
ಸುತ್ತಲಿನ ಜನರ ನೋಟವೆಲ್ಲ ನಮ್ಮ ಮೇಲೇ ನೆಟ್ಟಿತ್ತು... ಪುಕ್ಕಟೆ ಮನೋರಂಜನೆ ಸಿಗ್ತಿದ್ರೆ ಯಾವೊನ್ ಬಿಡ್ತಾನೆ ಹೇಳಿ..? ನನಗೆ ಏನು ಮಾಡುವದು, TC ಜೊತೆ ಹೇಗೆ ಮಾತಾಡುವದು ಒಂದೂ ಗೊತ್ತಾಗ್ತಿಲ್ಲ... ನನ್ನ ಕೊಲೀಗ್ ಇಬ್ಬರಿಗೂ ಒಂದೇ ಟಿಕೆಟ್ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ...
"ಕ್ಷಮಿಸಿ ಸಾರ್.. ಎರಡೂ ಟಿಕೆಟ್ ಒಬ್ರೆ ಮಾಡ್ಸಿದ್ದು... ಒಬ್ಬರ ಬಳಿ ಐಡೆಂಟಿಟೀ ಪ್ರೂಫ್ ಇದ್ರೆ ಸಾಕು ಅಂತ ನಾವು ತಿಳಿದಿದ್ದೆವು.. ನನ್ನ ಆಫೀಸ್ ID ಬೇಕಾದ್ರೆ ಇದೆ... ನೋಡಿ ಸಾರ್..." ಅಂತ ಹೇಳ್ತಾ ನನ್ನ ಆಫೀಸ್ ID ಎದುರಿಗೆ ಹಿಡಿದೆ...
"ಇದೆಲ್ಲಾ ನಡೆಯಲ್ಲಪ್ಪಾ... ಸರ್ಕಾರದವ್ರು issue ಮಾಡಿರೋ ಐಡಿ ಪ್ರೂಫ್ ಇದ್ರೆ ಕೊಡು" ಟೀಸಿ ಇನ್ನೂ ಗಟ್ಟಿಯಾಗಿ ಹೇಳಿದ...
"ಇದೊಂದು ಸಾರ್ತಿ ನಮ್ಮ ತಪ್ಪನ್ನ ಕ್ಷಮಿಸಿಬಿಡಿ ಸಾರ್.. Please..." ನಾನು ಹಲ್ಲು ಗಿಂಜಿದೆ..
"ಆಯ್ತು.. ಇನ್ನೊಮ್ಮೆ ಈ ರೀತಿ ಮಾಡಬೇಡಿ... ಏನೋ Educated ತರ ಕಾಣಿಸ್ತೀರಾ... ನೀವೇ ಹೀಗೆ ಮಾಡಿದ್ರೆ ಇನ್ನು ಕಲೀದೇ ಇರೋವ್ರ ಪರಿಸ್ಥಿತಿ ಹೇಗಿರತ್ತೆ..? ಯಾವಾಗ ಸುಧಾರಿಸ್ತೀರೋ ದೇವರಿಗೆ ಗೊತ್ತು" TC ಟಿಕೆಟ್ ಮೇಲೆ ಸಹಿ ಮಾಡಿ ಮುಂದಿನ ಬೋಗಿಗೆ ನಡೆದ...
ನಾವಿಬ್ಬರೂ ಒಮ್ಮೆ ನಿಟ್ಟುಸಿರು ಬಿಟ್ಟೆವು... ಅಬ್ಬಾ... ಅಂತೂ ಬೀಸೊ ದೊಣ್ಣೆಯಿ೦ದ ತಪ್ಪಿಸಿಕೊಂಡೇವಲ್ಲ... TC ಗೆ ಮನಸ್ಸಿನಲ್ಲೇ ಧನ್ಯವಾದ ಸಲ್ಲಿಸಿದೆವು...ಏನೋ ನಡೆಯಲಿದೆ ಅಂತ ನಿದ್ದೆ ಬಿಟ್ಟು ನೋಟ ನಮ್ಮತ್ತ ನೆಟ್ಟಿದ್ದ ಜನರಿಗೆಲ್ಲ ನಿರಾಸೆಯಾಯ್ತೋ ಏನೋ... ಮತ್ತೆ ಸೀಟಿಗೊರಗಿ ನಿದ್ದೆ ಹೋದರು...
ನಾವಿಬ್ಬರೂ ಏನೂ ಆಗಿಲ್ಲವೇನೋ ಎಂಬಂತೆ ಮತ್ತೆ ನಮ್ಮ ಹರಟೆ ಅಲ್ಲಿಂದಿಲ್ಲಿಗೆ ವಾಕಿಂಗ್ ಮುಂದುವರೆಸಿದೆವು... ಇನ್ನೊಂದು ಸ್ಟೇಶನ್ ಕಳೆದರೆ ಮುಂದಿನದೇ ಹಾವೇರಿ... TC ಯಿಂದ ತಪ್ಪಿಸಿಕೊಂಡದ್ದು ಒಂದಾದರೆ ಇನ್ನೇನು ಸ್ವಲ್ಪ ಸಮಯದಲ್ಲೇ ನಾನು ಮನೆ ಸೇರಿರುತ್ತೇನೆ... ಹಾಯಾಗಿ ಅಮ್ಮನ ಕೈ ಅಡುಗೆ ಉಂಡು ಭರ್ಜರಿ ನಿದ್ದೆ ಹೊಡೆಯಬಹುದು ಅನ್ನೋದು ಇನ್ನೊಂದು... ನಾನು ಖುಷಿಯಾಗಿದ್ದೆ...
ಅಷ್ಟರಲ್ಲೇ ಮತ್ತೊಮ್ಮೆ ನಮ್ಮ ಬೋಗಿಯಲ್ಲಿನ ಪ್ರಯಾಣಿಕರೆಲ್ಲ ತಮ್ಮ ಬ್ಯಾಗ್ ಕೆಳಗಿಳಿಸಿ ಟಿಕೆಟ್ ಹೊರ ತೆಗೆಯತೊಡಗಿದರು..ನೋಡಿದರೆ ಇನ್ನೊಬ್ಬ TC ಪ್ರತ್ಯಕ್ಷನಾಗಿದ್ದ...!! ಆದರೆ ನಮಗೀಗ ಧೈರ್ಯ ಬಂದಿತ್ತು.. ಆಗಲೇ ಒಬ್ಬ ಟೀಸಿ ಎಲ್ಲವನ್ನೂ ಪರೀಕ್ಷಿಸಿ ಓಕೇ ಅಂತ ಹೇಳಿದ್ದನಲ್ಲ..! ನಾವೂ ಟಿಕೆಟ್ ಕೈಲಿ ಹಿಡಿದು ನಿಂತೆವು...
ಈ ಬಾರಿ ನನ್ನ ಕೊಲೀಗ್ ಎರಡೂ ಟಿಕೆಟ್ ಮತ್ತು ತನ್ನ ಡ್ರೈವಿಂಗ್ ಲೈಸೆನ್ಸ್ ಕೊಟ್ಟ...
"ಎರಡು ಟಿಕೆಟ್ ಇದೆ.. ಇನ್ನೊಂದು ಐಡೀ ಎಲ್ಲಿ ಸರ್..?? ಒಂದೇ ಕೊಟ್ಟಿದ್ದೀರಾ... " TC ಕೇಳಿದ...
"ಎರಡೂ ಟಿಕೆಟ್ ಮಾಡಿದ್ದು ಒಬ್ಬರೇ ಸರ್.. ಅದಕ್ಕೇ ಒಂದೇ ಐಡೀ ಕೊಟ್ಟಿರೋದು" ನನ್ನ ಕೊಲೀಗ್ ನ ಉತ್ತರ...
"ಅದು ಹೇಗೆ ಆಗತ್ತೆ..?? ಎರಡು ಪ್ರತ್ಯೇಕ ಟಿಕೆಟ್ ಇದೆ ಅಂದ್ರೆ, ಎರಡು ಪ್ರತ್ಯೇಕ ಐಡೀ ಇರಲೇ ಬೇಕು... ಹತ್ತು ಜನರ ಹೆಸರಲ್ಲಿ ಒಂದೇ ಟಿಕೆಟ್ ಮಾಡಿಸಿ, ಒಂದೇ ಐಡೀ ಕೊಡಿ... ನಡೆಯುತ್ತೆ... ಆದರೆ ನೀವು ಕೊಟ್ಟಿರೋದು ಎರಡು ಟಿಕೆಟ್... ಮತ್ತೊಂದು ಐಡೀ ತೆಗೀರಿ ಬೇಗ..." TC ಧ್ವನಿ ಏರಿಸಿದ...
"ಆಗಲೇ ಇನ್ನೊಬ್ರು TC ಬಂದು, ಎಲ್ಲಾ check ಮಾಡಿ ಸಹಿ ಮಾಡಿ ಹೋಗಿದ್ದಾರೆ... ನಿಮಗೆ ಮತ್ತೇನು ಕಷ್ಟ..? ನಮ್ಮ ಬಳಿ ಇರೋದು ಒಂದೇ ಐಡೀ ಪ್ರೂಫ್..." ಈ ಸಾರಿ ನಾನು ಸೋಲು ಒಪ್ಪಿಕೊಳ್ಳಲು ತಯಾರಿರಲಿಲ್ಲ...
"ಏನು ತಮಾಷೆ ಮಾಡ್ತಿದೀರಾ..?? ಈ ಟಿಕೆಟ್ ಮೇಲೆ ಸಹಿ ಎಲ್ಲಿದೆ...?? ನಿಜವಾಗಲೂ ಟಿಕೆಟ್ ವೆರಿಫೈ ಮಾಡ್ಸಿದ್ರಾ...?? ಇಲ್ಲಾ TC ಬಂದಾಗ ಮತ್ತೆಲ್ಲೋ ಅಡಗಿ ಕುಳ್ತಿದ್ರಾ...?? Rules ಅಂದ್ರೆ Rules.. ಹೆಚ್ಚಿಗೆ ಮಾತಾಡದೆ ಇನ್ನೊಂದು ಪ್ರೂಫ್ ತೋರ್ಸಿ... ಇಲ್ಲಾ ಅಂದ್ರೆ ದಂಡ ಕಟ್ಟಿ..." TC ಧ್ವನಿ ಕೇಳಿ ಪಕ್ಕದ ಬೋಗಿಯ ಒಂದಷ್ಟು ಪ್ರಯಾಣಿಕರೂ ಮಜಾ ಸವಿಯಲು ನಮ್ಮ ಬೋಗಿಯಲ್ಲಿ ತೂರಿಕೊಂಡರು...
ಅವನಿಂದ ಟಿಕೆಟ್ ತಗೊಂಡು ನೋಡಿದ ನಮಗೆ ಶಾಕ್ ಹೊಡೆದಂತೆ ಭಾಸವಾಯ್ತು...
ಮೊದಲು ಬಂದ TC ಎರಡೂ ಟಿಕೆಟ್ ಮೇಲೆ ಸಹಿ ಮಾಡಿದ್ದಾನೆ ಅಂತಲೇ ನಮ್ಮ ಕಲ್ಪನೆಯಾಗಿತ್ತು... ಆದರೆ ಆ ಮಹಾನುಭಾವ ಕೇವಲ ನನ್ನ ಕೊಲೀಗ್ ಟಿಕೆಟ್ ಮೇಲೆ ಮಾತ್ರ ಸಹಿ ಮಾಡಿದ್ದ...!!
"Rules ನಮಗೊಂದೇ apply ಆಗತ್ತಾ..?? ನಿಮಗೂ rules apply ಆಗಬೇಕು ತಾನೇ..? ಎಲ್ಲಿ ನಿಮ್ಮ uniform..? ನಿಮಗೂ ಒಂದು Identity Card ಅಂತ ಇರಬೇಕಲ್ಲ...! ಇಲ್ಲಾ ಅಂದ್ರೆ ನಿಮ್ಮನ್ನ ನಾವು ನಂಬೋದು ಹೇಗೆ..??" ನಮ್ಮ ಹುಂಬತನದ ಪ್ರಶ್ನೆ...!!
"ಒಹ್.. ನಿಮಗೂ ರೂಲ್ಸ್ ಗೊತ್ತು..! Uniform ಹಾಕಲೇ ಬೇಕಂತ ಯಾವುದೇ ನಿಯಮವಿಲ್ಲ.. ಇನ್ನು ನನ್ನ ID Card ವಿಷಯ... ಇಲ್ಲಿದೆ ನೋಡಿ... ಸರಿಯಾಗಿ ನೋಡಿಕೊಳ್ಳಿ... ಮತ್ತೀಗ ನಿಮ್ಮ ಇನ್ನೊಂದು ID Proof ಕೊಡಿ..." TC ತನ್ನ ID Card ನನ್ನ ಕೈಗಿತ್ತ..
"ಆಗಲ್ಲ ಸರ್.. ನಮ್ಮ ಬಳಿ ಇರೋದು ಒಂದೇ ID Card.. ಮತ್ತೆ ಆಗಲೇ ಮತ್ತೊಬ್ಬರು ಎಲ್ಲಾ verify ಮಾಡಿಯಾಗಿದೆ.. ಏನು ಮಾಡ್ತೀರೋ ಮಾಡಿಕೊಳ್ಳಿ..." ನಾವೂ ಧ್ವನಿ ಏರಿಸಿದೆವು...
"ಆಯ್ತು ಹಾಗಿದ್ರೆ... ಮುಂದಿನ station ನಲ್ಲಿ ಇಳಿದುಕೊಂಡು ಮಾತಾಡೋಣ.. ದಂಡ ಕಟ್ಟಿದರೆ ಸರಿ.. ಇಲ್ಲಾ ಅಂದ್ರೆ ನಿಮ್ಮನ್ನ ಇಲ್ಲೇ ಇಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ....." TC ಹೇಳಿದ ಮುಂದಿನ ಕ್ರಮ ಯಾವುದಿರಬಹುದೆಂಬ ಕಲ್ಪನೆ ನನಗೂ ಇರಲಿಲ್ಲ...
ಎಲ್ಲವೂ ಅತಿಯಾಯ್ತು ಅಂತ ಅನಿಸಿತು.. ಆಗಲೇ ಬೋಗಿಯಲ್ಲಿ ನಾವು ತಮಾಷೆಯ ವಸ್ತುವಾಗಿಯಾಗಿತ್ತು... ಇವತ್ತೂ ಈ ರೀತಿ ಖರ್ಚು ಮಾಡೋದು ನಮ್ಮ ಹಣೆಯಲ್ಲಿ ಬರೆದಿತ್ತು... ಅದೂ ಕೇವಲ 377 ರೂಪಾಯಿ ಗಳಿಗೆ ನಾವು ಇಷ್ಟೆಲ್ಲಾ ಗಲಾಟೆ ಮಾಡಿಕೊಂಡೆವಲ್ಲಾ ಅನ್ನಿಸತೊಡಗಿತು... 500 ರ ಒಂದು ನೋಟು ತೆಗೆದು ಅವನ ಕೈಗಿತ್ತೆ... ಅವನು ರಸೀತಿ ಬರೆಯತೊಡಗಿದ...
" 250 ರೂ.ದಂಡ ಮತ್ತು ಟಿಕೆಟ್ ನ 127 ರೂ. ಎರಡೂ ಸೇರಿ 377 ರೂ ಕಟ್ಟಬೇಕು... 500 ರೂ ಕೊಟ್ಟಿದ್ದೀರ.. ಇನ್ನು ಎರಡು ರೂಪಾಯಿ ಚಿಲ್ಲರೆ ಇದ್ರೆ ಕೊಡಿ.. ನಿಮಗೆ 125 ರೂ ವಾಪಸ್ ಕೊಡ್ತೇನೆ.." TC ರಸೀತಿ ಕೈಗಿಡುತ್ತಾ ಹೇಳಿದ...
ಯಾವತ್ತೂ ತಾಳ್ಮೆ ಕಳೆದುಕೊಳ್ಳದ ನನಗೆ ಅವತ್ತು ಏನಾಯ್ತೋ ಗೊತ್ತಿಲ್ಲ...
" ಚಿಲ್ಲರೆ ಏಕೆ ವಾಪಸ್ ಕೊಡ್ತೀರಾ..?? ನೀವೇ ಇಟ್ಟುಕೊಳ್ಳಿ...!" ನನ್ನಲ್ಲಿನ ಅಹಂ ಮಾತನಾಡಿತ್ತು..
"Mind your tongue mister...! ಮೈ ಮೇಲೆ ಎಚ್ಚರ ಇದ್ದು ಈ ರೀತಿ ಮಾತಾಡ್ತಿದೀರಾ ತಾನೇ..? ನಾಲಿಗೆ ಮೇಲೆ ಸ್ವಲ್ಪ ಹಿಡಿತ ಇಟ್ಟು ಮಾತಾಡಿ.. ಸರ್ಕಾರ ನಮಗೆ ಸಂಬಳ ಕೊಡುತ್ತೆ... ನಿಮ್ಮ ಚಿಲ್ಲರೆ ಇಟ್ಟುಕೊಂಡು ನನ್ನ ಜೀವನ ಸಾಗಿಸೋ ದುರ್ಗತಿ ನನಗೆ ಬಂದಿಲ್ಲ... ಏನೋ ಒಳ್ಳೇ ಓದಿ ಒಳ್ಳೇ job ಮಾಡ್ತಿರೋರ ಹಾಗೆ ಕಾಣಿಸ್ತೀರ... ನಿಮ್ಮ ಅಹಂಕಾರದ ಮಾತುಗಳೇನಿದ್ರೂ ನಿಮ್ಮ ಬಳಿಯೆ ಇಟ್ಟುಕೊಳ್ಳಿ.. ಮತ್ತೆ ಇಂತ ತಪ್ಪು ಮಾಡಬೇಡಿ" ಹೇಳಿ 125 ರೂ ನನ್ನ ಕೈಗಿತ್ತು ಆತ ಇಳಿದು ಹೊರಟು ಹೋದ...
ಎಲ್ಲರ ಮುಂದೆ ಉಗಿಸಿಕೊಂಡ ನನ್ನ ಗತಿ ದೇವರಿಗೆ ಪ್ರೀತಿ ಅನ್ನುವಂತಿತ್ತು... ಹೌದು.. ತಪ್ಪೆಲ್ಲ ನಮ್ಮದೇ ಇತ್ತು.. ಟಿಕೆಟ್ ಮೇಲಿನ ನಿಯಮಗಳನ್ನ ಸರಿಯಾಗಿ ಓದದೇ ಇದ್ದದ್ದು, ಜೊತೆಗೆ ID Card ತಗೊಂಡು ಹೋಗದೇ ಇದ್ದದ್ದು, ಮೊದಲ TC verification ಮುಗಿಸಿದಾಗ ಸಹಿ ಮಾಡಿದ್ದಾನಾ ಇಲ್ವಾ ಅಂತ ನೋಡದೇ ಇದ್ದದ್ದು, ಅನಾವಶ್ಯಕವಾಗಿ ಜಗಳಕ್ಕೆ ನಿಂತು ನಗೆಪಾಟಲಿಗೆ ಗುರಿಯಾಗಿದ್ದು.. ಒಂದೇ ಎರಡೇ..!!? ಒಂದರ ನಂತರ ಒಂದರಂತೆ ತಪ್ಪುಗಳ ಸರಮಾಲೆ...
TC ತನ್ನ ಕೆಲಸ ಸರಿಯಾಗೇ ಮಾಡಿದ್ದ.. ಆಮೇಲೆ ನನಗೆ ಅನಿಸಿದ್ದಿಷ್ಟು.. ಸರ್ಕಾರದ ಎಲ್ಲ ಆಯಕಟ್ಟಿನ ಹುದ್ದೆಗಳಲ್ಲೂ ಇಂತಹ ನಿಷ್ಠಾವಂತ ಅಧಿಕಾರಿಗಳಿದ್ದರೆ ನಮ್ಮ ದೇಶದಲ್ಲಿ ಆಗ್ತಿರೋ ಎಷ್ಟೋ ಅವಗಡಗಳನ್ನ ತಪ್ಪಿಸಬಹುದಿತ್ತು.. ಅದೆಷ್ಟೋ ಪಾತಕಿಗಳನ್ನ, ದೇಶದ್ರೋಹಿಗಳನ್ನ ಸದೆಬಡಿಯಬಹುದಿತ್ತು..
ನಾನು ಮತ್ತದೇ ಟ್ರೈನ್ ನಲ್ಲಿ ಊರಿಗೆ ಹೋಗಲು ಎದುರು ನೋಡುತ್ತಿದ್ದೇನೆ.. ಈ ಬಾರಿ ID Card ಇಟ್ಟುಕೊಂಡೇ ಹೋಗ್ತೇನೆ... ಅದೇ TC ಮತ್ತೆ ಸಿಕ್ಕರೆ ಹಿಂದೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಅವನ ಪ್ರಾಮಾಣಿಕತೆಗೊಂದು ಸಲ್ಯೂಟ್ ಹೊಡೆಯುತ್ತೇನೆ...!!