Saturday 26 February 2011

ಎರಡು ಹನಿ..!

ವಜ್ರ (ಮುನಿ) Money

ಮಡದಿಗೆ ಕೊಟ್ಟಷ್ಟೂ
ಸಾಲದಂತೆ
ವಜ್ರ ಮತ್ತು Money..
ಪಾಪ..
ಅದಕ್ಕೇ ನಮ್ಮ ರಾಯರು
ಕಚೇರಿಯ ಸಿಬ್ಬಂದಿಗಳ
ಪಾಲಿಗೆ "ವಜ್ರಮುನಿ"..!!


ಮುಟ್ಟಿದರೆ Money

ಮದುವೆಗೆ ಮೊದಲು
ಪ್ರತಿ ಸ್ಪರ್ಶಕೂ ನುಲಿದು ನಲಿದು
ನಾಚಿ ನೀರಾಗುತಿದ್ಲು ಚೆಲುವೆ
ಸಾಕ್ಷಾತ್ ಮುಟ್ಟಿದರೆ ಮುನಿ....!
ಈಗ ಮುಟ್ಟುವದಾದರೆ
ಕೊಡಲೇ ಬೇಕಂತೆ
ಒಂದು ಮೂಟೆ Money..!

Saturday 12 February 2011

ದೊಡ್ಡ ಕನಸುಗಳಿಗೆ ಚಿಲ್ಲರೆ ಬೇಕಿದೆ..!!

ಅದೋ ಅಲ್ಲಿ ಮೂಲೆಯಲ್ಲಿ
ಧೂಳು ಹತ್ತಿ ಬಿದ್ದಿದೆಯಲ್ಲ...
ನಾನು ಹುಟ್ಟಿದಾಗಿನಿಂದ
ಕಟ್ಟಿದ ದೊಡ್ಡ ದೊಡ್ಡ ಕನಸುಗಳ ಮೂಟೆ...

ಅಂದುಕೊಂಡಿದ್ದು ಇಷ್ಟೇ..
ಒಂದು ದಿನ ದೊಡ್ಡ ಖುಷಿಯ ಖರೀದಿಸಬೇಕು
ಈ ಕೂಡಿಟ್ಟ ಕನಸುಗಳ ಬಿಂದಾಸ್ ಉಡಾಯಿಸಬೇಕು..!

ಎಷ್ಟೋ ವರ್ಷಗಳಿಂದ ಕೂಡಿಟ್ಟ ಕನಸುಗಳವು
ಸಾವಿರ ಸಾವಿರ ರುಪಾಯಿಯ ನೋಟಿನಂತವು
ಚಿಲ್ಲರೆಯಾದರೆ ಚಿಕ್ಕ ಚಿಕ್ಕ ಖುಷಿಯ
ಖರೀದಿಗೇ ಖಾಲಿಯಾದೀತೆಂಬ ಭಯ...

ಅದೆಷ್ಟೋ ಮಂದಿ ನನ್ನವರು
ನನ್ನ ಆಪ್ತರು, ನನ್ನ ಪರಿಚಯದವರು
ಕನಸುಗಳ ಸಾಲ ಕೇಳಿದರು
ಪ್ರತಿ ಸಾರಿಯೂ ನನ್ನ ಉತ್ತರ ಒಂದೇ ..
"ಇಲ್ಲ.. ದೂರವಾಗಿ ನನ್ನಿಂದ..
ದೊಡ್ಡ ಖುಷಿಯ ಖರೀದಿ ಮಾಡ ಬೇಕಿದೆ ನಾನು..
ನಿಮಗಾಗಿ ಒಂದು ಕನಸೂ ಇಲ್ಲ.. "

ಅದೆಷ್ಟೋ ಬಾರಿ..
ದಾರಿ ಬದಲಿಸಿ ತಿರುಗಿಹೆನೋ ಗೊತ್ತಿಲ್ಲ..
ಅಲ್ಲೆಲ್ಲಾದರೂ ಸಾಲ ಕೇಳುವವರು ಇರಬಹುದೆಂಬ ಶಂಕೆ..
ಅನುಕ್ಷಣ ಮನದಲ್ಲಿ ದೊಡ್ಡ ಖುಷಿಯ ಮಾಯಾ ಜಿಂಕೆ..

ಈಗ... ಇಷ್ಟು ವರ್ಷದ ನಂತರ..
ಪರಿಸ್ಥಿತಿಯ ಕೈ ಗೊಂಬೆಯಾಗಿ
ಕುಣಿದು ದಣಿದ ನಂತರ ಅರಿವಾಗಿದೆ...
ಚಿಕ್ಕ ಚಿಕ್ಕ ಖುಷಿಯಿಂದಲೇ ದೊಡ್ಡ ಖುಷಿ ಸಿಗುವುದಂತೆ..!!

ಇಂದು ಆಸೆಯಾಗುತ್ತಿದೆ..
ನನ್ನೆಲ್ಲ ದೊಡ್ಡ ಕನಸುಗಳ ಮೂಟೆಯನ್ನು ಖಾಲಿ ಮಾಡಬೇಕು..
ಎಲ್ಲ ಚಿಕ್ಕ ಚಿಕ್ಕ ಖುಶಿಗಳನ್ನು ದೊಚಬೇಕು..
ಬಾಚಿ ಎದೆಗವಚಿಕೊಳ್ಳಬೇಕು...

ಆದರೆ ಯಾರ ಬಳಿಯೂ ನನ್ನ ಸಾವಿರ ಸಾವಿರ ರುಪಾಯಿಯ
ನೋಟಿನಂತಹ ದೊಡ್ಡ ಕನಸುಗಳಿಗೆ ಚಿಲ್ಲರೆ ಇಲ್ಲವಂತೆ...!!

(ಹಿಂದೆಲ್ಲೋ ಓದಿದ ಹಿಂದಿ ಕವಿತೆಯೊಂದರಿಂದ ಪ್ರಭಾವಿತ)