Wednesday, 23 June 2010

ವಿರಹ



ಮತ್ತೆ ಸುರಿಯಿತು ನಿನ್ನೆ
ಬಾನಿನೂರಿನ ಸೋನೆ..
ಕುಳಿತು ನೋಡಲು ಜೊತೆಗೆ ನೀನಿಲ್ಲ..
ಹೊಸತು ಗೀತೆಯ ಬರೆದು
ಹೃದಯ ವೀಣೆಯ ಮಿಡಿದು
ಬೆರೆತು ಹಾಡಲು ಗೆಳತಿ ನೀನಿಲ್ಲ..

ಕೈಬಳೆಯ ನಾದ
ಹುಸಿ ಮುನಿಸಿನಾ ವಾದ
ಹರುಷದಾ ಹೊಳೆಯಾಗಿ ನೀನಿಲ್ಲ...
ಸುಡುತಿಹುದು ವಿರಹ
ಸುಡುಗಾಡಿನಾ ತರಹ
ಜೀವದಾ ಸೆಲೆಯಾಗಿ ನೀನಿಲ್ಲ...

ಮನೆ ಮನವೆಲ್ಲ ಖಾಲಿ ಖಾಲಿ...
ಅರಸಿ ಸೋತಿಹೆ ಅರಸಿ..,
ನೀನಿಲ್ಲ.., ಇಲ್ಲೀಗ ನಾನೂ ಇಲ್ಲ...!

Tuesday, 15 June 2010

ಮಳೆ ಸಾಲು..!!



ಬೇಸಿಗೆಯ ಬೇಗೆಯಲಿ
ಬಿಡದೇ ಬೇಯಿಸಿದ
ಸೂರ್ಯ
ಇಂದೇಕೋ ಮೋಡಗಳ
ಮರೆಯಲ್ಲಿ ಅವಿತಿದ್ದಾನೆ....

ಮಳೆಹನಿಯ ಮತ್ತಲ್ಲಿ
ಮೈ ಮನವ ತೋಯಿಸಿದ
ವರುಣ
ಮತ್ಯಾಕೋ ಮಧುರ ನೆನಪುಗಳ
ಹೊತ್ತು ತಂದಿದ್ದಾನೆ...

ಮನದಂಗಳದಿ
ನೆನಪ ಹನಿ ವರ್ಷ
ಕಳೆದು ಹೋಗಲು ಸಾಕು...
ತೋಳ ತೆಕ್ಕೆಯಲಿ ನೀನಿರಲು ಸಖಿ
ಮತ್ತಿನ್ನೇನು ಬೇಕು...??