Wednesday 22 July 2009

ಮಾತನಾಡುವ ಕಣ್ಣುಗಳು...!!

ಅಂದ ಸುಗಂಧ ಹೂಗಳ ಭಾಷೆ...
ಜುಳು-ಜುಳು ಕಲರವ ನದಿಗಳ ಭಾಷೆ...

ಮುಚ್ಚಿ ತೆರೆದರೆ ಉಷೆ...
ತೆರೆದು ಮುಚ್ಚಿದರೆ ನಿಶೆ...
ಅತಿ ಶೀತಲ.. ಅತಿ ಕೋಮಲ...


ನೋಡಿ ತಣಿವುದು ತೃಷೆ...
ಮತ್ತೆ ಮತ್ತೇರಿ ನಶೆ...
ಅವು ಮಾದಕ... ಸಂವಾಹಕ....


ಕಣ್ಣ ನೋಟದಲೆ ಕವಿತೆ..
ನೋಟದಾಟದಲೆ ಚರಿತೆ...
ಅತಿ ರೋಚಕ.. ಮನ ಮೋಹಕ...


ಹೌದು ಚೆಲುವೆ....
ನಿನ್ನ ನಯನಗಳೂ ಮಾತನಾಡುತ್ತವೆ...
ಆದರೆ, ಯಾವುದು ಅವುಗಳ ಭಾಷೆ...??
ನಾನೇನು ಮಹಾ...
ಅರಿಯದೇ ಕುಳಿತಿರುವನಂತೆ ಸ್ವತಃ ಬ್ರಹ್ಮ..
ಹೋಲಿಕೆಗೆ ನಿಂತರೆ ಪ್ರತಿ ಶಬ್ದವೂ ಕ್ಲಿಶೆ...

Saturday 18 July 2009

ಪ್ರೇಮಿಯೋ...?? ಪರಿಸರ ಪ್ರೇಮಿಯೋ..??

ಇಲ್ಲೊಬ್ಬ ವಿಚಿತ್ರ ಪ್ರೇಮಿಯಿದ್ದಾನೆ... ಬರೀ ಪ್ರೇಮಿ ಮಾತ್ರವಲ್ಲ... ಪರಿಸರ ಪ್ರೇಮಿಯೂ ಹೌದಂತೆ...!! ಪ್ರೇಯಸಿಯ ಮೇಲೆ ತನಗಿರೋ ಪ್ರೀತಿಯ ಅಗಾಧತೆ ಎಷ್ಟೆಂದು ವ್ಯಕ್ತಪಡಿಸಿದಂತೆಯೂ ಆಯ್ತು, ಜನರಿಗೆ ಕಾಗದ ಮತ್ತು ವಿದ್ಯುತ್ ಮಿತವಾಗಿ ಬಳಸಿ ಅಂತ ಸಂದೇಶ ಕೊಟ್ಟ ಹಾಗೆಯೂ ಆಯ್ತು ಅಂತ ಒಂದು ಕವಿತೆ ಬರೆದಿದ್ದಾನೆ... ನಿಮಗೆ ಹೇಗನ್ನಿಸಿತು.....?? ಹೇಳ್ತೀರಾ ಅಲ್ವಾ...??

ದೂರದೂರಿನ ಗೆಳತಿ...
ಮನದ ಭಾವನೆಗಳನೆಲ್ಲ
ನಿನ್ನಲ್ಲಿ ಹೇಳಿಕೊಳ್ಳುವ ಆಸೆ...
ಆದರೆ
, ಪತ್ರ ಬರಿಯೆಂದು

ಮಾತ್ರ ನೀ ಹಠ ಮಾಡಬೇಡ...
ಭೂಮಿ ಮೇಲಿನ...
ಮುಕ್ಕಾಲು
ಪಾಲು ಮರಗಳು...

ಖಾಲಿಯಾದಾವು....!!

ಮಿಂಚು
ಕಂಗಳ ಒಡತಿ...

ನಿನ್ನೊಲುಮೆಯಿಂದಲೇ

ಬಾಳು
ಬೆಳಗಿ
ಮರೆಯಾಗುತಿರೆ ನಿಶೆ...
ಮತ್ತೆ
, ದೀಪ ಬೆಳಗೆಂದು
ಮಾತ್ರ ನೀ ಗೋಗರೆಯಬೇಡ...
ಕಣಿವೆ
ಕಾನನಗಳಲಿ

ಹರಿಯೊ
ನದಿ ನೀರೆಲ್ಲ

ಬತ್ತಿ
ಹೋದಾವು...!!

Thursday 16 July 2009

ಕಾವಿ.... ಖಾದಿ....!!

"ಮಂಗನಿಂದ ಮಾನವ..."
ಅಂದನಂತೆ..
ಸೈಂಟಿಸ್ಟ್ ಡಾರ್ವಿನ್ನ...
ಆದರೆ ಇದು ಉಲ್ಟಾ
ಅಂತ ಅನ್ಸುತ್ತೆ...
ನೋಡ್ದಾಗ...
ಕಾವಿ ಖಾದೀನಾ...!!

ಪ್ರೀತಿಯ ಲೆಕ್ಕಾಚಾರ...!!

ಅಧರ ಅಧರಗಳ
ಮಧುರ "ಸಂಕಲನ"...
ಸಮಕ್ಷಮ..ಸಮಾಗಮ
ವ್ಯಥೆಯ "ವ್ಯವಕಲನ"
ಮುತ್ತು ಗುಣಿಲೆ ಹತ್ತು..
ನಿಲ್ಲದ "ಗುಣಾಕಾರ"
ಮತ್ತು ಬಾಗಿಲೆ ಹೊತ್ತು
ಗೆಲ್ಲದ "ಭಾಗಾಕಾರ"...
ನಿನ್ನಲ್ಲಿ ನನ್ನ
ಕೂಡಿ-ಕಳೆದು..
ಗುಣಿಸಿ - ಭಾಗಿಸಿದರೂ..
ಉಳಿದಿದ್ದು..
ಒಂದೇ ಉಸಿರು…
ಒಂದೇ ಕನಸು…
ಒಂದೇ ಪ್ರಾಣ…

ಬಲು ವಿಚಿತ್ರ..
ಪ್ರೀತಿಯ ಲೆಕ್ಕಾಚಾರ

Monday 13 July 2009

ಅಣಕು ಶಾಯರಿ... ಕನ್ನಡದಲ್ಲಿ...

1.

ವೈಯ್ಯಾರಿ ನಿನ್ನ ಮೈಮಾಟ...
ಮಧುರಸ ಭರಿತ ಬಿಂದಿಗೆ..
ವ್ಹಾ... ವ್ಹಾ..
ವೈಯ್ಯಾರಿ ನಿನ್ನ ಮೈಮಾಟ...
ಮಧುರಸ ಭರಿತ ಬಿಂದಿಗೆ..
ವ್ಹಾ... ವ್ಹಾ..
ಹುಣ್ಣಿಮೆ ಕಳೆದ ಮೇಲೆ...
ಪಾಡ್ಯ ಬಿದಿಗೆ ತದಿಗೆ...!!

2.

ಆಹಾ..!! ನಿನ್ನ ಚೆಲುವ ವದನ..
ನೋಡಿದರೆ ಸಾಕು... ಎದೆಯ ಬಡಿತ
ಏರುತ್ತದೆ....
ವ್ಹಾ... ವ್ಹಾ...
ಆಹಾ..!! ನಿನ್ನ ಚೆಲುವ ವದನ..
ನೋಡಿದರೆ ಸಾಕು... ಎದೆಯ ಬಡಿತ
ಏರುತ್ತದೆ....
ವ್ಹಾ... ವ್ಹಾ...
ಬಳಸುವ ಸೌಂದರ್ಯ ವರ್ಧಕಗಳ
ಪಟ್ಟಿ ಮಾತ್ರ ಕೊಡಬೇಡ...
ನನ್ನ ಹೃದಯ ಬಡಿತ ನಿಲ್ಲುತ್ತದೆ....!!

3.

ಹೇಳು ಪ್ರಿಯೆ...
ಕನಸಿನಲ್ಲಿ ಬರುವೆನೆಂದು
ನೀನು ಹೇಳಿದ್ದು ಏಕೆ...??
ವ್ಹಾ.. ವ್ಹಾ....
ಹೇಳು ಪ್ರಿಯೆ...
ಕನಸಿನಲ್ಲಿ ಬರುವೆನೆಂದು
ನೀನು ಹೇಳಿದ್ದು ಏಕೆ...??
ವ್ಹಾ.. ವ್ಹಾ....
ಅಕ್ಕ ಪಕ್ಕದ ಮನೆಗೂ ಕೇಳ್ತಿದೆಯಂತೆ...
ನನ್ನ ಅಬ್ಬರದ ಗೊರಕೆ...!!

4.

ಮಿಂಚಾಗಿ ನೀನು ಬರಲು...
ನಿಂತಲ್ಲಿಯೇ ಮಳೆಗಾಲ...
ವ್ಹಾ... ವ್ಹಾ..
ಮಿಂಚಾಗಿ ನೀನು ಬರಲು...
ನಿಂತಲ್ಲಿಯೇ ಮಳೆಗಾಲ...
ವ್ಹಾ... ವ್ಹಾ..
ನೀರು ನಿಂತಲ್ಲಿಯೇ ನಿಂತರೆ..
ಸೊಳ್ಳೇಗಾಲ...ಸೊಳ್ಳೇಗಾಲ...ಸೊಳ್ಳೇಗಾಲ...

5.

ಹುಡುಗಾ... ಕೈ ಮುಗಿದು ಬೇಡುತ್ತೇನೆ...
ಬರಬೇಡ ನಮ್ಮ ಬೀದಿಗೆ..
ಹುಡುಗಿಯರೆಲ್ಲ ಮೂರ್ಛೆ ಹೋಗುತ್ತಾರೆ..
ಹುಡುಗಾ... ಕೈ ಮುಗಿದು ಬೇಡುತ್ತೇನೆ...
ಬರಬೇಡ ನಮ್ಮ ಬೀದಿಗೆ..
ಹುಡುಗಿಯರೆಲ್ಲ ಮೂರ್ಛೆ ಹೋಗುತ್ತಾರೆ..
ಕೋಪ ಮಾಡ್ಕೊಳಲ್ಲಾ ಅಂದ್ರೆ ಒಂದು ಮಾತು..
ಮುಚ್ಚಿಡದೆ ಕೇಳುತ್ತೇನೆ...
ಹೌದೂ.. ನೀನು ಸ್ನಾನ ಮಾಡ್ದೇ ಎಷ್ಟು ದಿನಾ ಆಯ್ತು..??


ಹಿಂದಿಯಲ್ಲಿ ಅಣಕು ಶಾಯರಿಗಳು ಜನಪ್ರಿಯ... ಗಂಭೀರ ಶಾಯರಿಗಳು ಮನಸ್ಸಿಗೆ ಹತ್ತಿರವಾಗಿ ಸದಾಕಾಲ ನೆನಪಿನಲ್ಲಿ ಉಳಿದರೆ, ಈ ಅಣಕು ಶಾಯರಿಗಳು ತಕ್ಷಣಕ್ಕೆ ನಗೆ ಚಿಮ್ಮಿಸಿ ಮನಸ್ಸಿಗೆ ಆಹ್ಲಾದ ನೀಡುತ್ತವೆ... ಕನ್ನಡದಲ್ಲೂ ಬರೆಯಲು ಪ್ರಯತ್ನ ಮಾಡಿದೆ.. ಈ ಮೇಲಿನವು ಹುಟ್ಟಿಕೊಂಡವು... ಇಷ್ಟವಾಯ್ತಾ...?? ದಯವಿಟ್ಟು ಹೇಳಿ....

ಕಾರ್ಟೂನ್ ಕಾರ್ನರ್

ಕಾರ್ಟೂನ್ ಕಾರ್ನರ್

ಕಾರ್ಟೂನ್ ಕಾರ್ನರ್

"ರಸ್ತೆಯ ಪಕ್ಕದಲ್ಲಿ ಮನೆ ಅಂತ ಇದೆ ಅಡ್ರೆಸ್ ನಲ್ಲಿ...
ಆದ್ರೆ ಇಲ್ಲಿ ರಸ್ತೆ ಎಲ್ರಿ ಇದೆ...???"

ಕಾರ್ಟೂನ್ ಕಾರ್ನರ್

ಕಾರ್ಟೂನ್ ಕಾರ್ನರ್

ಕಾರ್ಟೂನ್ ಕಾರ್ನರ್

Sunday 12 July 2009

ಕೊಡಬಲ್ಲೆಯಾ ಉತ್ತರ...???

ಉರಿವ ಎದೆಯಲಿ ಸಾವಿರ ಪ್ರಶ್ನೆ..
ಕಿವಿಯನು ತೆರೆದು ನೀ ಕೇಳಿಬಿಡು...
ಇನ್ನು ತಡೆಯೆ ನಾ ನಿನ್ನನು ಗೆಳತಿ..
ಹೋಗುವ ಮುನ್ನ ನೀ ಹೇಳಿಬಿಡು...

ಎದೆಯಂಗಳದಿ ನೂರು ಚುಕ್ಕಿಗಳನಿಟ್ಟು..
ರಂಗೋಲಿಯ ಮರೆತೆ ನೀ ಏಕೆ...??
ಬಾಳ ನೌಕೆಯ ಪ್ರೇಮ ಸಾಗರಕೆಳೆದು...
ಹುಟ್ಟನು ಕಸಿದೆ ನೀ ಏಕೆ...??
|| ಉರಿವ ಎದೆಯಲಿ ||

ಹೂದೋಟದಲಿ ನೀ ಹೂಗಳ ಚುಂಬಿಸಿ..
ಬೇರನೆ ಕಿತ್ತ ಪರಿಯದೇನು..??
ಮೂಖ ಹೃದಯಕೆ ಮಾತನು ಕಲಿಸಿ...
ನಾಲಿಗೆಯನೆ ಹರಿದೆ ಸರಿಯೇನು...??
|| ಉರಿವ ಎದೆಯಲಿ ||

ಹಣತೆಯ ಬೆಳಗಿಸಿ ನೀರನು ಸುರಿದೆ..
ಇನ್ನೆಲ್ಲಿ ಹುಡುಕಲಿ ನಾ ಬೆಳಕು...??
ನನ್ನ ಕವಿತೆಗಳ ಪದಗಳ ಕಸಿದೆ...
ಇನ್ನೆಲ್ಲಿಂದ ತರಲಿ ನಾ ಸರಕು...??
|| ಉರಿವ ಎದೆಯಲಿ ||

Thursday 9 July 2009

ಹೀಗೊಂದು ಸಂಜೆ

ಅವಳೆದೆಯೊಳಗಡಿಯಿಡೊ ಘಳಿಗೆ...
ಬರ ಹೇಳಿಹೆ ತುಂತುರು ಮಳೆಗೆ..
ತೆರೆದಿರುವೆನು ಮುತ್ತಿನ ಮಳಿಗೆ..
ಬಂದರೆ ಕ್ಷಣ ಕ್ಷಣವೂ ರಸದೀವಳಿಗೆ...

ನೀ ತೋರದಿರೂ ಇಂದವಸರ...
ಮರೆಯಾಗದೆ ನಿಲ್ಲು ಓ ನೇಸರ...
ಬರಿ ಬಾನೆoದರೆ ಬಲು ಬೇಸರ..
ಮಳೆ ಬಿಲ್ಲಿಗೆ ಕೊಡು ತುಸು ಉಸಿರ...

ತಂಗಾಳಿಯೆ ಬೀಸು ನೀ ಮೆಲ್ಲ..
ಮುಂಗುರುಳ ನರ್ತನಕೆ ಬರಿ ಸೊಲ್ಲ..
ನಾಚಿ ಕೆಂಪಿಡುತಿರೆ ಸಖಿ ಗಲ್ಲ..
ಕದ್ದು ಮುತ್ತಿಡುವೆ ನಾ ಕಳ್ಳ...