Monday, 21 September 2009

ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೧


ಊರಿಗೆ ಹೋಗಲೇ ಬೇಕಿತ್ತು... ಕಳೆದ ಮೂರು ನಾಲ್ಕು ವರ್ಷಗಳಿಂದ ಗಣೇಶ ಚತುರ್ಥಿ ಗೆ ಊರಿಗೆ ಹೋಗಿರಲಿಲ್ಲ... ನಮ್ಮ ಉತ್ತರ ಕನ್ನಡದ ಮಂದಿಗೆ ಗಣೇಶ ಚತುರ್ಥಿಯೆಂದರೆ ಅದೇನೋ ಸಡಗರ, ಸಂಭ್ರಮ... ದೀಪಾವಳಿ, ನವರಾತ್ರಿ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪ್ರಥಮ ಪೂಜಿತ ಗಣೇಶನ ಹಬ್ಬಕ್ಕೆ... ಆದರೆ ಕಳೆದ ಕೆಲವು ವರ್ಷಗಳಿಂದ ನನ್ನ ಉದ್ಯೋಗ ಈ ಸಡಗರ ಸಂಭ್ರಮ ಗಳಿಂದ ನನ್ನನ್ನು ದೂರ ಮಾಡಿತ್ತು..

ಆದರೆ ಈ ಬಾರಿ ತಪ್ಪದೇ ಹಬ್ಬಕ್ಕೆ ಊರಿಗೆ ಹೋಗಲೇ ಬೇಕೆಂದು ಗಟ್ಟಿ ಮನಸ್ಸು ಮಾಡಿದ್ದೆ... ನನ್ನ ಬಾಸ್ ಗೆ ರಜೆಯ ಮನವಿಯನ್ನೂ ಸಲ್ಲಿಸಿದ್ದಾಯ್ತು.. ಮಹಾಶಯ ಕೇಳಬೇಕಲ್ಲ.. ಸತಾಯಿಸಿ ಸತಾಯಿಸಿ ಕೊನೇ ಕ್ಷಣದಲ್ಲಿ ರಜೆ sanction ಆಯ್ತು... ಆದರೆ ಟಿಕೆಟ್..? ಸುಗಮ, VRL, KSRTC ಸೇರಿದಂತೆ ಎಲ್ಲ ಬಸ್ಸುಗಳೂ ೧೫ ದಿನಗಳ ಮುಂಚೆಯೇ ಭರ್ತಿಯಾಗಿದ್ದವಂತೆ...

ಇನ್ನೇನು ಮಾಡುವದು ಎನ್ನುವ ಯೋಚನೆಯಲ್ಲಿರುವಾಗಲೇ ನನ್ನ ಕೊಲೀಗ್ ಒಬ್ಬ ಸಹಾಯಕ್ಕೆ ಬಂದ.. ಅವನ ಊರು ಧಾರವಾಡ... ಶತಾಬ್ದಿ ಟ್ರೈನ್ ನಲ್ಲಿ ಹೋಗೋಣ.. ಟಿಕೆಟ್ ನ ಜವಾಬ್ದಾರಿ ನನಗೆ ಬಿಡಿ.. ಹಾವೇರಿಯಲ್ಲಿ ಇಳಿದುಕೊಂಡ್ರೆ ನಿಮ್ಮ ಊರಿಗೆ ಬೇಕಾದಷ್ಟು ಬಸ್ ಸಿಗುತ್ತವೆ.. ಮಧ್ಯಾಹ್ನ ೧.೩೦ - ೨ ಗಂಟೆಯೊಳಗೆ ನೀವು ಮನೆ ತಲುಪಬಹುದು ಅಂತ ಹೆಳಿದ... ಅವನ ಸಲಹೆ ನನಗೂ ಇಷ್ಟವಾಯ್ತು... ಆಯ್ತು ಮಾರಾಯ.. ನನಗೂ ಒಂದು ಟಿಕೆಟ್ ಮಾಡಿಸು ಅಂತ ಹೇಳಿದ್ದಾಯ್ತು..

ಕೊನೇ ಕ್ಷಣದಲ್ಲಿ ಟಿಕೆಟ್ ಮಾಡಿಸಿದ್ದರಿಂದ ಇಬ್ಬರಿಗೂ ಬೇರೆ ಬೇರೆ ಕಡೆ ಸೀಟ್ ಸಿಕ್ಕಿತ್ತು... ಒಂದೇ ಬೋಗಿಯಲ್ಲಿ ಸಿಕ್ಕಿದ್ದು ನಮ್ಮ ಅದೃಷ್ಟ..! ಕೊನೆಗೂ ಅಕ್ಕ ಪಕ್ಕ ಕುಳಿತವರೊಡನೆ ಹೊಂದಾಣಿಕೆ ಮಾಡಿಕೊಂಡು ಒಂದೇ ಕಡೆ ಕುಳಿತೆವು... ಬೆಳಿಗ್ಗೆ ಆಫೀಸ್ ನಿಂದ ಹಾಗೆ ಹೊರಟಿದ್ದರೂ ನಿದ್ದೆ ಬರುವ ಯಾವ ಲಕ್ಷಣವೂ ಕಾಣಿಸುತ್ತಿರಲಿಲ್ಲ... ಅದೂ ಇದು ಮಾತಾಡುತ್ತ, ಬೇಸರ ಬಂದರೆ ಟ್ರೈನ್ ನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ತಿರುಗುತ್ತ ಸಮಯ ಹೋದದ್ದೇ ತಿಳಿಯಲಿಲ್ಲ...

ಇಡ್ಲಿ ವಡೆ ತಿಂದು ಹೊಟ್ಟೆಯನ್ನು ಸ್ವಲ್ಪ ತಣ್ಣಗಾಗಿಸಿ ಚಹಾ ಕುಡಿಯುತ್ತಾ ಕುಳಿತೆವು.. ಅಷ್ಟರಲ್ಲಿ ನಾವಿದ್ದ ಬೋಗಿಯಲ್ಲಿ TC ಯ ಪ್ರವೇಶವಾಯ್ತು... TC ಹತ್ತಿರ ಬರುತ್ತಲೇ ನನ್ನ ಕೊಲೀಗ್ ಬ್ಯಾಗ್ನಿಂದ ಟಿಕೆಟ್ ಹೊರ ತೆಗೆದ... ಆನ್‌ಲೈನ್ ಬುಕ್ ಮಾಡಿಸಿದ್ದ ಎರಡು ಪ್ರತ್ಯೇಕ ಟಿಕೆಟ್ಟುಗಳು... ಒಂದು ನನ್ನದು... ಹಾವೇರಿ ವರೆಗಿನದ್ದು... ಇನ್ನೊಂದು ಅವನದ್ದು.. ಧಾರವಾಡ ವರೆಗಿನದು...ಅಲ್ಲಿಯವರೆಗೂ ನಾನು ಟಿಕೆಟ್ ನೋಡಿರಲಿಲ್ಲ....

TC ಕೊಲೀಗ್ ಬಳಿ ಐಡೆಂಟಿಟೀ ಪ್ರೂಫ್ ಕೇಳಿದ... ಅವ ತನ್ನ ಬಳಿಯಿದ್ದ ಡ್ರೈವಿಂಗ್ ಲೈಸೆನ್ಸ್ ತೆಗೆದು ತೋರಿಸಿದ.. ಈಗ ನನ್ನ ಸರದಿ.. TC ನನ್ನ ಬಳಿಯೂ ಐಡೆಂಟಿಟೀ ಪ್ರೂಫ್ ಕೇಳಿದ.. ನನ್ನ ಬಳಿ ನನ್ನ ಆಫೀಸ್ ಐಡೆಂಟಿಟೀ ಕಾರ್ಡ್ ಬಿಟ್ಟರೆ ಮತ್ತೇನು ಇರಲಿಲ್ಲ... ಟಿಕೆಟ್ ಮೇಲಿನ ಸೂಚನೆಗಳ ಪ್ರಕಾರ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಎಲೆಕ್ಶನ್ ವೋಟರ್ ಐಡೆಂಟಿಟೀ ಕಾರ್ಡ್ ಅಥವಾ ಸರ್ಕಾರ ಅನುಮೋದಿಸಿರುವ ಇತರ ಯಾವುದೇ ಐಡೆಂಟಿಟೀ ಕಾರ್ಡ್ ಗಳಲ್ಲಿ ಯಾವುದಾದರೂ ಒಂದನ್ನು TC ಕೇಳಿದಾಗ ತೋರಿಸಲೇ ಬೇಕಿತ್ತು.. ಇಂಟರ್‌ನೆಟ್ ಮೂಲಕ ಟಿಕೆಟ್ ಬುಕ್ ಮಾಡಿಸಿದವರಿಗೆ ಮಾತ್ರ ಈ ನಿಯಮ... ಪ್ರಯಾಣಿಕನ ಬಳಿ ಪ್ರಯಾಣದ ಸಮಯದಲ್ಲಿ ಯಾವುದೇ ಐಡೆಂಟಿಟೀ ಕಾರ್ಡ್ ಇಲ್ಲವೆಂದಾದರೆ ಅದು ಟಿಕೆಟ್ ರಹಿತ ಪ್ರಯಾಣಕ್ಕೆ ಸಮ.... ಟಿಕೆಟ್ ನ ಹಣ, ಜೊತೆಗೆ ಅದರ ಎರಡರಷ್ಟು ಫೈನ್ ಕಟ್ಟಬೇಕಿತ್ತು...!! ನಾನು ಪೇಚಿನಲ್ಲಿ ಸಿಲುಕಿದೆ... TC ಇನ್ನೊಮ್ಮೆ ಗಟ್ಟಿಯಾಗಿ ಕೇಳಿದ.. " Show me any one of the Identity cards listed on your ticket.... ಯಾವುದಾದ್ರೂ ಒಂದು ಗುರುತಿನ ಚೀಟಿ ನಿಮ್ಮ ಬಳಿ ಇದ್ರೆ ತೋರ್ಸಿ.." ಒಂದರೆ ಕ್ಷಣ ನಾನು ನನ್ನ ಕೊಲೀಗ್ ಮುಖವನ್ನ, ಮತ್ತೆ TC ಮುಖವನ್ನ ನೋಡುತ್ತ ನಿಂತುಬಿಟ್ಟೆ...


(ಮುಂದುವರೆಯುವದು......)

Wednesday, 19 August 2009

"ಹಾಸ್ತಾ" ಅಂದ್ರೆ ಏನು...????



ಆಗಾಗ
ಅವರಿವರ ಕೈನಲ್ಲಿ ಸಿಲುಕಿ ಕುರೂಪಗೊಳ್ಳೋದು ಕನ್ನಡಕ್ಕೆ ಅಂಟಿದ ಶಾಪ ಅಂತ ಅನಿಸುತ್ತದೆ... ನೋಡಿ.. ಇಲ್ಲೊಬ್ಬ ಮಹಾಶಯ "ಆಸ್ಥಾ" ಅಂತ ಇರೋದನ್ನ ಹೇಗೆ ಬರೆದಿದ್ದಾನೆ ಅಂತ... ಬಹುಷಃ ಈತ "ಹ" ಕಾರ ಪ್ರಿಯನಾಗಿರಬೇಕು...!




Wednesday, 12 August 2009

ಕವನಕ್ಕೆ shape..!!

ಇತ್ತೀಚೆಗಷ್ಟೆ ರೂಪಶ್ರಿ ಯವರು ತಮ್ಮ ಬ್ಲಾಗ್ ನಲ್ಲಿ Designer ಕವಿತೆಗಳ ಬಗ್ಗೆ ಬರೆದಿದ್ದರು.. ಹಾಗೆ ಕೆಲವು ಕವನಗಳ sample ಸಹಾ ನೀಡಿದ್ದರು.. ಅದರಿಂದ ಪ್ರಭಾವಿತಗೊಂಡು ಆವತ್ತೇ ನಾನಿದನ್ನು ಬರೆದಿದ್ದೆ.. ಆದರೆ ಇಲ್ಲಿ ಪ್ರಕಟಿಸುವ ಸಾಹಸ ಮಾಡಿರಲಿಲ್ಲ.. ನಂತರ ಆಜಾದ್ ಸರ್ ಸಹಾ ತಮ್ಮ ಬ್ಲಾಗಿನಲ್ಲಿ ಚೆಂದದ ಮೀನಿನ ಕವಿತೆ ಪ್ರಕಟಿಸಿದರು.... ಮತ್ತಿವತ್ತು ರೂಪಶ್ರಿ ಯವರು ಇನ್ನೆರಡು ಕವಿತೆಗಳಿಗೆ ಆಕಾರ ಕೊಟ್ಟಿದ್ದಾರೆ.... ತಡೆಯಲಾಗದೆ ನಾನಿದನ್ನು ಪೋಸ್ಟ್ ಮಾಡ್ತಿದೇನೆ.... ಹೇಗನಿಸಿತು...??


ಮಿನುಗು ತಾರೆ...!!

Monday, 10 August 2009

ಸಾವಿರದ ಪ್ರೀತಿ...!!


ನನ್ನ
ಪ್ರೀತಿ ಚಂದಿರನಂತೆ...
ಆಗಾಗ ಕ್ಷೀಣಿಸುತ್ತದೆ...
ಮತ್ತೆ ಮತ್ತೆ ವೃದ್ದಿಸುತ್ತದೆ..
ಒಮ್ಮೆ ಅತೀ ಎನಿಸುವಷ್ಟು...
ಬೆಳದಿಂಗಳ ಪೌರ್ಣಮಿ..
ಒಮ್ಮೊಮ್ಮೆ ಏನೂ ಇಲ್ಲ...
ಬರೀ ಶೂನ್ಯ ಅಮಾವಾಸ್ಯೆ...
ಜಗದ ಕೆಟ್ಟ ಕಣ್ಣು ಬಿದ್ದರೆ
ಒಂದರೆ ಕ್ಷಣದ ಗೃಹಣ...
ಆದರೆ ಒಂದು ನೆನಪಿರಲಿ..
ಚೆಲುವೇ..,
ಋತುಗಳು ಬದಲಾಗ ಬಹುದು...
ನೀ ನನ್ನ ಮರೆಯಲೂ ಬಹುದು...
ನೋವಲಿ ನಾ ಸಾಯಲೂ ಬಹುದು...
ಆದರೆ....,
ನಿನ್ನ ಪ್ರೀತಿಯಿಲ್ಲದೇ ನಾನಿಲ್ಲ...
ನನ್ನ ಪ್ರೀತಿಗೆಂದೂ ಸಾವಿಲ್ಲ...!!

ಅಲ್ಲಿ ಮಳೆ... ಇಲ್ಲಿ ತಂಗಾಳಿ...!!



ಚೆಲುವೇ...

ನನ್ನೆದುರು
ನೀ ದಿನವೂ

ಬಾರದಿರೆ
ಏನಂತೆ...??

ಕಣ್ಣಿನಲಿ
ಖೈದಿಯಾದ

ನಿನ್ನದೇ
ಮೊಗವಿದೆ...

ನಿನ್ನ
ನೆನಪು ಜೊತೆಯಿರಲು

ಮುಷ್ಠಿಯಲೇ
ಜಗವಿದೆ...

ಅದಕ್ಕೇ
ಇರಬೇಕು...

ನೀನಲ್ಲಿ
ದೀಪ ಬೆಳಗಿದರೆ..

ಇಲ್ಲಿ
ಹೊಂಬೆಳಕು...!!


ಚೆಲುವೇ..
ನನ್ನೊಡನೆ
ನೀ ಮಾತ

ಆಡದಿರೆ
ಏನಂತೆ..??

ಕಿವಿಗಳಲಿ
ನಿನ್ನ ದನಿ

ಹದವಾಗಿ
ಕುಳಿತಿದೆ...

ಕವಿತೆಯ
ಪ್ರತಿ ಸಾಲಿನಲೂ

ಪದವಾಗಿ
ಅವಿತಿದೆ...

ಅದಕ್ಕೇ
ಇರಬೇಕು...

ನೀನಲ್ಲಿ
ಮಲ್ಲಿಗೆ ಮುಡಿದರೆ

ಇಲ್ಲೆಲ್ಲಾ
ಸುಗಂಧ...


ಚೆಲುವೇ...
ನನ್ನಿಂದ
ದೂರ..

ನೀನಿದ್ದರೆ
ಏನಂತೆ...??

ನನ್ನೆದೆಯಲಿ
ಉಸಿರಾಗಿ

ನಿನ್ನದೇ
ಉಸಿರಿದೆ...

ಬಾಳ
ಪ್ರತಿ ಪುಟದಲೂ

ನಿನ್ನದೇ
ಹೆಸರಿದೆ...

ಅದಕ್ಕೇ
ಇರಬೇಕು...

ನಿನ್ನ
ಮನೆಯಂಗಳದಿ ಮಳೆ ಸುರಿದರೆ..

ಇಲ್ಲಿ
ತಂಗಾಳಿ...!!

Wednesday, 22 July 2009

ಮಾತನಾಡುವ ಕಣ್ಣುಗಳು...!!

ಅಂದ ಸುಗಂಧ ಹೂಗಳ ಭಾಷೆ...
ಜುಳು-ಜುಳು ಕಲರವ ನದಿಗಳ ಭಾಷೆ...

ಮುಚ್ಚಿ ತೆರೆದರೆ ಉಷೆ...
ತೆರೆದು ಮುಚ್ಚಿದರೆ ನಿಶೆ...
ಅತಿ ಶೀತಲ.. ಅತಿ ಕೋಮಲ...


ನೋಡಿ ತಣಿವುದು ತೃಷೆ...
ಮತ್ತೆ ಮತ್ತೇರಿ ನಶೆ...
ಅವು ಮಾದಕ... ಸಂವಾಹಕ....


ಕಣ್ಣ ನೋಟದಲೆ ಕವಿತೆ..
ನೋಟದಾಟದಲೆ ಚರಿತೆ...
ಅತಿ ರೋಚಕ.. ಮನ ಮೋಹಕ...


ಹೌದು ಚೆಲುವೆ....
ನಿನ್ನ ನಯನಗಳೂ ಮಾತನಾಡುತ್ತವೆ...
ಆದರೆ, ಯಾವುದು ಅವುಗಳ ಭಾಷೆ...??
ನಾನೇನು ಮಹಾ...
ಅರಿಯದೇ ಕುಳಿತಿರುವನಂತೆ ಸ್ವತಃ ಬ್ರಹ್ಮ..
ಹೋಲಿಕೆಗೆ ನಿಂತರೆ ಪ್ರತಿ ಶಬ್ದವೂ ಕ್ಲಿಶೆ...