Sunday, 12 July 2009

ಕೊಡಬಲ್ಲೆಯಾ ಉತ್ತರ...???

ಉರಿವ ಎದೆಯಲಿ ಸಾವಿರ ಪ್ರಶ್ನೆ..
ಕಿವಿಯನು ತೆರೆದು ನೀ ಕೇಳಿಬಿಡು...
ಇನ್ನು ತಡೆಯೆ ನಾ ನಿನ್ನನು ಗೆಳತಿ..
ಹೋಗುವ ಮುನ್ನ ನೀ ಹೇಳಿಬಿಡು...

ಎದೆಯಂಗಳದಿ ನೂರು ಚುಕ್ಕಿಗಳನಿಟ್ಟು..
ರಂಗೋಲಿಯ ಮರೆತೆ ನೀ ಏಕೆ...??
ಬಾಳ ನೌಕೆಯ ಪ್ರೇಮ ಸಾಗರಕೆಳೆದು...
ಹುಟ್ಟನು ಕಸಿದೆ ನೀ ಏಕೆ...??
|| ಉರಿವ ಎದೆಯಲಿ ||

ಹೂದೋಟದಲಿ ನೀ ಹೂಗಳ ಚುಂಬಿಸಿ..
ಬೇರನೆ ಕಿತ್ತ ಪರಿಯದೇನು..??
ಮೂಖ ಹೃದಯಕೆ ಮಾತನು ಕಲಿಸಿ...
ನಾಲಿಗೆಯನೆ ಹರಿದೆ ಸರಿಯೇನು...??
|| ಉರಿವ ಎದೆಯಲಿ ||

ಹಣತೆಯ ಬೆಳಗಿಸಿ ನೀರನು ಸುರಿದೆ..
ಇನ್ನೆಲ್ಲಿ ಹುಡುಕಲಿ ನಾ ಬೆಳಕು...??
ನನ್ನ ಕವಿತೆಗಳ ಪದಗಳ ಕಸಿದೆ...
ಇನ್ನೆಲ್ಲಿಂದ ತರಲಿ ನಾ ಸರಕು...??
|| ಉರಿವ ಎದೆಯಲಿ ||

Thursday, 9 July 2009

ಹೀಗೊಂದು ಸಂಜೆ

ಅವಳೆದೆಯೊಳಗಡಿಯಿಡೊ ಘಳಿಗೆ...
ಬರ ಹೇಳಿಹೆ ತುಂತುರು ಮಳೆಗೆ..
ತೆರೆದಿರುವೆನು ಮುತ್ತಿನ ಮಳಿಗೆ..
ಬಂದರೆ ಕ್ಷಣ ಕ್ಷಣವೂ ರಸದೀವಳಿಗೆ...

ನೀ ತೋರದಿರೂ ಇಂದವಸರ...
ಮರೆಯಾಗದೆ ನಿಲ್ಲು ಓ ನೇಸರ...
ಬರಿ ಬಾನೆoದರೆ ಬಲು ಬೇಸರ..
ಮಳೆ ಬಿಲ್ಲಿಗೆ ಕೊಡು ತುಸು ಉಸಿರ...

ತಂಗಾಳಿಯೆ ಬೀಸು ನೀ ಮೆಲ್ಲ..
ಮುಂಗುರುಳ ನರ್ತನಕೆ ಬರಿ ಸೊಲ್ಲ..
ನಾಚಿ ಕೆಂಪಿಡುತಿರೆ ಸಖಿ ಗಲ್ಲ..
ಕದ್ದು ಮುತ್ತಿಡುವೆ ನಾ ಕಳ್ಳ...

Sunday, 21 June 2009

ಸಬೂಬು..!!

ಗಾಳಿಗೆ ತಂಪು
ಕೋಗಿಲೆಗೆ ದನಿಯ ಇಂಪು...
ಹೂಗಳಿಗೆ ಕಂಪು...
ನದಿಗೆ ಕಲರವ
ಸಾಗರಕೆ ಅಲೆಯ ಸ್ಪರ್ಶ
ಸೂರ್ಯ, ಚಂದ್ರ,
ತಾರೆಗಳಿಗೆಹೊಳಪು...
ನೀನೆ ಕಲಿಸಿರುವೆಯoತೆ...!!
ಅವುಗಳದ್ದು ಒಂದೇ ಪುಕಾರು...
ಗುರುದಕ್ಷಿಣೆ ಸ್ವೀಕರಿಸದೇ
ಬಂದಿರುವೆಯಂತೆ...??
ನಾನೀಗ ಅವುಗಳ ರಾಯಭಾರಿ...
ಸಾವಿರದ ಒಂದು ಮುತ್ತುಗಳನ್ನು
ನಿನಗೆ ಕಾಣಿಕೆಯಾಗಿ ನೀಡಿವೆ....
ಹೇಳು ಚೆಲುವೆ....
ಯಾವಾಗ ಕೊಡಲಿ......??

Tuesday, 19 May 2009

ಹೆಸರಿಡದ ಹನಿಗಳು....!!

ಹಾಗೇ ಹೊಳೆದ ಕೆಲವು ಸಾಲುಗಳು... ಇವುಗಳಿಗೆ ಹೆಸರಿಡುವ ಸಾಹಸ ಮಾಡದೇ ಹಾಗೇ ಪೋಸ್ಟ್ ಮಾಡಿದ್ದೇನೆ... ಓದಿ ಏನನ್ನಿಸಿತು...?? ದಯವಿಟ್ಟು ಹೇಳಿ...

1.

ಅದೇನು ಆತುರ ನಿನಗೆ..??
ನಾನು ಕಣ್ಣು ಮಿಟುಕಿಸುವ ಮೊದಲೇ...
ನನ್ನ ಗಲ್ಲವ ಕಚ್ಛಾಯ್ತು...!!
ಅದೆಷ್ಟು ಗಾಢ ವರ್ಣ
ನಿನ್ನ ಲಿಪ್ ಸ್ಟಿಕ್ನದು..??
ನನಗರಿವಿಲ್ಲದೆಯೇ
ನಾಳಿನ ನ್ಯೂಸ್ ಪೇಪರ್
ಅಚ್ಛಾಯ್ತು.....!!

****************************
2.

ಮಂದಿರದ ಕೇಸರಿ ಪತಾಕೆ....
ಮಸೀದಿಯ ಹಸಿರು ಗೋಡೆ....
ಚರ್ಚಿನ ಬಿಳಿಯ ಬಾಗಿಲು....
ಸೂರ್ಯನುದಯಕ್ಕೆ ಕಾತರಿಸಿವೆ...
ಸೂರ್ಯನ ಬೆಳಕಲ್ಲಿ ಅವುಗಳ
ನೆರಳಿಗೆ ಒಂದೇ ಬಣ್ಣ.....!!

****************************
3.

ನವ ವಧುವಂತೆ
ಸಿಂಗರಿಸಿಕೊಂಡು
ಭೂ ತಾಯಿ
ಮೆರವಣಿಗೆ ಹೊರಟಿದ್ದಾಳೆ...
ಚೆಲುವಿಗೆ
ಮನಸೋತ ತಾರೆಗಳು
ಮೋಡದ ಮರೆಯಲ್ಲಿ ನಿಂತು
ಫೋಟೋ ಕ್ಲಿಕ್ಕಿಸುತ್ತಿವೆ...!!

Thursday, 14 May 2009

ತಪ್ಪಿರುವ ಕಾಗುಣಿತ....!!!

ನಾನೆಂಬ ಭಾವನೆಯ ಮೇಲೆ
ಅಲ್ಪಪ್ರಾಣ...
ನೀನೆಂಬ ಮಾಯೆಯ ಮೇಲೆ
ಮಹಾಪ್ರಾಣ....
ಎಲ್ಲೋ ಉದ್ಘಾರ ವಾಚಕ,
ಇನ್ನೆಲ್ಲೋ ಪ್ರಶ್ನಾರ್ತಕ....
ಅಲ್ಲೆಲ್ಲೋ ಅಲ್ಪವಿರಾಮ,
ಮತ್ತೆಲ್ಲೋ ಪೂರ್ಣವಿರಾಮ...
ಹೃಸ್ವ, ಧೀರ್ಘ....,
ಕೊಂಬು, ತಲೆಗಟ್ಟು ಯಾವುದೂ
ಇರಬೇಕಾದಲ್ಲಿ ಇಲ್ಲ....
ಪ್ರತಿ ಸಾಲಿನಲ್ಲೂ ತಪ್ಪು ಹೆಜ್ಜೆಯಿಟ್ಟು
ತಡವರಿಸುತ್ತಿರುವ ಕಾಗುಣಿತ...
ಆದರೂ ನಿಶ್ಚಿಂತೆ....

ಏನೂ ಇಲ್ಲದಿದ್ದರೂ
ನೀನಿರುವೆಯೆಂಬ ಕಲ್ಪನೆಯೊಂದಿದೆ..
ಆ ಕಲ್ಪನೆಯಿಂದಲೇ
ನನ್ನ ಕವಿತೆಗಳಿಗೆ ಹೊಸ ಅರ್ಥ ಬಂದಿದೆ...

Saturday, 2 May 2009

ಕೋರಿಕೆ......!!



ನಿನ್ನ ಕಣ್ಣಿo ಹೊರಟಿತು ಮಾತು

ನಾ ಜಾರಿದೆ ಪ್ರೀತಿಯ ಹೊಳೆಗೆ...
ಬಿಡದೆ ಸೆಳೆದಿದೆ ನಿನ್ನಯ ನಶೆಯು
ಮೈ ಮರೆತಿಹೆ ಪ್ರೀತಿಯ ಕರೆಗೆ.....

ಪ್ರೀತಿಯೆಂದರೆ ನೋವಿನ ಸಂತೆ
ಎನ್ನುವ ಮೂಢರಿಹರು ಈ ಜಗದೊಳಗೆ.......
ಸಾವ ಭಯವ ಮೀರಿಸಿ ಸೆಳೆವುದು..
ಪ್ರೀತಿಯೇ ಪತಂಗವ ದೀಪದ ಕಡೆಗೆ...

ಪ್ರೀತಿಯಿನಿತಿಲ್ಲ ನಿನಗೆ ನನ್ನಲ್ಲಿ
ಸುಮ್ಮನೆ ನಾಟಕ ಗೊತ್ತೆನಗೆ...
ನಾಟಕವಾದರೂ ಬೇಸರವಿಲ್ಲ
ಮಾಡುತಲಿರು ನಾ ಇರೋವರೆಗೆ...

ನನ್ನಯ ಕೋರಿಕೆ ಇಷ್ಟೇ ಚೆಲುವೆ
ಆದರೆ ಒಮ್ಮೆ ಬಂದುಬಿಡು.....
ಬಂದೆಯೆಂದರೆ ಇರಲೇಬೇಕು
ನನ್ನ ಕೊನೆಯುಸಿರು ಇರೋವರೆಗೆ....

ಹೃದಯವ ನೋಯಿಸುವೆ ಏಕೆ...??



ಕೈಗಳ ಹಿಂದೆ ನಿನ್ನಯ ಸುಂದರ

ಮುಖವನು ಮುಚ್ಚುವುದೇಕೆ...??
ನನ್ನನು ಕಂಡರೆ ನಾಚಿಕೆಯೆಂದಾದರೆ
ನೀ ಎದುರಿಗೆ ಬರುವುದು ಏಕೆ....??

ಕೋರೆಗಣ್ಣಲೀ ನೋಡುತ ನನ್ನಯ
ಹೃದಯವ ಚುಚ್ಚುವುದೇಕೆ...??
ನನ್ನನು ಕಂಡರೆ ಇಷ್ಟವೆಂದಾದರೆ
ನೀ ಪ್ರೀತಿಯ ಬಚ್ಚಿಡುವುದು ಏಕೆ...??

ನನ್ನಯ ಕಣ್ಣಿನ ತೇವವ ನೋಡಿ
ತಿರುಗಿ ಅಳುವೆ ನೀನೇಕೆ...??
ಹೃದಯದ ನೋವ ನೀ ಅರಿತಿದ್ದರು
ಹೃದಯವ ನೋಯಿಸುವೆ ಏಕೆ...??