Wednesday, 23 June 2010

ವಿರಹ



ಮತ್ತೆ ಸುರಿಯಿತು ನಿನ್ನೆ
ಬಾನಿನೂರಿನ ಸೋನೆ..
ಕುಳಿತು ನೋಡಲು ಜೊತೆಗೆ ನೀನಿಲ್ಲ..
ಹೊಸತು ಗೀತೆಯ ಬರೆದು
ಹೃದಯ ವೀಣೆಯ ಮಿಡಿದು
ಬೆರೆತು ಹಾಡಲು ಗೆಳತಿ ನೀನಿಲ್ಲ..

ಕೈಬಳೆಯ ನಾದ
ಹುಸಿ ಮುನಿಸಿನಾ ವಾದ
ಹರುಷದಾ ಹೊಳೆಯಾಗಿ ನೀನಿಲ್ಲ...
ಸುಡುತಿಹುದು ವಿರಹ
ಸುಡುಗಾಡಿನಾ ತರಹ
ಜೀವದಾ ಸೆಲೆಯಾಗಿ ನೀನಿಲ್ಲ...

ಮನೆ ಮನವೆಲ್ಲ ಖಾಲಿ ಖಾಲಿ...
ಅರಸಿ ಸೋತಿಹೆ ಅರಸಿ..,
ನೀನಿಲ್ಲ.., ಇಲ್ಲೀಗ ನಾನೂ ಇಲ್ಲ...!

Tuesday, 15 June 2010

ಮಳೆ ಸಾಲು..!!



ಬೇಸಿಗೆಯ ಬೇಗೆಯಲಿ
ಬಿಡದೇ ಬೇಯಿಸಿದ
ಸೂರ್ಯ
ಇಂದೇಕೋ ಮೋಡಗಳ
ಮರೆಯಲ್ಲಿ ಅವಿತಿದ್ದಾನೆ....

ಮಳೆಹನಿಯ ಮತ್ತಲ್ಲಿ
ಮೈ ಮನವ ತೋಯಿಸಿದ
ವರುಣ
ಮತ್ಯಾಕೋ ಮಧುರ ನೆನಪುಗಳ
ಹೊತ್ತು ತಂದಿದ್ದಾನೆ...

ಮನದಂಗಳದಿ
ನೆನಪ ಹನಿ ವರ್ಷ
ಕಳೆದು ಹೋಗಲು ಸಾಕು...
ತೋಳ ತೆಕ್ಕೆಯಲಿ ನೀನಿರಲು ಸಖಿ
ಮತ್ತಿನ್ನೇನು ಬೇಕು...??

Wednesday, 9 December 2009

ಸಂಸತ್ತಿನ ಗಮ್ಮತ್ತು..!!





ಪರಿವರ್ತನೆ..!!


ಆಗ ಹೀಗಿರಲಿಲ್ಲ..
ಮುಖದಲ್ಲಿ ಮುಗ್ಧತೆ..
ತುಟಿಯಂಚಲ್ಲಿ ಕಿರುನಗೆ..
ಕಣ್ಣುಗಳಲ್ಲಿ ಕುತೂಹಲ..
ನಿನ್ನೆಯಷ್ಟೇ ಆತ ಕೇಳಿದ ನೆನಪು...
ನೋಡಿಯೇನ ಅಕ್ಕ..?
ಪಾತರಗಿತ್ತಿ ಪಕ್ಕ..??

ಕಾಲ ಚಕ್ರ ಉರುಳಿದೆ...
ಮಗು ಈಗ ಮಗುವಲ್ಲ...
ಮುಗ್ದತೆ ಎಲ್ಲೋ ಮಾಯವಾಗಿದೆ..
ಮುಖದಲ್ಲೀಗ ಕಪಟ ನಗು..
ಹಗಲು ರಾತ್ರಿ ಒಂದೇ ಯೋಚನೆ..
ಮುಗಿಯದ ಮೋಹ..ತೀರದ ದಾಹ..
ಮತ್ತೀಗ ಆತ ಯಾರ ಕೈಗೂ ಸಿಕ್ಕ..
ಈಗಲೂ ಬಟ್ಟೆ ಕಳಚಿ ಬಿದ್ದಿರಬೇಕು
ಅದೋ..ಅಲ್ಲೇ..
ದುಡ್ದೆಂಬ ಹಾದರಗಿತ್ತಿಯ ಪಕ್ಕ...!!!

ಪರಿವರ್ತನೆ ಜಗದ ನಿಯಮ...!!

Sunday, 6 December 2009

Thursday, 3 December 2009

ಕಳೆದು ಹೋಗಿದ್ದೇನೆ...!!



ಮಿತಿಯಿಲ್ಲದಂತೆ
ಮತ್ತನೇರಿಸುವ
ನಿನ್ನ ನೋಟದ ನಶೆ ಜಾಮಿನಲ್ಲಿ..

ಮೈ-ಮನದ ತುಂಬ
ಕುಣಿದೆದ್ದು ಸಂಚರಿಸಿದ
ಭಾವನೆಗಳ ಟ್ರಾಫಿಕ್ ಜಾಮಿನಲ್ಲಿ..

ಮನದ ಮಳಿಗೆಯಲಿ
ಒಪ್ಪವಾಗಿ ಜೋಡಿಸಿಟ್ಟ
ನಿನ್ನ ನೆನಪ ಸರಂಜಾಮಿನಲ್ಲಿ..

ಮಿಲನವೋ-ಅಗಲಿಕೆಯೊ
ಜೀವನವೋ-ಮರಣವೋ
ತಿಳಿಯದ ಅಂಜಾಮಿನಲ್ಲಿ...

ಕಳೆದು ಹೋಗಿದ್ದೇನೆ...!


ಬರುವುದೋ ಬಿಡುವುದೋ
ನಿರ್ಧಾರ ನಿನಗೆ ಬಿಟ್ಟಿದ್ದು...
ಹೋಗುವ ಮುನ್ನ
ನಿನ್ನೆದೆಯ ಪುಟಗಳಲಿ
ನನ್ನ ವಿಳಾಸ
ಬರೆದು ಹೋಗಿದ್ದೇನೆ...!!


ಚಿತ್ರ ಕೃಪೆ : ಅಂತರ್ಜಾಲ