Friday, 24 May 2013

ಅವನು ನನ್ನೊಳಗೇ ಇರಲಿ..!!

ಕಡಲ ತೀರದಿ
ಅವನ ಹೆಸರು ಬರೆದೆ
ಅಲೆ ಬಂದು ಅಳಿಸಿತು...
ಒಡಲ ಆಳದಿ ಇನ್ನು
ಅಲೆಗಳು ಏಳುವುದಿಲ್ಲ...!!

ಮಿನುಗುವ ನಕ್ಷತ್ರಕೆ
ಅವನ ಹೆಸರಿಟ್ಟೆ
ಮೋಡ ಬಂದು ಮರೆಸಿತು...
ಹೊಳೆವ ಕಣ್ಣುಗಳಲಿನ್ನು
ಮೋಡ ಕಟ್ಟುವುದಿಲ್ಲ...!!

ಮುಡಿದ ಮಲ್ಲಿಗೆ ಗಂಧ
ಅವಗೆ ಮುಡಿಪೆಂದೆ..
ಗಾಳಿ ಬಂದು ಹೊತ್ತೊಯ್ದಿತು..
ಮನದ ಕಿಡಕಿಯ ಕದವ
ಇನ್ನು ತೆರೆಯುವುದಿಲ್ಲ...!!

ಕವಿತೆಯ ಪ್ರತಿ ಸಾಲಲ್ಲು
ಅವನಿರುವ ಕಂಡೆ..
ಹಾಡುಗನ ಕಂಠದಲಿ ಲೀನವಾಯ್ತು..
ಎದೆಯ ಆಸೆಗಳಿನ್ನು
ಹಾಡಾಗುವುದಿಲ್ಲ...!!

Monday, 20 May 2013

ಅಂಕಿತ...!!




ಕೂಸು ಹುಟ್ಟುವ ಮೊದಲೇ
ಕುಲಾವಿ ತರುವ ಇಂಗಿತ
ಕಾವ್ಯ ಕಟ್ಟುವ ಮೊದಲೇ 
ಬರೆದು ನೊಂದಿಹೆ ಅಂಕಿತ..!

ಪಾಳು ಗೋಡೆಗಳ ನಡುವೆ
ಹುಟ್ಟೀತೆ ಹಾಳು ಕವಿತೆಗಳು..?
ಬಿಡಿಸಿದಷ್ಟು ಮತ್ತೆ ಬೆಸೆವ
ಭಾವಗಳ ಜಠಿಲ ಜಡಕುಗಳಲ್ಲಿ
ಎದೆಯಾಳದ ಆರ್ತನಾದ 
ಬಿಡುಗಡೆಯ ಕಾಣದೆ ಬಂಧಿತ..

ದ್ವೇಷದ ಬಿರುಗಾಳಿ ಬೀಸೆ
ಬೆಳಗೀತೆ ಬಾಳ ಹಣತೆಗಳು..?
ನಾನು ನನದು ಎನುತ ಕುಣಿವ 
ಮಂದಮತಿಗಳ ಮಂದೆಯಲ್ಲಿ
ನಗುವ ಮರೆಸಿ ಸ್ವಾರ್ಥ ಮೆರೆಯೆ
ನೋವಿನಂಧಕಾರ ಸಂತತ..

ನೆತ್ತರ ಮಳೆಯದು ಸುರಿಯೆ 
ಚಿಗುರೀತೆ ಒಲವ ಕುಡಿಗಳು..?
ಜೀವ ಕಸಿದು ಸಾವ ಬಿಕರಿ 
ಎಡೆಬಿಡದೆ ನಡೆವ ಸಂತೆಯಲ್ಲಿ..
ಗೋರಿ ತೋಡಿ ಮಲಗಿವೆ 
ಕನಸುಗಳು ನೂರು ಅಂಗತ..

ನೀರು ಬತ್ತಿದ ಕಣ್ಣುಗಳಲ್ಲಿ
ಇನ್ನಿಲ್ಲ ಜೀವದಿಂಗಿತ...
ಕಾವ್ಯ ಕಟ್ಟುವ ಮೊದಲೇ 
ಬರೆದು ನೊಂದಿಹೆ ಅಂಕಿತ...!!

ಚಿತ್ರಕೃಪೆ: http://belgarion11.deviantart.com/art/Blood-rain-210965518

Wednesday, 15 May 2013

ಅಂತರಗಳು..!!





ಅಂತರಗಳು.. ಬಾಳ ಆಳಗಳಲ್ಲಿ
ಬೇರು ಬಿಟ್ಟ ಭದ್ರ ಭುನಾದಿಗಳು

ಅಂತರ.. ಭೂಮಿ ಆಗಸದ ನಡುವಿನದ್ದು
ಅಂತರ..ಶಶಿ ಮುಳುಗಿ 
ರವಿ ಬೆಳಗುವ ವರೆಗಿನದ್ದು...

ಆದರೆ ಈ ಅಂತರಗಳ ನಡುವೆಯೇ
ನಮ್ಮ ಅಸ್ತಿತ್ವ ಭರವಸೆಯ ಉಸಿರೆಳೆದು
ಬಸಿರು ಹೊತ್ತು ಹೆರುವುದು..!

ಈಗೀಗ ಈ ಅಂತರಗಳೇ 
ಮಹತ್ವ ಪಡೆದು ಎದೆಗೆ 
ಅವುಚಿಕೊಳ್ಳುವಷ್ಟು ಆಪ್ತವಾಗುತ್ತಿವೆ...

ಅಂತರ.. ಪಯಣಿಗ ಮತ್ತು ಗುರಿಯ ನಡುವಿನದ್ದು
ಅಂತರ.. ಕನಸು ಮತ್ತು ಹಕೀಕತ್ತಿನ ನಡುವಿನದ್ದು
ಅಂತರ.. ಭರವಸೆ ಮತ್ತು ಭ್ರಮೆಯ ನಡುವಿನದ್ದು
ಅಂತರ.. ನದಿಯ ಎರಡು ತೀರಗಳ ನಡುವಿನದ್ದು
ಅಂತರ... ಉಷೆ ಮತ್ತು ಕ್ಷಿತಿಜದ ನಡುವಿನದ್ದು

ಅಂತರವಿದ್ದರೆ ಮಾತ್ರ ತೀರಗಳು
ತೀರವಿದ್ದರೆ ಮಾತ್ರ ಹರಿವು
ಹರಿವಿದ್ದರೆ ಮಾತ್ರ ನದಿ..
ನದಿ ಇದ್ದಲ್ಲಿ ಇಹುದು ಹಿಡಿ ಪ್ರೀತಿ..!

ಜೀವನದ ಈ ಪ್ರೀತಿಯನ್ನೇ 
ಜೀವಿಸಿಹೆ ಈ ಅಂತರಗಳ ನಡುವೆ..
ಈ ಅಂತರಗಳಲ್ಲೇ ಮೂಡಿದ
ಮೊದ ಮೊದಲ ಮಧುರ ಅನುರಾಗ
ನನ್ನ ಸಂವೇಧನೆಗಳಿಗೆ ಮಿಡಿವ 
ಉತ್ಸಾಹ ತುಂಬುತ್ತಲೇ ಇರುತ್ತವೆ..

ಮತ್ತೆ ನಮ್ಮ ನಮ್ಮ ಗೂಡುಗಳಲ್ಲಿ
ಭದ್ರವಾಗಿ ಮಂಡಿಯೂರಿ ಕುಳಿತು
ಕಿಸಕ್ಕನೆ ನಗುತ್ತಿರುತ್ತವೆ..
ನಾನು..... ನೀನು...
ಎಂಬೀ ಅಂತರಗಳು...!

Tuesday, 14 May 2013

ಬೆಳೆಯಬಾರದಿತ್ತು ನಾವು..!!






ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು
ಚಂದಮಾಮನೆಡೆಗೆ ಬರೆದ ಚೋಟುದ್ದದ ಏಣಿ..
ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು 
ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ..

ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು
ಅಜ್ಜಿ ಹೇಳೋ ಕಥೆಗಳಲ್ಲಿ ಚಿನ್ನದಂತ ರಾಣಿ...
ಅಪ್ಪನ ಕೈ ಹಿಡಿದು ನಡೆದ ಮರೆಯದೂರ ದಾರಿಗಳು
ಅಮ್ಮನ ಮಡಿಲಲ್ಲಿ ಕಲಿತ ಮುತ್ತಿನಂತ ವಾಣಿ... 

ಭೇದಭಾವ ಮರೆತು ಕಲೆತು ಆಡುತಿದ್ದ ಆಟಗಳು 
ಹಬ್ಬದುಡುಗೆ ತೊಟ್ಟು ಮೆರೆಯುತಿದ್ದ ಓಣಿ... 
ಎಲ್ಲ ಈಗ ಬಿಡದೆ ಕಾಡಿ ಕೊಲುವ ಕನಸುಗಳು 
ಬೆಳೆಯಬಾರದಿತ್ತು ನಾವು ನಂಬಿ ದೇವರಾಣಿ..!!





ಚಿತ್ರ ಕೃಪೆ:http://images.fineartamerica.com/