡೆದರೆ ಜೊತೆ ನಡೆಯುವದು ನೆರಳು
ನಿಂತರೆ ಜೊತೆ ನಿಲ್ಲುವದು ನೆರಳು
ಬರಿದೆ ಭಯವೇಕೆ ನೆರಳಲ್ಲ ಗುಮ್ಮ
ಅದು, ಬಿಡದೆ ಬೆನ್ನಿಗೆ ನಿಂತಿರುವ ಅಮ್ಮ!!

****************************************

ತೊಗಲು ಕಪ್ಪಾದರೂ ಕೊರಳಿನಿಂಪು ಕಪ್ಪಲ್ಲ
ಹಸುವು ಕಪ್ಪಾದರೂ ಹಾಲಿನೊಸಗೆ ಕಪ್ಪಲ್ಲ
ಬಣ್ಣದಲಿ ಏನಿಲ್ಲ, ಅದು ಮಾಯೆ ಮರೆಯದಿರು
ನೆರಳು ಕಪ್ಪಾದರೂ ನೆರಳೀವ ತಂಪು ಕಪ್ಪಲ್ಲ!!

****************************************

✒ ದಿಲೀಪ್ ಹೆಗಡೆ

Sunday 15 September 2019

ಮುತ್ತುಗಳ ಶುಲ್ಕ..!!

ಸಾಲು ಚುಕ್ಕಿಗಳು ಬಾನಿನೊಳೊಡಮೂಡಿ
ಸಾಲ ಕೇಳುತಿವೆ ನಿನ್ನ ಕಣ್ಣ ಹೊಳಪ..!
ಹಾಲಿ ಪ್ರೇಯಸಿಯ ಮರೆತ ಚಂದಿರ ನೋಡಿ
ಹಾಲ ಬಿಳುಪಿನ ನಿನ್ನ ಮೊಗದ ಝಳಪ..!

ಕುಳಿತು ಜೊತೆಜೊತೆಗೆ ಕಳೆದಿರಲು ಅರೆಘಳಿಗೆ
ಕುಳಿರು ಗಾಳಿಗೆ ಹಾರಿಹುದು ನಿನ್ನ ಕುರುಳು..!
ಕುಳಿಮೂಡೆ ಗಲ್ಲದಲಿ ಕಾದಿಡುವೆ ಕಂಗಳಲಿ..
ಪುಳಕದಿ ಕಾದಿಹೆ ಸರಿಸು ಮುಂಗುರುಳ ಉರುಳು..!

ಬೇಡಿದಾ ಭಯಕೆಗಳು ಬಾಳಿಗೊದಗುವುದಂತೆ
ಬೇಡೆ ನಡೆದಿರೆ ನಭದಿ ಉಲ್ಕಾಪಾತ..!
ಕಾಡಿದಾ ಕ್ಷಣಗಳನು ಮರೆತು ಮನ್ನಿಸು ನನ್ನ
ಬೇಡಿ ಬಂದಿಹೆ ಮುತ್ತುಗಳ ಶುಲ್ಕಸಹಿತ..!!


ತೂಗು ಸೇತುವೆ


ತೂಗುಸೇತುವೆ
*--------------------*

ತೀರ ತೀರಗಳನು ಬೆಸೆದು
ದೂರದೂರ ಸನಿಹ ಸೆಳೆದು
ನೀರಮೇಲೆ ದಾರಿ ಬರೆದು
ನಿಂತ ತೂಗುಸೇತುವೆ

ಮೇಲೆ ನಭದಿ ಕೋಟಿತಾರೆ
ಕೆಳಗೆ ಜಲದಿ ಚಂದ್ರಬಿಂಬ
ಮಧ್ಯೆ ನಿಂತ ನಿನ್ನ ನಿಲುವು
ನೋಡಲೇನು ಚಂದವೆ

ಗಾಳಿ ಮಳೆಗೆ ಸೋಲದೇನೆ
ಬಿಸಿಲ ತಾಪಕಳುಕದೇನೆ
ಚಳಿಗೆ ಹೆದರಿ ನಡುಗದೇನೆ
ನಿಂತ ನೀನು ಬಂದುವೆ

ಇಲ್ಲ ನಿನಗೆ ಯಾವ ಸ್ವಾರ್ಥ
ಅರಿಯೆ ಮೇಲು ಕೀಳಿನರ್ಥ
ಸೇವೆಯಲ್ಲಿ ಸದಾ ನಿರತ
ಮನುಜಗೊಲಿದ ದೈವವೆ


~ವರಚುಗಣ್ಣಿನ ಬೀದಿನಾಯಿಯ ಸ್ವಗತ~

ಆ ಮೋಟು ಬಾಲದ ವರಚುಗಣ್ಣಿನ ನಾಯಿ...
ಹುಯ್ಗೆ ದಿಬ್ಬದ ತುತ್ತ ತುದಿಯೇರಿ ಕುಳಿತು
ಹಾದಿಗುಂಟ ನೋಟ ನೆಟ್ಟು..
ಕಳೆದ ಭಾನುವಾರ ಖಾಲಿಯಾದ ಗ್ರೌಂಡು ಫ್ಲೋರಿನ
ಟೂ ಬೀಎಚ್ಕೇ ಮನೆಗೆ ಹೊಸ ಬಾಡಿಗೆದಾರರು ಬರುವುದ ಕಾಯುತ್ತಿದೆ...

"ಮನೆ ಬಾಡಿಗೆಗಿದೆ" ಎಂದು
ಗ್ಯಾಲರಿಗೆ ಬಿಗಿದಿದ್ದ ಬೋರ್ಡು
ಜೋರುಗಾಳಿಗೆ ಹಾರಿ ಹೋಗುವ ಮುನ್ನ
ಬ್ರೋಕರ್ ಬಾಬಣ್ಣ ಮನೆಯೊಡೆಯನ ನಂಬರು
ನೋಟ್ ಮಾಡಿಕೊಂಡಿದ್ದೊಂದು ನೆಮ್ಮದಿ...

ಮತ್ತೆ ಬರುವವರು ಮೊನ್ನೆ ತಾನೇ ಖಾಲಿ ಮಾಡಿದ
ಹೊಸ ಜೋಡಿಯಂತಿದ್ದರೆ ತೊಂದರೆಯಿಲ್ಲ..
ಆ ಹುಡುಗಿಗೋ, ಪ್ರತಿ ಗುರುವಾರ ಬೀದಿಕುನ್ನಿಗಳಿಗೆ
ಬಿಸ್ಕತ್ತು ತಿನ್ನಿಸುವ ತುರ್ತು...
ನನ್ನ ಮೇಲೇನಕ್ಕರೆಯೋ ಕಾಣೆ..
ಬೇರೆ ಕುನ್ನಿಗಳಿಗೆ ಪಾರ್ಲೇ ಜಿ ಯಾದರೆ ನನಗೋ.. ಡಾರ್ಕ್ ಫ್ಯಾಂಟಸಿಯ ಬಕ್ಷೀಸು..
ಆವಾಗಾವಾಗ ನನ್ನ ಜೊತೆ ಸೆಲ್ಫೀ ತೆಗೆದು
ಫೇಸ್ಬುಕ್ಕಿಗೆ ಏರಿಸಿದ್ದೂ ಇದೆ....

ಆಗಷ್ಟು ದಿನ ಇದ್ದನಲ್ಲ..
ಆ ಕುರುಚಲು ಗಡ್ಡದ ಸಾಫ್ಟವೇರ್ ಹುಡುಗ..
ಅವನಂತಿದ್ದರೂ ಸರಿ..
ಪ್ರತೀ ವೀಕೆಂಡ್ ತನ್ನ ಎತ್ತರ ಸೀಟಿನ ಸೂಪರ್ ಬೈಕಿನ ಮೇಲೆ ಹೊಸ ಹೊಸ ಹಕ್ಕಿ ಹತ್ತಿಸಿ ಸುತ್ತಿದರೂ..
ನನ್ನ ಹೊಟ್ಟೆಗೇನೂ ಬರ ಬರಲಿಲ್ಲ..
ಹೋಮ್ ಡಿಲೆವರಿಯ ಡಾಮಿನೋಸ್, ಕೇಎಫ್ ಸೀ ಖಾದ್ಯಗಳಲ್ಲಿ ಪಾಲು ಗಿಟ್ಟದೇ ಇರಲಿಲ್ಲ...

ಮತ್ತಾಗ ಇದ್ದ ಆ ಬ್ರಾಹ್ಮಣರ ಸಂಸಾರ..!
ಸ್ವಲ್ಪ ಕಷ್ಟ... ಆದರೂ ಇಷ್ಟ..
ತಂಗಳು ಸಾರನ್ನ..  ಆಗಾಗ ಚಿತ್ರಾನ್ನ...
ದೇವಸ್ಥಾನದ ಪುಳಿಯೊಗರೆ ಪ್ರಸಾದ..
ಮಡಿಮೈಲಿಗೆಯ ಹೊತ್ತಲ್ಲಿ ಎದುರು ಹಾಯ್ದರಂತೂ ದೊಣ್ಣೆಯೇಟು.. ಕುದಿನೀರಿನ ಸ್ನಾನ...

ನಿನ್ನೆಯಷ್ಟೇ ಆ ಬೀದಿಯ ಹೆಣ್ಣುಕುನ್ನಿಗಾಗಿ ನಡೆದ
ಕದನದಲ್ಲಿ ಮೈತುಂಬ ಗಾಯ ಹೊದ್ದು..
ವರಚುಗಣ್ಣಿನ ಮೋಟುಬಾಲದ ನಾಯಿ ಕಾಯುತ್ತಿದೆ..
ಕಳೆದ ಭಾನುವಾರವಷ್ಟೇ ಖಾಲಿಯಾದ ಗ್ರೌಂಡುಫ್ಲೋರಿನ ಟೂ ಬೀಎಚ್ಕೇ ಮನೆಗೆ ಬರುವ
ಹೊಸ ಬಾಡಿಗೇದಾರರಿಗಾಗಿ..
ಹೊಚ್ಚ ಹೊಸ ಊಟದ ಮೆನುವಿಗಾಗಿ...


ಕೀಚಕ ಜೀವಂತ..!!

ಕೀಚಕ ಜೀವಂತ..!
**************

ಅವಳ್ಯಾರದೋ ಕಣ್ಣೋಟದ
ನಶೆಯ ಕವಿತೆಯಾಗಿಸುವ ಹೊತ್ತಿಗೆ
ಮೂರನೇ ಬಾಟಲಿಯ ಕೊನೆಯ
ಪೆಗ್ಗನ್ನು ನೀರಿಲ್ಲದೇ ಗುಟುಕರಿಸಿದ್ದಾನೆ...

ನಿನ್ನೆ ಪರಿಚಯವಾದವಳ ಮಂಚಕ್ಕೆ
ಸೆಳೆದು ಬಿಚ್ಚಮ್ಮಳಾಗಿಸುವ ಹೊತ್ತಿಗೆ
ಸುಖ ಸಂಸಾರಕ್ಕೆ ಸಾವಿರ ಸೂತ್ರಗಳೆಂಬ
ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾನೆ..

"ಯೂ ಆರ್ ಎ ಹೋರ್"
ಎಂದು ಅರಚುವ ಹೊತ್ತಿಗೆ
ತಾನೊಂದು "ಬೀಜದ ಹೋರಿ"
ಎನ್ನುವದ ಮರೆತಿದ್ದಾನೆ...

ಸುಂದರವಾದದ್ದೆಲ್ಲ ತನ್ನದಾಗಿಸುವ
ದುರಾಸೆಯ ದಾವಂತ..
ಬಿಳಿ ಕೂದಲಿಗೆ ಡಾಯ್ ಬಳಿದ
ಮುಖಗಳಲಿ ಕೀಚಕ ಜೀವಂತ...!

ನೆನಪುಗಳ ಮೂಟೆ






ಬಾರಾ ಪ್ರಿಯಸೋದರ ಜೊತೆ ನಾವು ಪೇರಿಸುವ
ಮನದ ಗೋದಾಮಿನಲಿ ನೆನಪುಗಳ ಮೂಟೆ
ಬಾನ ಎಲ್ಲೆಯ ಮೀರಿ ಜೊತೆ ಸೇರಿ ಏರಿಸುವ
ಒಲವ ಅಡಿಪಾಯದ ಮೇಲೆ ಕನಸುಗಳ ಕೋಟೆ

ಸವೆಸೋಣ ಬಾ ಜೊತೆಗೆ ಕೈಯಲ್ಲಿ ಕೈ ಹಿಡಿದು
ತೋಟದಾಚೆಯ ದಟ್ಟ ಕಾನನದ ಹಾದಿ
ಸವಿಯೋಣ ಬಾ ಜೊತೆಗೆ ಬೆಟ್ಟದಾ ಹಣ್ಣುಗಳ
ಕಾಡುಗಿಡ ಪೊದೆಗಳನು ನಾವು ಜಾಲಾಡಿ

ನೇರಳೆ ನುರುಕಲು ಪರ್ಗೆ ಹುಳಿ ಕೌಳಿಕಾಯಿ
ಪೇರಲೆ ಮುರುಗಲು ಜಂಬೆ ಆಹಾ ನೆಲ್ಲಿಕಾಯಿ
ಸಂಪಿಗೆ ಪನ್ನೇರಲು ಜೊತೆ ಹೊಳೆದಾಸವಾಳ
ಗೇರು ರಂಜಲು ಹುಲಿಗೆ ಮುಳ್ಳಣ್ಣಿನ ಮೇಳ

ಅಜ್ಜಿಯ ಕಥೆ ಕೇಳುತ ಸುಖನಿದಿರೆಗೆ ಜಾರೋಣ
ಅಮ್ಮನ ಮುದ್ದಿಗೆ ಸೋತು ಮಡಿಲನು ಏರೋಣ
ಕದ್ದೊಮ್ಮೆ ನೋಡುವ ಬಾ ಅಜ್ಜನ ಸಂದೂಕ
ಚೌತಿಗೆ ತರುವನು ಅಪ್ಪ ರೀಲಿನ ಬಂದೂಕ

ಹೊಳೆಯಾ ನೀರಲಿ ನಾವು ಈಜುವ ಮೀನಂತೆ
ತೊಳೆಯ ಹಲಸಿನ ಜೊತೆಗೆ ಸಿಹಿಯಾ ಜೇನಂತೆ
ಬರೆದಿಡುವ ಚಂದ್ರಮನಾ ಎಡೆಗೊಂದು ಏಣಿ
ಹರಿಬಿಡುವ ಮಳೆ ನೀರಿನಲಿ ಕಾಗದದ ದೋಣಿ

ಆಗಸದಿ ಹಾರಿಸುವ ಬಾರೋ ಬಣ್ಣದ ಗಾಳಿಪಟ
ಜೊತೆಜೊತೆಗೆ ಕಲಿಯೋಣ ಖುಷಿ ಜೀವನದ ಪಾಠ
ಎಂದೆಂದಿಗೂ ಚಿರವಾಗಲಿ ನಮ್ಮಯ ಈ ಪ್ರೀತಿ
ನಾ ನಿನಗೆ ನೀ ನನಗೆ ಇರೆ ಇನ್ಯಾರ ಭೀತಿ.?

ಬಾರಾ ಪ್ರಿಯಸೋದರ ಜೊತೆ ನಾವು ಪೇರಿಸುವ
ಮನದ ಗೋದಾಮಿನಲಿ ನೆನಪುಗಳ ಮೂಟೆ
ನಗುವ ತೋಟದ ಚೆಲುವ ಕುಡಿಗಳು ನಾವು
ಕಟ್ಟೋಣ ಜೊತೆ ಸೇರಿ ಕನಸುಗಳ ಕೋಟೆ

Thursday 12 September 2019

ವಯೋಧರ್ಮ



ಬಾಗಿಬಳಲಿದ ದೇಹ 
ಸುರುಟಿದೊಣ ಚರ್ಮ...
ಮಸುಪು ಕಣ್ಣಿನ ನೋಟ
ತೊದಲು ವಯೋಧರ್ಮ!

ಮಂದ ಕಿವಿಯಾಲಿಕೆಯು
ಕಂಪಿಸುವ ಕೈಯಿ...
ಕೃತಕ‌ದಂತದ ಕವಚ
ಠಂಕಿಸಿದ ಬಾಯಿ!

ಮಾಗಿದೆನ್ನಯ ಬಾಳು
ಪರಿಪೂರ್ಣ ಗ್ರಂಥ
ಕನ್ನಡಿಯ ಹೊರಗಿನ್ನೂ
ನಾನು ಜೀವಂತ!

ಹಾಲುಬಿಳುಪಿನ ದೇಹ
ಹೊಳೆವ ಮೈಕಾಂತಿ..
ಮೊನಚುಗಣ್ಣಿನ ನೋಟ
ಮಾತಿನಲಿ ಛಾತಿ!

ಮಿನುಗುಮುತ್ತಿನ ದಂತ
ಅಪ್ಸರೆಯ ಉಡುಗೆ..
ನವಿಲನಾಟ್ಯಕು ಚಂದ
ಮೇನಕೆಯ ನಡುಗೆ!

ಬಾಳಪುಟಗಳ ಬರೆವ
ಆಸೆ ದಾವಂತ..
ಕನ್ನಡಿಯ ಒಳಗಿನ್ನೂ
ನಾನು ಶ್ರೀಮಂತ..!!

ಗೆಳೆತನ







ಬಯಸೆ ನಾನು ಎಂದಿಗು 
ದೊಡ್ಡ ಜನರ ಗೆಳೆತನ...
ಅಳತೆಗೋಲು ಆಗದು 
ಸ್ನೇಹಕ್ಕೆ ಪದವಿ ಸಿರಿತನ..
ಬೊಗಸೆಯೊಡ್ಡಿ ಬೇಡುವೆ 
ಹರಸು ದೇವ ಅನುದಿನ..
ಸ್ನೇಹಿತರ ಬಾಳು ಬೆಳಗಲಿ,
ಸಿಗಲಿ ಕೀರ್ತಿ ಹಿರಿತನ..

ನೋವ ಮರೆಸಿ ನಲಿವ ಬಲವ
ಸ್ನೇಹ ತುಂಬಿ ಕೊಡುವುದು...
ಸೋಲಿನಲ್ಲು ಗೆಲುವ ಛಲವ
ಸ್ನೇಹ ಹೊತ್ತು ತರುವುದು...
ಶುದ್ದ ಸ್ನೇಹವಿರುವ ಕಡೆಗೆ
ಸ್ವಾರ್ಥವೆಂದು ಸುಳಿಯದು...
ಉಸಿರು ಇರುವವರೆಗು ಜೊತೆಗೆ
ಸ್ನೇಹವೊಂದೆ ಉಳಿವುದು...

ಜಾತಿಮತ ಮೇಲುಕೀಳು
ಸ್ನೇಹವೆಂದೂ ಕೇಳದು..
ಊರುಕೇರಿ ವೇಷಭಾಷೆ
ಸ್ನೇಹಕೆಂದೂ ಕಾಣದು...
ಅಸೂಯೆಈರ್ಷ್ಯೆ ಭೇದಭಾವ
ಸ್ನೇಹವೆಂದೂ ತೋರದು..
ಹೊನ್ನುಮಣ್ಣು ಆಸ್ತಿಪಾಸ್ತಿ
ಸ್ನೇಹವೆಂದೂ ಬೇಡದು...

ನೂರು ಕಹಿಯ ಮರೆಸುವಂತ
ಸ್ನೇಹಶಕ್ತಿ ಅದ್ಬುತ..
ಸಾವಗೆಲುವ ಶಕ್ತಿಯೀವ
ಸ್ನೇಹವೊಂದು ಅಮೃತ..
ಭೂಮಿಬಾನ ನಡುವ ಬಂಧ
ಸ್ನೇಹದಿಂದ ಪ್ರೇರಿತ...
ನಾಲ್ಕು ದಿನದ ಬಾಳಿನಲ್ಲಿ
ಸ್ನೇಹವೊಂದೆ ಶಾಶ್ವತ..

ಕ್ಷಣದ ಕೋಪ


ಹರಿದ ಹಾಳೆ, ಒಡೆದ ಗಾಜು 
ಮರಳಿ ಒಂದುಗೂಡದು
ಕ್ಷಣದ ಕೋಪದಿಂದ ಮುರಿದ 
ಮನಸು ಮತ್ತೆ ಸೇರದು..!

ಹರಿವ ಹೊಳೆ ಪ್ರವಾಹವಾಗೆ 
ಬಾಳಿಗಿಹುದೆ ಆಸರೆ...?
ಸಿಟ್ಟ ನೆರೆಗೆ ಕೊಚ್ಚಿಹೋದ
ಪ್ರೀತಿ ತಿರುಗಿ ಬಾರದು..!

ಹರಿತ ಮಾತು, ಮುನಿಸ ಮೌನ 
ಈಟಿಯಂತೆ ಇರಿಯಲು
ಕೋಪ ಕೊರೆದ ಮನದಗಾಯ
ಸಹಜವಾಗಿ ಆರದು..!

ಪ್ರೀತಿ ಜನರ ನಡುವೆ ಕೆಸರ
ಎರಚೆ ಕ್ಷಣದ ಕೋಪವು
ಕೆಡುವ ನಂಟು ಕೊಚ್ಚೆಯಂತೆ 
ಅಪ್ಪಿಕೊಳಲು ಆಗದು..!

ಕೃತಜ್ಞತೆ!



ತೆರೆಯಮರೆಯಲಿ
ತರಳುತರುವಿನತೆರದಿ
ಪೊರೆವ ಜನನಿಯ ಋಣವ
ತೆರಲಿಹುದೆ ಎಣೆಯು

ಗುರಿಯನರುಹಿದ
ಗುರುಹಿರಿಯರನವರತ
ಗುರುತಿನಲಿ ನಮಿಸುವದು
ಗುರುತರದ ಹೊಣೆಯು

ಉಮೆಯ ಒಡೆಯನ
ರಮೆಯ ರಮಣನ ಹರಕೆ
ವಿಮೆಯಿರಲು ಇರುವಿನಲಿ
ರಮ ಮನದ ಮನೆಯು

ಅವನಿಯುಸಿರನು
ನೆವವಿರದೆ ನೆರವಿಗಿಡೆ
ನವಿರು ಬದುಕಿನ ಪಥವು
ಬವಣೆಗಳ ಕೊನೆಯು

ಅರಿಯದನುದಿನ
ಇರಿವ ನುಡಿಯನು ನುಡಿವ
ಅರಿಗಳಿಗೊಳಿತಿನೊಸಗೆ
ಹರಸುವದೆ ಕಣೆಯು



ತರಳುತರು = ತೆಂಗಿನಮರ, ಕಲ್ಪ ವೃಕ್ಷ
ಒಸಗೆ = ಉಡುಗೊರೆ
ರಮ = ಸಂತೋಷದಾಯಕವಾದುದು
ಕಣೆ = ಬಾಣ ( ಇಲ್ಲಿ ಪ್ರತೀಕಾರ ಎಂಬ ಅರ್ಥದಲ್ಲಿ ಬಳಸಿದ್ದೇನೆ)