Wednesday, 15 May 2013

ಅಂತರಗಳು..!!





ಅಂತರಗಳು.. ಬಾಳ ಆಳಗಳಲ್ಲಿ
ಬೇರು ಬಿಟ್ಟ ಭದ್ರ ಭುನಾದಿಗಳು

ಅಂತರ.. ಭೂಮಿ ಆಗಸದ ನಡುವಿನದ್ದು
ಅಂತರ..ಶಶಿ ಮುಳುಗಿ 
ರವಿ ಬೆಳಗುವ ವರೆಗಿನದ್ದು...

ಆದರೆ ಈ ಅಂತರಗಳ ನಡುವೆಯೇ
ನಮ್ಮ ಅಸ್ತಿತ್ವ ಭರವಸೆಯ ಉಸಿರೆಳೆದು
ಬಸಿರು ಹೊತ್ತು ಹೆರುವುದು..!

ಈಗೀಗ ಈ ಅಂತರಗಳೇ 
ಮಹತ್ವ ಪಡೆದು ಎದೆಗೆ 
ಅವುಚಿಕೊಳ್ಳುವಷ್ಟು ಆಪ್ತವಾಗುತ್ತಿವೆ...

ಅಂತರ.. ಪಯಣಿಗ ಮತ್ತು ಗುರಿಯ ನಡುವಿನದ್ದು
ಅಂತರ.. ಕನಸು ಮತ್ತು ಹಕೀಕತ್ತಿನ ನಡುವಿನದ್ದು
ಅಂತರ.. ಭರವಸೆ ಮತ್ತು ಭ್ರಮೆಯ ನಡುವಿನದ್ದು
ಅಂತರ.. ನದಿಯ ಎರಡು ತೀರಗಳ ನಡುವಿನದ್ದು
ಅಂತರ... ಉಷೆ ಮತ್ತು ಕ್ಷಿತಿಜದ ನಡುವಿನದ್ದು

ಅಂತರವಿದ್ದರೆ ಮಾತ್ರ ತೀರಗಳು
ತೀರವಿದ್ದರೆ ಮಾತ್ರ ಹರಿವು
ಹರಿವಿದ್ದರೆ ಮಾತ್ರ ನದಿ..
ನದಿ ಇದ್ದಲ್ಲಿ ಇಹುದು ಹಿಡಿ ಪ್ರೀತಿ..!

ಜೀವನದ ಈ ಪ್ರೀತಿಯನ್ನೇ 
ಜೀವಿಸಿಹೆ ಈ ಅಂತರಗಳ ನಡುವೆ..
ಈ ಅಂತರಗಳಲ್ಲೇ ಮೂಡಿದ
ಮೊದ ಮೊದಲ ಮಧುರ ಅನುರಾಗ
ನನ್ನ ಸಂವೇಧನೆಗಳಿಗೆ ಮಿಡಿವ 
ಉತ್ಸಾಹ ತುಂಬುತ್ತಲೇ ಇರುತ್ತವೆ..

ಮತ್ತೆ ನಮ್ಮ ನಮ್ಮ ಗೂಡುಗಳಲ್ಲಿ
ಭದ್ರವಾಗಿ ಮಂಡಿಯೂರಿ ಕುಳಿತು
ಕಿಸಕ್ಕನೆ ನಗುತ್ತಿರುತ್ತವೆ..
ನಾನು..... ನೀನು...
ಎಂಬೀ ಅಂತರಗಳು...!

4 comments:

  1. ಅಂತರಗಳ ಬಗೆಗೆ ಅತ್ಯಂತ ಮನ ಮುಟ್ಟುವ ಕವನ. ಪಕ್ಕದಲ್ಲೇ ಇದ್ದರೂ ಮನೆಗಳಲ್ಲಿ ಅಂತರ ಕಾಯ್ದುಕೊಳ್ಳುವ ನಮ್ಮ ಪೆಡ್ಡತನಕೆ ಎನನ್ನುವರೋ ಕವಿ ಮಹಾಶಯರು!

    ReplyDelete

  2. ಅಂತರ.. ಕನಸು ಮತ್ತು ಹಕೀಕತ್ತಿನ ನಡುವಿನದ್ದು
    ಅಂತರ.. ಭರವಸೆ ಮತ್ತು ಭ್ರಮೆಯ ನಡುವಿನದ್ದು
    ಚಂದದ ಸಾಲುಗಳು ...
    ಕೆಲವೊಮ್ಮೆ ಈ ಅಂತರಗಳೇ ಸಂಬಂಧಗಳನ್ನು , ಕನಸುಗಳ ಜೀವಂತಿಕೆಯನ್ನು ಉಳಿಸಬಲ್ಲವೇನೋ ...

    ReplyDelete
  3. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಬದರೀ ಸರ್.. ಹಾಗೆ ಆಗಾಗ ಸಿಗುವ ಅಂತರಗಳು ಸಾಮೀಪ್ಯದ ಮಹತ್ವ ಅರಿವಾಗುವ ಹಾಗೆ ಮಾಡ್ತಾವೆ ಅಂತ ನನ್ನ ಅನಿಸಿಕೆ.. ಅಂತರ ಅತಿಯಾದರೆ ಕಷ್ಟ..

    ReplyDelete
  4. ಧನ್ಯವಾದಗಳು ಸಂಧ್ಯಾ.. ಕವನದ ಆಶಯವೂ ಅದೇ.. ಹಿತ ಮಿತವಾದ ಅಂತರಗಳ ಮಹತ್ವ ಕಂಡುಕೊಳ್ಳೋದು...

    ReplyDelete