Wednesday, 20 November 2013

ನನ್ನ ಕವನಗಳಲ್ಲಿ

ನನ್ನ ಕವನಗಳಲ್ಲಿ
ಅವರಿವರ ಓಲೈಕೆಗೆ
ಮಲ್ಲಿಗೆ ಸಂಪಿಗೆಗಳು ಬಿರಿದು 
ಅತ್ತರಿನ ಘಮ ಬೀರುವುದಿಲ್ಲ... 
ಭೃಷ್ಟರ ವಿರುದ್ದ ಧಿಕ್ಕಾರ.. 
ಶೋಷಿತರ ಚೀತ್ಕಾರ... 
ಬಿತ್ತರವಾಗುವುದಿಲ್ಲ... 
ಜಾತಿ ಮತದ ಹೆಸರಲಿ
ನೆತ್ತರು ಹರಿಯುವುದಿಲ್ಲ.. 
ನನ್ನ ಕವನಗಳಲ್ಲಿ 
ಯಾರಿಗೋ ಬಹುಪರಾಕು..
ಇನ್ಯಾರನೋ ಹೀಗಳೆವ ಸರಕು..
ಮರೆತು ಕೂಡ ಇಣುಕುವದಿಲ್ಲ... 

ನನ್ನ ಕವನಗಳು 
ನೀತಿಪಾಠ, ಬುದ್ದಿವಾದ
ಕುಣಿಸುವ ನಿನಾದ 
ಕುಲಗೆಡಿಸುವ ವಿವಾದಗಳ ಬಸಿರು 
ಹೊರುವದಿಲ್ಲ... 
ನಲಿಸುವ ವಿನೋದ 
ನೋಯಿಸುವ ವಿಷಾದ
ಮನ ಕಲಕುವ ಸಂವಾದ 
ಮತಿಗೆಡಿಸುವ ಪವಾಡಗಳ 
ಹಡೆಯುವುದಿಲ್ಲ.... 

ನನ್ನ ಕವನಗಳಲ್ಲಿ 
ಕೇವಲ ನೀನಿರುವೆ.. 
ನಿನ್ನ ಮುತ್ತುಗಳಿವೆ.. 
ನಿನ್ನ ಬಿಸಿ ಅಪ್ಪುಗೆಯ 
ಆಸರೆಯಲಿ ಜಗವನ್ನೇ 
ಮರೆತ ನಿಶಾನೆಗಳಿವೆ... 
ಇನ್ನೂ ತೆಗೆಯದ ಖುಷಿಯ 
ಕೋಟಿ ಖಜಾನೆಗಳಿವೆ... 
ಮತ್ತೆ.. ಆ ಮುತ್ತ ಮತ್ತಲ್ಲಿ 
ಮತ್ತೆ ಮತ್ತೆ ಮುಳುಗೇಳುವ 
ಕನಸ ಹೊತ್ತ ಉನ್ಮತ್ತ 
ನಾನಿರುವೆ..!!
Wednesday, 9 October 2013

ದಾರಿಗಳು ಮಾತನಾಡುವುದಿಲ್ಲ...!!


ಏರು ತಗ್ಗು, ತಿರುವು ಮುರುವು
ನಿಲ್ಲಲೊಲ್ಲದ ನಿರಂತರ ಹರಿವು... 
ಊರಿಂದೂರಿಗೆ ನಂಟು 
ಬೆಸೆಯುವ ದಾರಿಗಳು 
ಬದಲಿಗೆ ಗಂಟು ಕೇಳುವುದಿಲ್ಲ... 

ಮಂದಿರಕೊ.. ಮಸಣಕೋ..
ನಾಡಿಗೊ... ಕಾಡಿಗೊ..
ಕರೆದೊಯ್ವ ದಾರಿಗಳು.. 
ಬಿದ್ದಲ್ಲೇ ಬಿದ್ದಿರುತ್ತವೆ ಹೊರತೂ... 
ಖುದ್ದು ನಡೆಯುವುದಿಲ್ಲ ...

ಹೀಗೆ ನಡೆದರೆ ಸ್ವರ್ಗ 
ಹಾಗೆ ಹಾದರೆ ನರಕ 
ಆಯ್ಕೆ ಮಾತ್ರ ಹೋಕರದೆ... 
ಅಪ್ಪಿತಪ್ಪಿಯೂ ದಾರಿಗಳು 
ಆಜ್ಞೆಗಳ ಉಸಿರುವುದಿಲ್ಲ... 

ಊರ ಎದೆಯನು ಸಿಗಿದು 
ಬಿಡದೆ ಬೆಟ್ಟವನೂ ಬಗೆದು 
ಅಭಿವೃದ್ದಿಯ ಅಂಧ ಓಟಕ್ಕೆ 
ಮೂಖ ಸಾಕ್ಷಿ ದಾರಿಗಳು
ಮರೆತೂ ಮಾತನಾಡುವುದಿಲ್ಲ... 


Tuesday, 1 October 2013

ಕಾಲ ಇಲ್ಲಿ ಮಲಗಿದೆ


ನಾಡಿನ ಘಮಲಿನ ಅಮಲಿನ ಕರೆಗೆ
ಘಮ ಘಮಿಸುವುದ ಮರೆತು...
ಮೆರವಣಿಗೆ ಹೊರಟಿದೆ..
ಕರುಳ ಬಳ್ಳಿಗಳ ಕಡಿದ
ಕಾಡಿನ ಕುಸುಮಗಳ ದಂಡು..
ಶಹರವೋ.. 
ಪರಾತಗಟ್ಟಲೆ ಕನಸುಗಳನ್ನು
ಭಕಾಸುರನಂತೆ ನುಂಗಿ 
ನಾಚಿಕೆಯಿಲ್ಲದೆ ಹೊಸ ಹಾದರಗಳಿಗೆ
ಸಜ್ಜಾಗಿ ನಿಂತಿದೆ...


ನಮ್ಮದೋ.. ಅವರದೋ..
ಗೊತ್ತೇ ಆಗದ ಭಾಷೆ..
ಮಾಲು, ಮಲ್ಟಿಪ್ಲೆಕ್ಸುಗಳ
ತಳುಕು ಬಳುಕಿನ ತೃಷೆ..
ಬಾರು, ಪಬ್ಬುಗಳ ಮಬ್ಬು ಬೆಳಕಿನ ನಶೆ..
"ವಿಲಾಯತಿಯ ಖಯಾಲಿಯಲ್ಲಿ
ದೇಸಿ ಪರಂಪರೆಯ ಸಾವು"
ಬುದ್ದಿ ಜೀವಿಯೊಬ್ಬ ಆಮದಿನ ಅತ್ತರು ಪೂಸಿ
ಅಬ್ಬರಿಸಿದ ಮಾತು ಅಚ್ಚಾಗಿ ನಿಂತಿದೆ..

ಮುಂದಕೋ.. ಹಿಂದಕೋ..
ಅರ್ಥವಾಗದ ಅಭಿವೃದ್ದಿಯ ಓಟ..
ಮಾನ ಕಾಪಿಡದ ಬಟ್ಟೆ.. 
ಕಾಲಿ ದುಡಿವವರ ಹೊಟ್ಟೆ..
ಭಲದ ಅಮಲಲಿ ಮಿಂದು..
ಉಳ್ಳವರು ಉನ್ಮತ್ತ ಕುಣಿಯೆ
ಚಲನೆಯ ಮರೆತಂತೆ ಕಾಲ...
ಅರಿವಳಿಕೆ ಹೀರಿ ಮಲಗಿದೆ...

Sunday, 28 July 2013

ಹೊತ್ತು ಜಾರುವ ಮುನ್ನ...!!

ಮಕ್ಕಳ ಬಣ್ಣ ಬಣ್ಣದ
ಕಾನ್ವೆಂಟ್ ಪುಸ್ತಕಗಳ ನಡುವೆ
ಅಜ್ಜಿಯ ಕಥೆಗಳ ಬೆರಗ
ಮರೆಯದೆಲೆ ಮುಚ್ಚಿಡಿ..
ಕತ್ತಲಲಿ ಕಳೆದು ಹೋದಾವು
ಕಂದಮ್ಮಗಳು.. ಅಜ್ಜನ
ಆದರ್ಶಗಳ ಲಾಂದ್ರ
ಹೊತ್ತು ಜಾರುವ ಮುನ್ನ ಹಚ್ಚಿಡಿ...

ಹವಾನಿಯಂತ್ರಕಗಳ ನೆರಳಲ್ಲಿ
ಸುಖದ ನಿದಿರೆಗೆ ಜಾರಿ
ಬಂಧ ಕಳಚಿಕೊಳ್ಳುವ ಮುನ್ನ
ಅಮ್ಮನ ಸೀರೆಯಲಿ ಹೊಲಿದ
ದುಪ್ಪಡಿಯನ್ನು ಬಿಚ್ಚಿಡಿ...

ಪೋಸ್ಟರಿನ ಸ್ಟಾರುಗಳು 
ಕೋಟಿ ಬೆಲೆಯ ಕಾರುಗಳು 
ಚಿತ್ತ ಭಿತ್ತಿಯಲಿ ಅಚ್ಚಾಗುವ ಮುನ್ನ
ಆಜಾದ್, ಭಗತ್, ವಿವೇಕರ ಪಟಗಳನು
ಗೋಡೆಗಳ ಮೇಲೆ ಹಚ್ಚಿಡಿ..

Sunday, 7 July 2013

Color Pencil+Water = Water Color.. :)

ತುಂಬಾ ದಿನಗಳಿಂದ ಅನಾಥವಾಗಿ ಬಿದ್ದಿದ್ದ ಕಲರ್ ಪೆನ್ಸಿಲ್ ಗಳ ಜೊತೆ ಹಾಗೇ ಸ್ವಲ್ಪ ಟೈಮ್ ಪಾಸ್ ಮಾಡೋ ಸಮಯ ಅಂತೂ ಇವತ್ತು ಬಂದೊದಗಿತು.. ಕೊನೆಗೆ ಬ್ರಷ್ ನಿಂದ ಸ್ವಲ್ಪ ವಾಟರ್ ಕಲರ್ ಎಫೆಕ್ಟ್ ಕೊಡೊ ಪ್ರಯತ್ನ ಮಾಡಿದೆ...


Friday, 24 May 2013

ಅವನು ನನ್ನೊಳಗೇ ಇರಲಿ..!!

ಕಡಲ ತೀರದಿ
ಅವನ ಹೆಸರು ಬರೆದೆ
ಅಲೆ ಬಂದು ಅಳಿಸಿತು...
ಒಡಲ ಆಳದಿ ಇನ್ನು
ಅಲೆಗಳು ಏಳುವುದಿಲ್ಲ...!!

ಮಿನುಗುವ ನಕ್ಷತ್ರಕೆ
ಅವನ ಹೆಸರಿಟ್ಟೆ
ಮೋಡ ಬಂದು ಮರೆಸಿತು...
ಹೊಳೆವ ಕಣ್ಣುಗಳಲಿನ್ನು
ಮೋಡ ಕಟ್ಟುವುದಿಲ್ಲ...!!

ಮುಡಿದ ಮಲ್ಲಿಗೆ ಗಂಧ
ಅವಗೆ ಮುಡಿಪೆಂದೆ..
ಗಾಳಿ ಬಂದು ಹೊತ್ತೊಯ್ದಿತು..
ಮನದ ಕಿಡಕಿಯ ಕದವ
ಇನ್ನು ತೆರೆಯುವುದಿಲ್ಲ...!!

ಕವಿತೆಯ ಪ್ರತಿ ಸಾಲಲ್ಲು
ಅವನಿರುವ ಕಂಡೆ..
ಹಾಡುಗನ ಕಂಠದಲಿ ಲೀನವಾಯ್ತು..
ಎದೆಯ ಆಸೆಗಳಿನ್ನು
ಹಾಡಾಗುವುದಿಲ್ಲ...!!

Monday, 20 May 2013

ಅಂಕಿತ...!!
ಕೂಸು ಹುಟ್ಟುವ ಮೊದಲೇ
ಕುಲಾವಿ ತರುವ ಇಂಗಿತ
ಕಾವ್ಯ ಕಟ್ಟುವ ಮೊದಲೇ 
ಬರೆದು ನೊಂದಿಹೆ ಅಂಕಿತ..!

ಪಾಳು ಗೋಡೆಗಳ ನಡುವೆ
ಹುಟ್ಟೀತೆ ಹಾಳು ಕವಿತೆಗಳು..?
ಬಿಡಿಸಿದಷ್ಟು ಮತ್ತೆ ಬೆಸೆವ
ಭಾವಗಳ ಜಠಿಲ ಜಡಕುಗಳಲ್ಲಿ
ಎದೆಯಾಳದ ಆರ್ತನಾದ 
ಬಿಡುಗಡೆಯ ಕಾಣದೆ ಬಂಧಿತ..

ದ್ವೇಷದ ಬಿರುಗಾಳಿ ಬೀಸೆ
ಬೆಳಗೀತೆ ಬಾಳ ಹಣತೆಗಳು..?
ನಾನು ನನದು ಎನುತ ಕುಣಿವ 
ಮಂದಮತಿಗಳ ಮಂದೆಯಲ್ಲಿ
ನಗುವ ಮರೆಸಿ ಸ್ವಾರ್ಥ ಮೆರೆಯೆ
ನೋವಿನಂಧಕಾರ ಸಂತತ..

ನೆತ್ತರ ಮಳೆಯದು ಸುರಿಯೆ 
ಚಿಗುರೀತೆ ಒಲವ ಕುಡಿಗಳು..?
ಜೀವ ಕಸಿದು ಸಾವ ಬಿಕರಿ 
ಎಡೆಬಿಡದೆ ನಡೆವ ಸಂತೆಯಲ್ಲಿ..
ಗೋರಿ ತೋಡಿ ಮಲಗಿವೆ 
ಕನಸುಗಳು ನೂರು ಅಂಗತ..

ನೀರು ಬತ್ತಿದ ಕಣ್ಣುಗಳಲ್ಲಿ
ಇನ್ನಿಲ್ಲ ಜೀವದಿಂಗಿತ...
ಕಾವ್ಯ ಕಟ್ಟುವ ಮೊದಲೇ 
ಬರೆದು ನೊಂದಿಹೆ ಅಂಕಿತ...!!

ಚಿತ್ರಕೃಪೆ: http://belgarion11.deviantart.com/art/Blood-rain-210965518

Wednesday, 15 May 2013

ಅಂತರಗಳು..!!

ಅಂತರಗಳು.. ಬಾಳ ಆಳಗಳಲ್ಲಿ
ಬೇರು ಬಿಟ್ಟ ಭದ್ರ ಭುನಾದಿಗಳು

ಅಂತರ.. ಭೂಮಿ ಆಗಸದ ನಡುವಿನದ್ದು
ಅಂತರ..ಶಶಿ ಮುಳುಗಿ 
ರವಿ ಬೆಳಗುವ ವರೆಗಿನದ್ದು...

ಆದರೆ ಈ ಅಂತರಗಳ ನಡುವೆಯೇ
ನಮ್ಮ ಅಸ್ತಿತ್ವ ಭರವಸೆಯ ಉಸಿರೆಳೆದು
ಬಸಿರು ಹೊತ್ತು ಹೆರುವುದು..!

ಈಗೀಗ ಈ ಅಂತರಗಳೇ 
ಮಹತ್ವ ಪಡೆದು ಎದೆಗೆ 
ಅವುಚಿಕೊಳ್ಳುವಷ್ಟು ಆಪ್ತವಾಗುತ್ತಿವೆ...

ಅಂತರ.. ಪಯಣಿಗ ಮತ್ತು ಗುರಿಯ ನಡುವಿನದ್ದು
ಅಂತರ.. ಕನಸು ಮತ್ತು ಹಕೀಕತ್ತಿನ ನಡುವಿನದ್ದು
ಅಂತರ.. ಭರವಸೆ ಮತ್ತು ಭ್ರಮೆಯ ನಡುವಿನದ್ದು
ಅಂತರ.. ನದಿಯ ಎರಡು ತೀರಗಳ ನಡುವಿನದ್ದು
ಅಂತರ... ಉಷೆ ಮತ್ತು ಕ್ಷಿತಿಜದ ನಡುವಿನದ್ದು

ಅಂತರವಿದ್ದರೆ ಮಾತ್ರ ತೀರಗಳು
ತೀರವಿದ್ದರೆ ಮಾತ್ರ ಹರಿವು
ಹರಿವಿದ್ದರೆ ಮಾತ್ರ ನದಿ..
ನದಿ ಇದ್ದಲ್ಲಿ ಇಹುದು ಹಿಡಿ ಪ್ರೀತಿ..!

ಜೀವನದ ಈ ಪ್ರೀತಿಯನ್ನೇ 
ಜೀವಿಸಿಹೆ ಈ ಅಂತರಗಳ ನಡುವೆ..
ಈ ಅಂತರಗಳಲ್ಲೇ ಮೂಡಿದ
ಮೊದ ಮೊದಲ ಮಧುರ ಅನುರಾಗ
ನನ್ನ ಸಂವೇಧನೆಗಳಿಗೆ ಮಿಡಿವ 
ಉತ್ಸಾಹ ತುಂಬುತ್ತಲೇ ಇರುತ್ತವೆ..

ಮತ್ತೆ ನಮ್ಮ ನಮ್ಮ ಗೂಡುಗಳಲ್ಲಿ
ಭದ್ರವಾಗಿ ಮಂಡಿಯೂರಿ ಕುಳಿತು
ಕಿಸಕ್ಕನೆ ನಗುತ್ತಿರುತ್ತವೆ..
ನಾನು..... ನೀನು...
ಎಂಬೀ ಅಂತರಗಳು...!

Tuesday, 14 May 2013

ಬೆಳೆಯಬಾರದಿತ್ತು ನಾವು..!!


ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು
ಚಂದಮಾಮನೆಡೆಗೆ ಬರೆದ ಚೋಟುದ್ದದ ಏಣಿ..
ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು 
ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ..

ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು
ಅಜ್ಜಿ ಹೇಳೋ ಕಥೆಗಳಲ್ಲಿ ಚಿನ್ನದಂತ ರಾಣಿ...
ಅಪ್ಪನ ಕೈ ಹಿಡಿದು ನಡೆದ ಮರೆಯದೂರ ದಾರಿಗಳು
ಅಮ್ಮನ ಮಡಿಲಲ್ಲಿ ಕಲಿತ ಮುತ್ತಿನಂತ ವಾಣಿ... 

ಭೇದಭಾವ ಮರೆತು ಕಲೆತು ಆಡುತಿದ್ದ ಆಟಗಳು 
ಹಬ್ಬದುಡುಗೆ ತೊಟ್ಟು ಮೆರೆಯುತಿದ್ದ ಓಣಿ... 
ಎಲ್ಲ ಈಗ ಬಿಡದೆ ಕಾಡಿ ಕೊಲುವ ಕನಸುಗಳು 
ಬೆಳೆಯಬಾರದಿತ್ತು ನಾವು ನಂಬಿ ದೇವರಾಣಿ..!!

ಚಿತ್ರ ಕೃಪೆ:http://images.fineartamerica.com/