Saturday, 26 September 2009

ನಿಶ್ಯಬ್ದ ಗಾನ...!!















ಎಂದಿನಂತೆಯೇ
ನಿನ್ನೆಯೂ
ಅವಳು ಕನಸಿನ ಕದ ತಟ್ಟಿದಳು..
ಕದ ತೆರೆದು ಬಳಿ ಕರೆದು
ಮನದ ಮಡಿಲಲ್ಲಿ ಬೆಚ್ಚಗೆ ಬಚ್ಚಿಟ್ಟರೂ...
ಮಾತಿಲ್ಲ ಕಥೆಯಿಲ್ಲ...
ಅವಳದ್ದು ದಿವ್ಯ ಮೌನ...!!

ಎಂದಿನಂತೆಯೇ ಇಂದು ಕೂಡ
ಅವಳು ನನ್ನೆದುರಲ್ಲಿ ನಿಂತಳು...
ಕೈ ಹಿಡಿದು ಬೆರಳುಗಳ ಬೆಸೆದು
ಕಣ್ಣ ಕನ್ನಡಿಯಲ್ಲಿ ಕದಲದಂತೆ ಮುಚ್ಚಿಟ್ಟರೂ...
ಮೌನ ಮಾತಾಗಲಿಲ್ಲ...
ಅವಳದ್ದು ಅವಿಚ್ಛಿನ್ನ ಧ್ಯಾನ..!!

ಇಂದಿನಂತೆ ಎಂದೆಂದಿಗೂ
ಜೊತೆ ಬಾಳುವ ಭಾಷೆಯಿತ್ತಳು...
ತುಟಿಗಳಲಿ ತುಟಿ ಬೆಸೆದು
ನಶೆಗಡಲ ಅಲೆಯಲ್ಲಿ ಮುಳುಗಿ ಮೈಮರೆತರೂ...
ಅವಳ ಎದೆಯಾಸೆ ಹಾಡಾಗಲಿಲ್ಲ...
ಅವಳದ್ದು ನಿಶ್ಯಬ್ದ ಗಾನ...!!

Wednesday, 23 September 2009

ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೨




ಸುತ್ತಲಿನ ಜನರ ನೋಟವೆಲ್ಲ ನಮ್ಮ ಮೇಲೇ ನೆಟ್ಟಿತ್ತು... ಪುಕ್ಕಟೆ ಮನೋರಂಜನೆ ಸಿಗ್ತಿದ್ರೆ ಯಾವೊನ್ ಬಿಡ್ತಾನೆ ಹೇಳಿ..? ನನಗೆ ಏನು ಮಾಡುವದು, TC ಜೊತೆ ಹೇಗೆ ಮಾತಾಡುವದು ಒಂದೂ ಗೊತ್ತಾಗ್ತಿಲ್ಲ... ನನ್ನ ಕೊಲೀಗ್ ಇಬ್ಬರಿಗೂ ಒಂದೇ ಟಿಕೆಟ್ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ...


"ಕ್ಷಮಿಸಿ ಸಾರ್.. ಎರಡೂ ಟಿಕೆಟ್ ಒಬ್ರೆ ಮಾಡ್ಸಿದ್ದು... ಒಬ್ಬರ ಬಳಿ ಐಡೆಂಟಿಟೀ ಪ್ರೂಫ್ ಇದ್ರೆ ಸಾಕು ಅಂತ ನಾವು ತಿಳಿದಿದ್ದೆವು.. ನನ್ನ ಆಫೀಸ್ ID ಬೇಕಾದ್ರೆ ಇದೆ... ನೋಡಿ ಸಾರ್..." ಅಂತ ಹೇಳ್ತಾ ನನ್ನ ಆಫೀಸ್ ID ಎದುರಿಗೆ ಹಿಡಿದೆ...


"ಇದೆಲ್ಲಾ ನಡೆಯಲ್ಲಪ್ಪಾ... ಸರ್ಕಾರದವ್ರು issue ಮಾಡಿರೋ ಐಡಿ ಪ್ರೂಫ್ ಇದ್ರೆ ಕೊಡು" ಟೀಸಿ ಇನ್ನೂ ಗಟ್ಟಿಯಾಗಿ ಹೇಳಿದ...


"ಇದೊಂದು ಸಾರ್ತಿ ನಮ್ಮ ತಪ್ಪನ್ನ ಕ್ಷಮಿಸಿಬಿಡಿ ಸಾರ್.. Please..." ನಾನು ಹಲ್ಲು ಗಿಂಜಿದೆ..


"ಆಯ್ತು.. ಇನ್ನೊಮ್ಮೆ ರೀತಿ ಮಾಡಬೇಡಿ... ಏನೋ Educated ತರ ಕಾಣಿಸ್ತೀರಾ... ನೀವೇ ಹೀಗೆ ಮಾಡಿದ್ರೆ ಇನ್ನು ಕಲೀದೇ ಇರೋವ್ರ ಪರಿಸ್ಥಿತಿ ಹೇಗಿರತ್ತೆ..? ಯಾವಾಗ ಸುಧಾರಿಸ್ತೀರೋ ದೇವರಿಗೆ ಗೊತ್ತು" TC ಟಿಕೆಟ್ ಮೇಲೆ ಸಹಿ ಮಾಡಿ ಮುಂದಿನ ಬೋಗಿಗೆ ನಡೆದ...


ನಾವಿಬ್ಬರೂ ಒಮ್ಮೆ ನಿಟ್ಟುಸಿರು ಬಿಟ್ಟೆವು... ಅಬ್ಬಾ... ಅಂತೂ ಬೀಸೊ ದೊಣ್ಣೆಯಿ೦ದ ತಪ್ಪಿಸಿಕೊಂಡೇವಲ್ಲ... TC ಗೆ ಮನಸ್ಸಿನಲ್ಲೇ ಧನ್ಯವಾದ ಸಲ್ಲಿಸಿದೆವು...ಏನೋ ನಡೆಯಲಿದೆ ಅಂತ ನಿದ್ದೆ ಬಿಟ್ಟು ನೋಟ ನಮ್ಮತ್ತ ನೆಟ್ಟಿದ್ದ ಜನರಿಗೆಲ್ಲ ನಿರಾಸೆಯಾಯ್ತೋ ಏನೋ... ಮತ್ತೆ ಸೀಟಿಗೊರಗಿ ನಿದ್ದೆ ಹೋದರು...


ನಾವಿಬ್ಬರೂ ಏನೂ ಆಗಿಲ್ಲವೇನೋ ಎಂಬಂತೆ ಮತ್ತೆ ನಮ್ಮ ಹರಟೆ ಅಲ್ಲಿಂದಿಲ್ಲಿಗೆ ವಾಕಿಂಗ್ ಮುಂದುವರೆಸಿದೆವು... ಇನ್ನೊಂದು ಸ್ಟೇಶನ್ ಕಳೆದರೆ ಮುಂದಿನದೇ ಹಾವೇರಿ... TC ಯಿಂದ ತಪ್ಪಿಸಿಕೊಂಡದ್ದು ಒಂದಾದರೆ ಇನ್ನೇನು ಸ್ವಲ್ಪ ಸಮಯದಲ್ಲೇ ನಾನು ಮನೆ ಸೇರಿರುತ್ತೇನೆ... ಹಾಯಾಗಿ ಅಮ್ಮನ ಕೈ ಅಡುಗೆ ಉಂಡು ಭರ್ಜರಿ ನಿದ್ದೆ ಹೊಡೆಯಬಹುದು ಅನ್ನೋದು ಇನ್ನೊಂದು... ನಾನು ಖುಷಿಯಾಗಿದ್ದೆ...


ಅಷ್ಟರಲ್ಲೇ ಮತ್ತೊಮ್ಮೆ ನಮ್ಮ ಬೋಗಿಯಲ್ಲಿನ ಪ್ರಯಾಣಿಕರೆಲ್ಲ ತಮ್ಮ ಬ್ಯಾಗ್ ಕೆಳಗಿಳಿಸಿ ಟಿಕೆಟ್ ಹೊರ ತೆಗೆಯತೊಡಗಿದರು..ನೋಡಿದರೆ ಇನ್ನೊಬ್ಬ TC ಪ್ರತ್ಯಕ್ಷನಾಗಿದ್ದ...!! ಆದರೆ ನಮಗೀಗ ಧೈರ್ಯ ಬಂದಿತ್ತು.. ಆಗಲೇ ಒಬ್ಬ ಟೀಸಿ ಎಲ್ಲವನ್ನೂ ಪರೀಕ್ಷಿಸಿ ಓಕೇ ಅಂತ ಹೇಳಿದ್ದನಲ್ಲ..! ನಾವೂ ಟಿಕೆಟ್ ಕೈಲಿ ಹಿಡಿದು ನಿಂತೆವು...


ಬಾರಿ ನನ್ನ ಕೊಲೀಗ್ ಎರಡೂ ಟಿಕೆಟ್ ಮತ್ತು ತನ್ನ ಡ್ರೈವಿಂಗ್ ಲೈಸೆನ್ಸ್ ಕೊಟ್ಟ...


"ಎರಡು ಟಿಕೆಟ್ ಇದೆ.. ಇನ್ನೊಂದು ಐಡೀ ಎಲ್ಲಿ ಸರ್..?? ಒಂದೇ ಕೊಟ್ಟಿದ್ದೀರಾ... " TC ಕೇಳಿದ...


"ಎರಡೂ ಟಿಕೆಟ್ ಮಾಡಿದ್ದು ಒಬ್ಬರೇ ಸರ್.. ಅದಕ್ಕೇ ಒಂದೇ ಐಡೀ ಕೊಟ್ಟಿರೋದು" ನನ್ನ ಕೊಲೀಗ್ ಉತ್ತರ...


"ಅದು ಹೇಗೆ ಆಗತ್ತೆ..?? ಎರಡು ಪ್ರತ್ಯೇಕ ಟಿಕೆಟ್ ಇದೆ ಅಂದ್ರೆ, ಎರಡು ಪ್ರತ್ಯೇಕ ಐಡೀ ಇರಲೇ ಬೇಕು... ಹತ್ತು ಜನರ ಹೆಸರಲ್ಲಿ ಒಂದೇ ಟಿಕೆಟ್ ಮಾಡಿಸಿ, ಒಂದೇ ಐಡೀ ಕೊಡಿ... ನಡೆಯುತ್ತೆ... ಆದರೆ ನೀವು ಕೊಟ್ಟಿರೋದು ಎರಡು ಟಿಕೆಟ್... ಮತ್ತೊಂದು ಐಡೀ ತೆಗೀರಿ ಬೇಗ..." TC ಧ್ವನಿ ಏರಿಸಿದ...


"ಆಗಲೇ ಇನ್ನೊಬ್ರು TC ಬಂದು, ಎಲ್ಲಾ check ಮಾಡಿ ಸಹಿ ಮಾಡಿ ಹೋಗಿದ್ದಾರೆ... ನಿಮಗೆ ಮತ್ತೇನು ಕಷ್ಟ..? ನಮ್ಮ ಬಳಿ ಇರೋದು ಒಂದೇ ಐಡೀ ಪ್ರೂಫ್..." ಸಾರಿ ನಾನು ಸೋಲು ಒಪ್ಪಿಕೊಳ್ಳಲು ತಯಾರಿರಲಿಲ್ಲ...

"ಏನು ತಮಾಷೆ ಮಾಡ್ತಿದೀರಾ..?? ಟಿಕೆಟ್ ಮೇಲೆ ಸಹಿ ಎಲ್ಲಿದೆ...?? ನಿಜವಾಗಲೂ ಟಿಕೆಟ್ ವೆರಿಫೈ ಮಾಡ್ಸಿದ್ರಾ...?? ಇಲ್ಲಾ TC ಬಂದಾಗ ಮತ್ತೆಲ್ಲೋ ಅಡಗಿ ಕುಳ್ತಿದ್ರಾ...?? Rules ಅಂದ್ರೆ Rules.. ಹೆಚ್ಚಿಗೆ ಮಾತಾಡದೆ ಇನ್ನೊಂದು ಪ್ರೂಫ್ ತೋರ್ಸಿ... ಇಲ್ಲಾ ಅಂದ್ರೆ ದಂಡ ಕಟ್ಟಿ..." TC ಧ್ವನಿ ಕೇಳಿ ಪಕ್ಕದ ಬೋಗಿಯ ಒಂದಷ್ಟು ಪ್ರಯಾಣಿಕರೂ ಮಜಾ ಸವಿಯಲು ನಮ್ಮ ಬೋಗಿಯಲ್ಲಿ ತೂರಿಕೊಂಡರು...


ಅವನಿಂದ ಟಿಕೆಟ್ ತಗೊಂಡು ನೋಡಿದ ನಮಗೆ ಶಾಕ್ ಹೊಡೆದಂತೆ ಭಾಸವಾಯ್ತು...


ಮೊದಲು ಬಂದ TC ಎರಡೂ ಟಿಕೆಟ್ ಮೇಲೆ ಸಹಿ ಮಾಡಿದ್ದಾನೆ ಅಂತಲೇ ನಮ್ಮ ಕಲ್ಪನೆಯಾಗಿತ್ತು... ಆದರೆ ಮಹಾನುಭಾವ ಕೇವಲ ನನ್ನ ಕೊಲೀಗ್ ಟಿಕೆಟ್ ಮೇಲೆ ಮಾತ್ರ ಸಹಿ ಮಾಡಿದ್ದ...!!



"Rules ನಮಗೊಂದೇ apply ಆಗತ್ತಾ..?? ನಿಮಗೂ rules apply ಆಗಬೇಕು ತಾನೇ..? ಎಲ್ಲಿ ನಿಮ್ಮ uniform..? ನಿಮಗೂ ಒಂದು Identity Card ಅಂತ ಇರಬೇಕಲ್ಲ...! ಇಲ್ಲಾ ಅಂದ್ರೆ ನಿಮ್ಮನ್ನ ನಾವು ನಂಬೋದು ಹೇಗೆ..??" ನಮ್ಮ ಹುಂಬತನದ ಪ್ರಶ್ನೆ...!!


"ಒಹ್.. ನಿಮಗೂ ರೂಲ್ಸ್ ಗೊತ್ತು..! Uniform ಹಾಕಲೇ ಬೇಕಂತ ಯಾವುದೇ ನಿಯಮವಿಲ್ಲ.. ಇನ್ನು ನನ್ನ ID Card ವಿಷಯ... ಇಲ್ಲಿದೆ ನೋಡಿ... ಸರಿಯಾಗಿ ನೋಡಿಕೊಳ್ಳಿ... ಮತ್ತೀಗ ನಿಮ್ಮ ಇನ್ನೊಂದು ID Proof ಕೊಡಿ..." TC ತನ್ನ ID Card ನನ್ನ ಕೈಗಿತ್ತ..



"ಆಗಲ್ಲ ಸರ್.. ನಮ್ಮ ಬಳಿ ಇರೋದು ಒಂದೇ ID Card.. ಮತ್ತೆ ಆಗಲೇ ಮತ್ತೊಬ್ಬರು ಎಲ್ಲಾ verify ಮಾಡಿಯಾಗಿದೆ.. ಏನು ಮಾಡ್ತೀರೋ ಮಾಡಿಕೊಳ್ಳಿ..." ನಾವೂ ಧ್ವನಿ ಏರಿಸಿದೆವು...



"ಆಯ್ತು ಹಾಗಿದ್ರೆ... ಮುಂದಿನ station ನಲ್ಲಿ ಇಳಿದುಕೊಂಡು ಮಾತಾಡೋಣ.. ದಂಡ ಕಟ್ಟಿದರೆ ಸರಿ.. ಇಲ್ಲಾ ಅಂದ್ರೆ ನಿಮ್ಮನ್ನ ಇಲ್ಲೇ ಇಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ....." TC ಹೇಳಿದ ಮುಂದಿನ ಕ್ರಮ ಯಾವುದಿರಬಹುದೆಂಬ ಕಲ್ಪನೆ ನನಗೂ ಇರಲಿಲ್ಲ...


ಎಲ್ಲವೂ ಅತಿಯಾಯ್ತು ಅಂತ ಅನಿಸಿತು.. ಆಗಲೇ ಬೋಗಿಯಲ್ಲಿ ನಾವು ತಮಾಷೆಯ ವಸ್ತುವಾಗಿಯಾಗಿತ್ತು... ಇವತ್ತೂ ರೀತಿ ಖರ್ಚು ಮಾಡೋದು ನಮ್ಮ ಹಣೆಯಲ್ಲಿ ಬರೆದಿತ್ತು... ಅದೂ ಕೇವಲ 377 ರೂಪಾಯಿ ಗಳಿಗೆ ನಾವು ಇಷ್ಟೆಲ್ಲಾ ಗಲಾಟೆ ಮಾಡಿಕೊಂಡೆವಲ್ಲಾ ಅನ್ನಿಸತೊಡಗಿತು... 500 ಒಂದು ನೋಟು ತೆಗೆದು ಅವನ ಕೈಗಿತ್ತೆ... ಅವನು ರಸೀತಿ ಬರೆಯತೊಡಗಿದ...


" 250 ರೂ.ದಂಡ ಮತ್ತು ಟಿಕೆಟ್ 127 ರೂ. ಎರಡೂ ಸೇರಿ 377 ರೂ ಕಟ್ಟಬೇಕು... 500 ರೂ ಕೊಟ್ಟಿದ್ದೀರ.. ಇನ್ನು ಎರಡು ರೂಪಾಯಿ ಚಿಲ್ಲರೆ ಇದ್ರೆ ಕೊಡಿ.. ನಿಮಗೆ 125 ರೂ ವಾಪಸ್ ಕೊಡ್ತೇನೆ.." TC ರಸೀತಿ ಕೈಗಿಡುತ್ತಾ ಹೇಳಿದ...

ಯಾವತ್ತೂ ತಾಳ್ಮೆ ಕಳೆದುಕೊಳ್ಳದ ನನಗೆ ಅವತ್ತು ಏನಾಯ್ತೋ ಗೊತ್ತಿಲ್ಲ...


" ಚಿಲ್ಲರೆ ಏಕೆ ವಾಪಸ್ ಕೊಡ್ತೀರಾ..?? ನೀವೇ ಇಟ್ಟುಕೊಳ್ಳಿ...!" ನನ್ನಲ್ಲಿನ ಅಹಂ ಮಾತನಾಡಿತ್ತು..


"Mind your tongue mister...! ಮೈ ಮೇಲೆ ಎಚ್ಚರ ಇದ್ದು ರೀತಿ ಮಾತಾಡ್ತಿದೀರಾ ತಾನೇ..? ನಾಲಿಗೆ ಮೇಲೆ ಸ್ವಲ್ಪ ಹಿಡಿತ ಇಟ್ಟು ಮಾತಾಡಿ.. ಸರ್ಕಾರ ನಮಗೆ ಸಂಬಳ ಕೊಡುತ್ತೆ... ನಿಮ್ಮ ಚಿಲ್ಲರೆ ಇಟ್ಟುಕೊಂಡು ನನ್ನ ಜೀವನ ಸಾಗಿಸೋ ದುರ್ಗತಿ ನನಗೆ ಬಂದಿಲ್ಲ... ಏನೋ ಒಳ್ಳೇ ಓದಿ ಒಳ್ಳೇ job ಮಾಡ್ತಿರೋರ ಹಾಗೆ ಕಾಣಿಸ್ತೀರ... ನಿಮ್ಮ ಅಹಂಕಾರದ ಮಾತುಗಳೇನಿದ್ರೂ ನಿಮ್ಮ ಬಳಿಯೆ ಇಟ್ಟುಕೊಳ್ಳಿ.. ಮತ್ತೆ ಇಂತ ತಪ್ಪು ಮಾಡಬೇಡಿ" ಹೇಳಿ 125 ರೂ ನನ್ನ ಕೈಗಿತ್ತು ಆತ ಇಳಿದು ಹೊರಟು ಹೋದ...


ಎಲ್ಲರ ಮುಂದೆ ಉಗಿಸಿಕೊಂಡ ನನ್ನ ಗತಿ ದೇವರಿಗೆ ಪ್ರೀತಿ ಅನ್ನುವಂತಿತ್ತು... ಹೌದು.. ತಪ್ಪೆಲ್ಲ ನಮ್ಮದೇ ಇತ್ತು.. ಟಿಕೆಟ್ ಮೇಲಿನ ನಿಯಮಗಳನ್ನ ಸರಿಯಾಗಿ ಓದದೇ ಇದ್ದದ್ದು, ಜೊತೆಗೆ ID Card ತಗೊಂಡು ಹೋಗದೇ ಇದ್ದದ್ದು, ಮೊದಲ TC verification ಮುಗಿಸಿದಾಗ ಸಹಿ ಮಾಡಿದ್ದಾನಾ ಇಲ್ವಾ ಅಂತ ನೋಡದೇ ಇದ್ದದ್ದು, ಅನಾವಶ್ಯಕವಾಗಿ ಜಗಳಕ್ಕೆ ನಿಂತು ನಗೆಪಾಟಲಿಗೆ ಗುರಿಯಾಗಿದ್ದು.. ಒಂದೇ ಎರಡೇ..!!? ಒಂದರ ನಂತರ ಒಂದರಂತೆ ತಪ್ಪುಗಳ ಸರಮಾಲೆ...


TC ತನ್ನ ಕೆಲಸ ಸರಿಯಾಗೇ ಮಾಡಿದ್ದ.. ಆಮೇಲೆ ನನಗೆ ಅನಿಸಿದ್ದಿಷ್ಟು.. ಸರ್ಕಾರದ ಎಲ್ಲ ಆಯಕಟ್ಟಿನ ಹುದ್ದೆಗಳಲ್ಲೂ ಇಂತಹ ನಿಷ್ಠಾವಂತ ಅಧಿಕಾರಿಗಳಿದ್ದರೆ ನಮ್ಮ ದೇಶದಲ್ಲಿ ಆಗ್ತಿರೋ ಎಷ್ಟೋ ಅವಗಡಗಳನ್ನ ತಪ್ಪಿಸಬಹುದಿತ್ತು.. ಅದೆಷ್ಟೋ ಪಾತಕಿಗಳನ್ನ, ದೇಶದ್ರೋಹಿಗಳನ್ನ ಸದೆಬಡಿಯಬಹುದಿತ್ತು..


ನಾನು ಮತ್ತದೇ ಟ್ರೈನ್ ನಲ್ಲಿ ಊರಿಗೆ ಹೋಗಲು ಎದುರು ನೋಡುತ್ತಿದ್ದೇನೆ.. ಬಾರಿ ID Card ಇಟ್ಟುಕೊಂಡೇ ಹೋಗ್ತೇನೆ... ಅದೇ TC ಮತ್ತೆ ಸಿಕ್ಕರೆ ಹಿಂದೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಅವನ ಪ್ರಾಮಾಣಿಕತೆಗೊಂದು ಸಲ್ಯೂಟ್ ಹೊಡೆಯುತ್ತೇನೆ...!!

Monday, 21 September 2009

ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೧


ಊರಿಗೆ ಹೋಗಲೇ ಬೇಕಿತ್ತು... ಕಳೆದ ಮೂರು ನಾಲ್ಕು ವರ್ಷಗಳಿಂದ ಗಣೇಶ ಚತುರ್ಥಿ ಗೆ ಊರಿಗೆ ಹೋಗಿರಲಿಲ್ಲ... ನಮ್ಮ ಉತ್ತರ ಕನ್ನಡದ ಮಂದಿಗೆ ಗಣೇಶ ಚತುರ್ಥಿಯೆಂದರೆ ಅದೇನೋ ಸಡಗರ, ಸಂಭ್ರಮ... ದೀಪಾವಳಿ, ನವರಾತ್ರಿ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪ್ರಥಮ ಪೂಜಿತ ಗಣೇಶನ ಹಬ್ಬಕ್ಕೆ... ಆದರೆ ಕಳೆದ ಕೆಲವು ವರ್ಷಗಳಿಂದ ನನ್ನ ಉದ್ಯೋಗ ಈ ಸಡಗರ ಸಂಭ್ರಮ ಗಳಿಂದ ನನ್ನನ್ನು ದೂರ ಮಾಡಿತ್ತು..

ಆದರೆ ಈ ಬಾರಿ ತಪ್ಪದೇ ಹಬ್ಬಕ್ಕೆ ಊರಿಗೆ ಹೋಗಲೇ ಬೇಕೆಂದು ಗಟ್ಟಿ ಮನಸ್ಸು ಮಾಡಿದ್ದೆ... ನನ್ನ ಬಾಸ್ ಗೆ ರಜೆಯ ಮನವಿಯನ್ನೂ ಸಲ್ಲಿಸಿದ್ದಾಯ್ತು.. ಮಹಾಶಯ ಕೇಳಬೇಕಲ್ಲ.. ಸತಾಯಿಸಿ ಸತಾಯಿಸಿ ಕೊನೇ ಕ್ಷಣದಲ್ಲಿ ರಜೆ sanction ಆಯ್ತು... ಆದರೆ ಟಿಕೆಟ್..? ಸುಗಮ, VRL, KSRTC ಸೇರಿದಂತೆ ಎಲ್ಲ ಬಸ್ಸುಗಳೂ ೧೫ ದಿನಗಳ ಮುಂಚೆಯೇ ಭರ್ತಿಯಾಗಿದ್ದವಂತೆ...

ಇನ್ನೇನು ಮಾಡುವದು ಎನ್ನುವ ಯೋಚನೆಯಲ್ಲಿರುವಾಗಲೇ ನನ್ನ ಕೊಲೀಗ್ ಒಬ್ಬ ಸಹಾಯಕ್ಕೆ ಬಂದ.. ಅವನ ಊರು ಧಾರವಾಡ... ಶತಾಬ್ದಿ ಟ್ರೈನ್ ನಲ್ಲಿ ಹೋಗೋಣ.. ಟಿಕೆಟ್ ನ ಜವಾಬ್ದಾರಿ ನನಗೆ ಬಿಡಿ.. ಹಾವೇರಿಯಲ್ಲಿ ಇಳಿದುಕೊಂಡ್ರೆ ನಿಮ್ಮ ಊರಿಗೆ ಬೇಕಾದಷ್ಟು ಬಸ್ ಸಿಗುತ್ತವೆ.. ಮಧ್ಯಾಹ್ನ ೧.೩೦ - ೨ ಗಂಟೆಯೊಳಗೆ ನೀವು ಮನೆ ತಲುಪಬಹುದು ಅಂತ ಹೆಳಿದ... ಅವನ ಸಲಹೆ ನನಗೂ ಇಷ್ಟವಾಯ್ತು... ಆಯ್ತು ಮಾರಾಯ.. ನನಗೂ ಒಂದು ಟಿಕೆಟ್ ಮಾಡಿಸು ಅಂತ ಹೇಳಿದ್ದಾಯ್ತು..

ಕೊನೇ ಕ್ಷಣದಲ್ಲಿ ಟಿಕೆಟ್ ಮಾಡಿಸಿದ್ದರಿಂದ ಇಬ್ಬರಿಗೂ ಬೇರೆ ಬೇರೆ ಕಡೆ ಸೀಟ್ ಸಿಕ್ಕಿತ್ತು... ಒಂದೇ ಬೋಗಿಯಲ್ಲಿ ಸಿಕ್ಕಿದ್ದು ನಮ್ಮ ಅದೃಷ್ಟ..! ಕೊನೆಗೂ ಅಕ್ಕ ಪಕ್ಕ ಕುಳಿತವರೊಡನೆ ಹೊಂದಾಣಿಕೆ ಮಾಡಿಕೊಂಡು ಒಂದೇ ಕಡೆ ಕುಳಿತೆವು... ಬೆಳಿಗ್ಗೆ ಆಫೀಸ್ ನಿಂದ ಹಾಗೆ ಹೊರಟಿದ್ದರೂ ನಿದ್ದೆ ಬರುವ ಯಾವ ಲಕ್ಷಣವೂ ಕಾಣಿಸುತ್ತಿರಲಿಲ್ಲ... ಅದೂ ಇದು ಮಾತಾಡುತ್ತ, ಬೇಸರ ಬಂದರೆ ಟ್ರೈನ್ ನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ತಿರುಗುತ್ತ ಸಮಯ ಹೋದದ್ದೇ ತಿಳಿಯಲಿಲ್ಲ...

ಇಡ್ಲಿ ವಡೆ ತಿಂದು ಹೊಟ್ಟೆಯನ್ನು ಸ್ವಲ್ಪ ತಣ್ಣಗಾಗಿಸಿ ಚಹಾ ಕುಡಿಯುತ್ತಾ ಕುಳಿತೆವು.. ಅಷ್ಟರಲ್ಲಿ ನಾವಿದ್ದ ಬೋಗಿಯಲ್ಲಿ TC ಯ ಪ್ರವೇಶವಾಯ್ತು... TC ಹತ್ತಿರ ಬರುತ್ತಲೇ ನನ್ನ ಕೊಲೀಗ್ ಬ್ಯಾಗ್ನಿಂದ ಟಿಕೆಟ್ ಹೊರ ತೆಗೆದ... ಆನ್‌ಲೈನ್ ಬುಕ್ ಮಾಡಿಸಿದ್ದ ಎರಡು ಪ್ರತ್ಯೇಕ ಟಿಕೆಟ್ಟುಗಳು... ಒಂದು ನನ್ನದು... ಹಾವೇರಿ ವರೆಗಿನದ್ದು... ಇನ್ನೊಂದು ಅವನದ್ದು.. ಧಾರವಾಡ ವರೆಗಿನದು...ಅಲ್ಲಿಯವರೆಗೂ ನಾನು ಟಿಕೆಟ್ ನೋಡಿರಲಿಲ್ಲ....

TC ಕೊಲೀಗ್ ಬಳಿ ಐಡೆಂಟಿಟೀ ಪ್ರೂಫ್ ಕೇಳಿದ... ಅವ ತನ್ನ ಬಳಿಯಿದ್ದ ಡ್ರೈವಿಂಗ್ ಲೈಸೆನ್ಸ್ ತೆಗೆದು ತೋರಿಸಿದ.. ಈಗ ನನ್ನ ಸರದಿ.. TC ನನ್ನ ಬಳಿಯೂ ಐಡೆಂಟಿಟೀ ಪ್ರೂಫ್ ಕೇಳಿದ.. ನನ್ನ ಬಳಿ ನನ್ನ ಆಫೀಸ್ ಐಡೆಂಟಿಟೀ ಕಾರ್ಡ್ ಬಿಟ್ಟರೆ ಮತ್ತೇನು ಇರಲಿಲ್ಲ... ಟಿಕೆಟ್ ಮೇಲಿನ ಸೂಚನೆಗಳ ಪ್ರಕಾರ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಎಲೆಕ್ಶನ್ ವೋಟರ್ ಐಡೆಂಟಿಟೀ ಕಾರ್ಡ್ ಅಥವಾ ಸರ್ಕಾರ ಅನುಮೋದಿಸಿರುವ ಇತರ ಯಾವುದೇ ಐಡೆಂಟಿಟೀ ಕಾರ್ಡ್ ಗಳಲ್ಲಿ ಯಾವುದಾದರೂ ಒಂದನ್ನು TC ಕೇಳಿದಾಗ ತೋರಿಸಲೇ ಬೇಕಿತ್ತು.. ಇಂಟರ್‌ನೆಟ್ ಮೂಲಕ ಟಿಕೆಟ್ ಬುಕ್ ಮಾಡಿಸಿದವರಿಗೆ ಮಾತ್ರ ಈ ನಿಯಮ... ಪ್ರಯಾಣಿಕನ ಬಳಿ ಪ್ರಯಾಣದ ಸಮಯದಲ್ಲಿ ಯಾವುದೇ ಐಡೆಂಟಿಟೀ ಕಾರ್ಡ್ ಇಲ್ಲವೆಂದಾದರೆ ಅದು ಟಿಕೆಟ್ ರಹಿತ ಪ್ರಯಾಣಕ್ಕೆ ಸಮ.... ಟಿಕೆಟ್ ನ ಹಣ, ಜೊತೆಗೆ ಅದರ ಎರಡರಷ್ಟು ಫೈನ್ ಕಟ್ಟಬೇಕಿತ್ತು...!! ನಾನು ಪೇಚಿನಲ್ಲಿ ಸಿಲುಕಿದೆ... TC ಇನ್ನೊಮ್ಮೆ ಗಟ್ಟಿಯಾಗಿ ಕೇಳಿದ.. " Show me any one of the Identity cards listed on your ticket.... ಯಾವುದಾದ್ರೂ ಒಂದು ಗುರುತಿನ ಚೀಟಿ ನಿಮ್ಮ ಬಳಿ ಇದ್ರೆ ತೋರ್ಸಿ.." ಒಂದರೆ ಕ್ಷಣ ನಾನು ನನ್ನ ಕೊಲೀಗ್ ಮುಖವನ್ನ, ಮತ್ತೆ TC ಮುಖವನ್ನ ನೋಡುತ್ತ ನಿಂತುಬಿಟ್ಟೆ...


(ಮುಂದುವರೆಯುವದು......)