Monday, 20 May 2013

ಅಂಕಿತ...!!




ಕೂಸು ಹುಟ್ಟುವ ಮೊದಲೇ
ಕುಲಾವಿ ತರುವ ಇಂಗಿತ
ಕಾವ್ಯ ಕಟ್ಟುವ ಮೊದಲೇ 
ಬರೆದು ನೊಂದಿಹೆ ಅಂಕಿತ..!

ಪಾಳು ಗೋಡೆಗಳ ನಡುವೆ
ಹುಟ್ಟೀತೆ ಹಾಳು ಕವಿತೆಗಳು..?
ಬಿಡಿಸಿದಷ್ಟು ಮತ್ತೆ ಬೆಸೆವ
ಭಾವಗಳ ಜಠಿಲ ಜಡಕುಗಳಲ್ಲಿ
ಎದೆಯಾಳದ ಆರ್ತನಾದ 
ಬಿಡುಗಡೆಯ ಕಾಣದೆ ಬಂಧಿತ..

ದ್ವೇಷದ ಬಿರುಗಾಳಿ ಬೀಸೆ
ಬೆಳಗೀತೆ ಬಾಳ ಹಣತೆಗಳು..?
ನಾನು ನನದು ಎನುತ ಕುಣಿವ 
ಮಂದಮತಿಗಳ ಮಂದೆಯಲ್ಲಿ
ನಗುವ ಮರೆಸಿ ಸ್ವಾರ್ಥ ಮೆರೆಯೆ
ನೋವಿನಂಧಕಾರ ಸಂತತ..

ನೆತ್ತರ ಮಳೆಯದು ಸುರಿಯೆ 
ಚಿಗುರೀತೆ ಒಲವ ಕುಡಿಗಳು..?
ಜೀವ ಕಸಿದು ಸಾವ ಬಿಕರಿ 
ಎಡೆಬಿಡದೆ ನಡೆವ ಸಂತೆಯಲ್ಲಿ..
ಗೋರಿ ತೋಡಿ ಮಲಗಿವೆ 
ಕನಸುಗಳು ನೂರು ಅಂಗತ..

ನೀರು ಬತ್ತಿದ ಕಣ್ಣುಗಳಲ್ಲಿ
ಇನ್ನಿಲ್ಲ ಜೀವದಿಂಗಿತ...
ಕಾವ್ಯ ಕಟ್ಟುವ ಮೊದಲೇ 
ಬರೆದು ನೊಂದಿಹೆ ಅಂಕಿತ...!!

ಚಿತ್ರಕೃಪೆ: http://belgarion11.deviantart.com/art/Blood-rain-210965518

3 comments:

  1. ನನಗೂ ಕೆಲವೊಮ್ಮೆ
    "ಎದೆಯಾಳದ ಆರ್ತನಾದ
    ಬಿಡುಗಡೆಯ ಕಾಣದೆ ಬಂಧಿತ.."
    ಕವಿತೆ ಹುಟ್ಟು ಬಹಳ ಕಷ್ಟ ಮಾರಾಯ್ರೇ...

    http://badari-poems.blogspot.in/

    ReplyDelete
    Replies
    1. ಈ ಕವಿಗಳ ಹಣೆಪಟ್ಟಿ ಹೊರೋದು ಕಷ್ಟ ಸರ್.. ಒಮ್ಮೊಮ್ಮೆ ಹೀಗೆ ಬಂಧಿತ ಭಾವಗಳನ್ನ ಕಾರಿಕೊಳ್ಳೋದು ಅನಿವಾರ್ಯ.. ಬಿಡುಗಡೆ ಮಾಡದಿದ್ರೆ ಒಳಗೆ ಭಾದಿಸುತ್ತಲೆ ಇರ್ತಾವೆ..

      Delete
  2. ಭಾವಗಳ ಜಠಿಲ ಜಡಕುಗಳಲ್ಲಿ
    ಎದೆಯಾಳದ ಆರ್ತನಾದ
    ಬಿಡುಗಡೆಯ ಕಾಣದೆ ಬಂಧಿತ..

    ಎಷ್ಟೋ ಭಾವಗಳೇ ಹಾಗೆ , ಕಾಡುತ್ತಿರುತ್ತವೆ , ಹೊರಹಾಕಿ ಹಗುರವಾಗುವಂತಿಲ್ಲ , ಅಪ್ಪಿಕೊಂಡು ಕೂರುವಂತೆಯೂ ಇಲ್ಲ.

    ನೆತ್ತರ ಮಳೆಯದು ಸುರಿಯೆ
    ಚಿಗುರೀತೆ ಒಲವ ಕುಡಿಗಳು..?

    ತುಂಬಾ ಇಷ್ಟವಾಯ್ತು ಸಾಲುಗಳು .. ಅರಿತುಕೊಂಡಷ್ಟು ಆಳವಾಗುತ್ತ ಹೋಗುತ್ತೆ ಕವಿತೆ ..

    ReplyDelete