Thursday, 23 April 2009

ಉತ್ತರದ ಅಪೇಕ್ಷೆಯಿಲ್ಲದ ಪ್ರಶ್ನೆಗಳು....

ಮುದ್ದು ಜಿಂಕೆಮರಿ....

ಇವತ್ತು ನಿನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳೋದಕ್ಕಿದೆ.... ಎಂದಿನಂತೆ, ಉತ್ತರಿಸಲೇ ಬೇಕು ಎನ್ನೋ Condition ಇವತ್ತೂ ಇಲ್ಲ.... ಹಾಗೇ ಸುಮ್ಮನೇ ಓದಿ ಮುಗುಳ್ನಕ್ಕರೆ ಸಾಕು... ಸೂರ್ಯನ ಬೆಳಕನ್ನು ಪ್ರತಿಪಲಿಸಿ ಚಂದ್ರ ಹೊಳೆವಂತೆ, ಆ ನಗುವ ನೋಡಿ ನಾನೂ ಸ್ವಲ್ಪ ನಗುತ್ತೇನೆ.... ನಿನ್ನ ಕಣ್ಣುಗಳಲ್ಲಿ ಹೊಳೆದು ಮಾಯವಾಗೋ ಉತ್ತರಗಳನ್ನ ಹಾಗೇ ನನ್ನ ಕಣ್ಣ ಕನ್ನಡಿಯಲ್ಲಿ ಖೈದು ಮಾಡಿಕೊಳ್ಳುತ್ತೇನೆ....ಕಂಗಳ ಹೊಳಪು ಅಂದ ಕೂಡಲೇ ನೆನಪಾಯ್ತು ನೋಡು... ನಾನು ಕೇಳಬೇಕಿದ್ದ ಮೊದಲ ಪ್ರಶ್ನೆ ಅದೇ.... ಮುಂದೇನು ಎಂದು ತೋಚದೇ ನಾನು ಕತ್ತಲಲ್ಲಿ ಕೊಸರಾಡುತ್ತಿರುವಾಗಲೆಲ್ಲ ಬೆಳಕಾಗಿ ನನ್ನನ್ನ ಕತ್ತಲಿಂದ ಹೊರಗೆ ತರೋದು ಅದೇ ನಿನ್ನ ಕಂಗಳ ಹೊಳಪು... ಆ ಕಣ್ಣುಗಳಲ್ಲಿ ಕಣ್ಣನಿಟ್ಟು ನೋಡ್ತಾ ಇದ್ರೆ ಮನಸ್ಸು

ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು....

ಕಣ್ಣಿನ ಮಾತುಗಳು ಬಿಡಿಸ್‍ಹೇಳದ ಒಗಟುಗಳು

ಕಣ್ಣಿನ ಹಾಡುಗಳು ತಿರು ತಿರುಗಿಸೋ ರಾಟೆಗಳು

ಇಂತೋಳ ಕಣ್ಣಿನಲಿ ನಾನು ಸೇರಿಕೊಳ್ಳಲೆ ಹಾಡಿಕೊಳ್ಳಲೆ......

ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ

ಅಂತ ಹಾಡೋಕೆ ಶುರುವಿಟ್ಟುಕೊಳ್ಳುತ್ತದೆ....

ನೀನು ಆ ಹೊಳಪನ್ನು ಕದ್ದು ಕಣ್ಣಿಗೇರಿಸಿಕೊಂಡದ್ದಾದ್ರೂ ಯಾರಿಂದ...?? ಜಗವ ಬೆಳಗೋ ಜವಾಬ್ದಾರಿ ಹೊತ್ತು, ತನ್ನೊಡಲಲ್ಲಿ ಉರಿಯೋ ಬೆಂಕಿಯನ್ನಿಟ್ಟುಕೊಂಡು ಜಗತ್ತಿಗೇ ಬೆಳಕು ಕೊಡೋ ಸೂರ್ಯನಿಂದಲಾ...?? ತಾಯಿ ಮಗುವಿಗೆ ಊಟ ಮಾಡಿಸಲು ಹೆಳೆಯಾಗೋ, ಪ್ರೇಮಿಗಳಿಗೆ ಪ್ರಿಯತಮೆಯ ಹೋಲಿಕೆಗೆ ಕೈ ಸಿಗೋ, ಕವಿಗಳ ಕವಿತೆಗೆ ಸ್ಪೂರ್ತಿಯಾಗೋ ಚಂದ್ರನಿಂದಲಾ...?? ಅಥವಾ ದಿನ ರಾತ್ರಿ ಆಗಸಕ್ಕೆ ದೀಪದ ಅಲಂಕಾರ ಮಾಡೋ ಕೋಟಿ ತಾರೆಗಳಿಂದಲಾ...?? ದೇವರ ಗುಡಿಯಲ್ಲಿ ಆಗತಾನೆ ಬೆಳಗಿಸಿಟ್ಟ ದೀಪದಿಂದಲಾ..?? ಇಲ್ಲಾ ದೀಪಾವಳಿಯಂದು ಮನೆ ಮನೆಯಲ್ಲಿ ಸಿಂಗರಿಸಿಕೊಂಡು ಬೆಳಗೋ ಆಕಾಶಬುಟ್ಟಿಯಿಂದಲಾ...?? ಆಗಸದಿಂದ ಧರೆಗೆ ಚಿಮ್ಮಿ, ನೀನು ಕಿಟಾರ್ ಅಂತ ಕಿರುಚಿ ನನ್ನೆದೆಗೆ ಒರಗುವಂತೆ ಮಾಡೋ ಮುಂಗಾರಿನ ಮಿಂಚಿನಿಂದಲಾ...?? ಇಲ್ಲಾ ಗಣೇಶೋತ್ಸವದ ವಿದ್ಯುದಲಂಕಾರದಂತೆ ಮಿನುಗಿ ಪ್ರತಿ ಇರುಳಿಗೂ ಹೊಸ ಮೆರುಗು ನೀಡೋ ಜೀವ ಜಗದ ವಿಸ್ಮಯ ಮಿಂಚು ಹುಳದಿಂದಲಾ...?? ಚೆಂದುಳ್ಳಿ ಚೆಲುವೆಯರ Ramp Walk ಗೆ ಸಾಥ್ ನೀಡೋ Shoping Mall ಗಳ ರಂಗು ರಂಗಿನ ದಿಪಗಳಿಂದಲಾ.....?? ಅಥವಾ ಸಿರಸಿ ಜಾತ್ರೆಯ ಜಂಬೋ ಸರ್ಕಸ್ ನವರು ಆಕಾಶಕ್ಕೊಂದು ಏಣಿ ಬರೆದಂತೆ ತೇಲಿ ಬಿಟ್ಟ ಸರ್ಚ್ ಲೈಟ್ ನಿಂದಲಾ...??

ಅದು ಏನು ಅಂತ ನಿನ್ನ ದನಿಯಲ್ಲೇ ಕೇಳುವಾಸೆ... ಹೌದು... ನಿನ್ನ ದ್ವನಿ ಕೇಳಿದಾಗಲೆಲ್ಲ ಹೃದಯ

ನಿನ್ನ ನುಡಿಯು ಹೊನ್ನ ನುಡಿಯು

ಜೇನ ಹನಿಯು ಅಧರಕೆ...

ನನ್ನ ಎದೆಯ ವೀಣೆ ತಂತಿಯ ಮೀಟಿ ಓಡಿದೇ ಏತಕೆ...??

ಅಂತ ಹಾಡತೊಡಗುತ್ತದೆ...

ನಿನ್ನ ಗಂಟಲಲ್ಲಿ ಇಷ್ಟು ಮಧುರ ದ್ವನಿಯಾದ್ರೂ ಯಾತರಿಂದ ಸೇರಿಕೊಂಡಿತು..?? ಮಾವಿನ ಮರದಲ್ಲಿ ಅಡಗಿ ಕುಳಿತು ವಸಂತನಿಗೆ ಸ್ವಾಗತ ಹಾಡೋ ಕೊಗಿಲೆಯಿಂದಲಾ...?? ಅಥವಾ ಮಂದಿರದಲ್ಲಿ ಮೊಳಗುವ ಮಂತ್ರಘೋಶದಿಂದಲಾ...?? ಅಮ್ಮನ ಮಡಿಲಲ್ಲಿ ಕೇಕೆ ಹಾಕೋ ಕಂದಮ್ಮನಿಂದಲಾ....?? ಅಥವಾ ದ್ವಾಪರದ ಕೃಷ್ಣ ನುಡಿಸಿದ ಕೊಳಲಿನಿಂದಲಾ...?? ವಿಧ್ಯಾದಿದೇವತೆ ಸರಸ್ವತಿಯ ಕೈಲಿರೋ ವೀಣೆಯಿಂದಲಾ...?? ಅಥವಾ ಬಿಸ್ಮಿಲ್ಲಾ ಖಾನರ ಶೆಹನಾಯಿಯಿಂದಲಾ..?? ನಿನ್ನಷ್ಟಕ್ಕೆ ನೀನು ಹಾಡಿಕೊಳ್ಳೋದು, ಮುಂಗಾರಿನ ಮಳೆಯಂತೆ ೨೪/೭ non stop ಮಾತನಾಡೋದು, ಕಲ್ಲನ್ನೂ ಕರಗಿಸೋ ಹಾಗೆ ನಗೋದು, ದೂರದಲ್ಲಿದ್ರೆ ಕೋತೀ ssssssss ಅಂತ ನನ್ನ ಕೂಗೋದು... ಹತ್ತಿರದಲ್ಲಿದ್ರೆ ನನ್ನ ಕಿವಿಯಲ್ಲೇ ಪಿಸುಗುಟ್ಟೋದು.... wooooooow.... ಸಪ್ತ ಸ್ವರ ಮಾದುರ್ಯವನ್ನ, ಸಂಗೀತದ ರಾಗ ತಾಳ ಲಯವನ್ನ ಆ ಬ್ರಹ್ಮ ನಿನ್ನ ಕೊರಳಲ್ಲಿ ತುಂಬಿಯೇ ಭೂಮಿಗೆ ಕಳಿಸಿದ್ದಾನೆ ಅಂತ ಅನಿಸೋದು ಅತಿಶಯವಲ್ಲ...

ಮೊದಲೇ ಹೇಳಿದಂತೆ ಈ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು ಅಂತೇನು ಇಲ್ಲ... ಸುಮ್ಮನೆ ಓದಿ ನಕ್ಕರೆ ಸಾಕು... ಸ್ವರ್ಗ ಇಲ್ಲಿಯೇ ಕಂಡುಕೊಳ್ಳುತ್ತೇನೆ....

ನಿನ್ನ ಮುದ್ದಿನ ಕೋತಿ....

Wednesday, 22 April 2009

ನಶೆ
ನಶೆಯದೆಷ್ಟು ಚೆಲುವೆ...

ನಿನ್ನ ಕಣ್ಣುಗಳ ರಂಗಿನಲಿ...??

ನೋಡಿ ನಾನಾದೆ ದಂಗು...

ನಿಜ, ಕೇವಲ ಕಣ್ಣುಗಳಲ್ಲ ಅವು...

ನಶೆಯನೀಯೊ ಗಡoಗು...!!

ಸೂರ್ಯನತ್ತ ಅಗ್ನಿಶಾಮಕಎದೆಯಲಿ ಉರಿಯೋ ನೋವಿನ ಜ್ವಾಲೆ..
ನೀ ತೊರೆದ ಗಾಯವದು ಘಾತಕ.....,
ಕುಡಿಯೊಡೆದ ಪ್ರೀತಿಗೆ ಕೊಳ್ಳಿಯನಿಟ್ಟೆ..
ಮನದ ಮನೆಯಲಿ ನಿತ್ಯವೂ ಸೂತಕ....,
ಗೆಳೆಯರು ಹೇಳುತ್ತಾರೆ....,
"ನಶೆಯೇ ನೋವನು ಮರೆಸೋ ಮದ್ದು..
ಗಡoಗಿನಲಿ ಗುಟುಕರಿಸು ಪಾನಕ...!!"
ಅವರಿಗೇನು ಗೊತ್ತು ಪಾಪ...??
ಆರದು ಅದರಿಂದ ಎದೆಯ ಜ್ವಾಲೆ...
ಅದೇನಿದ್ದರೂ, ಸೂರ್ಯನತ್ತ ನುಗ್ಗಿಬಂದಂತೆ
ಇಳೆಯ ಅಗ್ನಿಶಾಮಕ......!!

Thursday, 16 April 2009

ಪ್ರೀತ್ಸೋಣ ಬಾಪ್ರೀತಿ ಕೆಡಿಸುತ್ತೆ ಮತಿ...
ಮರೆಸುತ್ತೆ ನಮ್ಮ ಇತಿ-ಮಿತಿ...
ಜಗವೆ ಹುಚ್ಚರ ಸಂತೆ...
ಬಾ ತಲೆ ಕೆಡಿಸಿಕೊಳ್ಳೋಣ ನಾವೂ...!!


ಪ್ರೀತಿ ನೋವ ಒಡತಿ...
ನಲಿವು ಅದರ ಸವತಿ...
ಯಾರಿಗಿಲ್ಲ ನೋವು...??
ಬಾ ಈ ನೋವ ಸವಿಯೋಣ ನಾವು...!!


ಪ್ರೀತಿ ವಿಷದ ರೀತಿ...
ಹೇಳೋದು ಜಗದ ನೀತಿ...
ಯಾರಿಗಿಲ್ಲ ಸಾವು...??
ಬಾ ಈ ವಿಷವ ಕುಡಿಯೋಣ ನಾವು...!!

Friday, 10 April 2009

ಕಾರಣ..!!ಹುಡುಕಿದರೂ ಸಿಗದು ಕಾರಣ..

ದಿನ ರಾತ್ರಿ ಕನಸುಗಳ ಅನಾವರಣ...
ನೀರಸ...ನಿರಾಕಾರ....
ಪ್ರಸಾರ ಕಪ್ಪು-ಬಿಳುಪು....
ನೀ ಸುಳಿದರೆ ಮಾತ್ರ....
ಅವುಗಳಿಗೆ ಮಳೆಬಿಲ್ಲ ವರ್ಣ....

ಹುಡುಕಿದರೂ ಸಿಗದು ಕಾರಣ...
ಬರೆದ ಪಲ್ಲವಿಗಳಿಗೆ ಸಿಗದು ಚರಣ...
ಅಸ್ಪಷ್ಟ... ಅಸಂತುಷ್ಟ...
ಸಾಲುಗಳೆಲ್ಲ ತಪ್ಪು-ತಪ್ಪು...
ನೀ ಪದವಾದರೆ ಮಾತ್ರ....
ಕವಿತೆಗಳಲಿ ಜೀವ ಸ್ಫುರಣ....

ಪ್ರೀತಿ ಬರಲು...


ಜಾತಿ ಪಂಥ ಅಂದ ಚೆಂದ
ಪ್ರಶ್ನೆಗಿಲ್ಲ ಉತ್ತರ....
ಪ್ರೀತಿ ಬರಲು ಮನದ ಮನೆಗೆ...
ಇರದು ಯಾವ ಅಂತರ...

ಏರಿ ಇಳಿದು ಉರುಳಿ ಹೊರಳಿ....
ಪ್ರೀತಿಯಾಳ ಎತ್ತರ.....
ನಲಿವ ಮನದ ಮಿಡಿತ ತುಡಿತ...
ನಯನ ಭಾಷೆ ಬಿತ್ತರ...

Thursday, 9 April 2009

ನೀ ಬರಲಿಲ್ಲ….!!!
ಕೈಯ್ಯಲ್ಲಿ ಮಲ್ಲಿಗೆ ಮಾಲೆ….,
ಮುದುಡಿ ಹೋದರೂ, ನೀ ಬರಲಿಲ್ಲ….
ಎದೆಯಲ್ಲಿ ಉರಿಯೊ ಜ್ವಾಲೆ….,
ಬತ್ತಿದರೂ ಕಣ್ಣೀರು, ಅದು ಆರಲೇ ಇಲ್ಲ……!!
!

ಹುಟ್ಟು


ನಿನ್ನ
ತೋಳ್ತೆಕ್ಕೆಯಲ್ಲಿ
ಕನಸುಗಳು
ರೆಕ್ಕೆ ಕಟ್ಟುತ್ತವೆ…..
ಕನಸುಗಳಲ್ಲಿ
ಕವನಗಳು
ಹುಟ್ಟುತ್ತವೆ……!!

ಯುಗಾದಿ..ಇಂದು ಇಲ್ಲಿ ನಾಳೆ ಅಲ್ಲಿ
ನಿತ್ಯ ನಿರಂತರ ಪಯಣ…
ಜಗವ ಬೆಳಗುವ ಕಾಯಕದಿ Add Image
ಸೋತು ನಿಲ್ಲನೆಂದಿಗು ಅರುಣ…

ಹಸಿದ ನೆಲಕೆ ದಣಿದ ಜೀವಕೆ..
ಸುರಿಸಿ ಸ್ಪೂರ್ತಿಯ ಸಿಂಚನ…
ಪ್ರಕೃತಿಯ ಬೆಡಗ ಇಮ್ಮಡಿಪ ವರುಣ
ತೊಡಿಸಿ ಹಸಿರಿನಾಭರಣ…

ಒಂದು ಹುಟ್ಟು ಒಂದೆ ಮರಣ
ಮೋಹ ಮಾಯೆಯು ವ್ಯರ್ಥ…
ಯುಗದ ಅಂತ್ಯ ಯುಗದ ಆದಿ..
ತರಲಿ ಬದುಕಿಗೆ ಹೊಸ ಅರ್ಥ….

ಬಂದುಬಿಡು ಬೆಳಕಂತೆ…..!!

ಕೋಗಿಲೆಯ ಧನಿಯಲ್ಲಿ ಮೊದಲಿನಿಂಪಿಲ್ಲ….
ನಿನ್ನಯಾ ಧನಿಯದಕೆ ಕಲಿಸು…….

ಅರಳಿರುವ ಸುಮಗಳಲಿ ಇನಿತು ಕಂಪಿಲ್ಲ….
ಮರೆಯದೇ ಮೈಗಂಧ ಬೆರೆಸು…..

ಬೀಸುತಿಹ ಗಾಳಿಯಲಿ ಅಸಲು ತಂಪಿಲ್ಲ…..
ನಿನ್ನುಸಿರ ತುಸು ತಂಪ ಕಲೆಸು……

ನೀನಿರದ ಬದುಕು ಬದುಕಲ್ಲ ಗೆಳತಿ…..
ಬಂದುಬಿಡು ಬೆಳಕಂತೆ…..
ಮುಸುಕಿರುವ ಮಬ್ಬನ್ನು ಸರಿಸು…..

ಮುತ್ತು...!!ಚಳಿಯಾಗಿರಲು ಮೈಗೆ..
ಕೊಡುವೆ ಬಿಸಿ ಮುತ್ತು
ಕಹಿಯಾಗಿರಲು ಬಾಳ್ವೆ..
ಕೊಡುವೆ ಸಿಹಿ ಮುತ್ತು
ಒಂದಲ್ಲ.. ಎರಡಲ್ಲ
ಸಾವಿರದ ಹತ್ತು…!!

ಮಂದಿರದ ಘಂಟೆಎಲ್ಲರದ್ದಾಯಿತು ಪ್ರಿಯೆ..
ಇನ್ನು ನಿನ್ನ ಸರದಿ
ಹೊಡೆದು ಹೋಗು ಹೃದಯಕ್ಕೆ..
ನೀ ತೆರೆಯ ತರದಿ..
ಎಲ್ಲ ಹೊಡೆವರು ಎಂದು..
ನಾ ಮಾಡೆ ತ೦ಟೆ..
ಅನಿವಾರ್ಯ ಕರ್ಮವದು ಎನಗೆ..
ನಾ ಮ೦ದಿರದ ಘ೦ಟೆ…!!!
ಸತ್ಯ..!


ಹೋಗುವದಾದರೆ ಹೋಗು
ನೀನಿಲ್ಲದೆಯೂ ಜೀವನ ಸಾಗುತ್ತದೆ….
ಕೂಗುವ ಕೋಳಿಗೆ ಮಸಾಲೆ ಅರೆದಿದ್ದೇನೆ
ಆದರೂ ಪ್ರತಿದಿನ ಬೆಳಗಾಗುತ್ತದೆ….!!!!

ತಪ್ಪು…!ನಿದ್ದೆ ಮಾಡಿದ್ದು ತಪ್ಪಲ್ಲ
ಕನಸು ಕಂಡಿದ್ದು ತಪ್ಪಲ್ಲ
ಕನಸಲ್ಲಿ ಬಂದಿದ್ದು
ಅವಳ ತಪ್ಪು...

ಹೃದಯಕ್ಕೆ ಕದವಿಲ್ಲ
ಹಿಡಿದಿಡುವ ಹಠವಿಲ್ಲ
ಹೋಗದೆ ಉಳಿದಿದ್ದು
ಅವಳ ತಪ್ಪು...!!

ನನ್ನಷ್ಟು ಒರಟ ಈ ಜಗತ್ನಲ್ಲೇ ಇಲ್ಲ…..!!

ಬೊಗಸೆಗಣ್ಣ ಚೆಲುವೆ….

ನನ್ನಷ್ಟು ಒರಟ ಈ ಜಗತ್ನಲ್ಲೇ ಇಲ್ಲ ಅನ್ನೋದು ನಿನಗೂ ಗೊತ್ತು….. ನೀನು ಪ್ರತಿ ಮಾತಿನಲ್ಲಿ, ಪ್ರತಿ ಉಸಿರಿನಲ್ಲಿ ನನಗಾಗಿ ಪ್ರೀತಿ ಹೊತ್ತು ತಿರುಗುತ್ತಿದ್ದರೆ, ನಾನು ಅರ್ಥ ಮಾಡಿಕೊಳ್ಳಲಾಗದೆ, ಬದಲಿಗೆ ನೀನು ಕೊಟ್ಟ ಪ್ರೀತಿಯ 10 % ಪ್ರೀತಿಯನ್ನು ಮರಳಿ ಕೊಡಲಾಗದೇ, ಬೇಸರಗೊಂಡು ಸುರಿಸುವ ನಿನ್ನ ಕಣ್ಣೀರನ್ನು ಒರೆಸಲಾಗದೇ ಕ್ಷಣ ಕ್ಷಣಕ್ಕೂ ನನ್ನ ಪಾಪದ ಕೊಡವನ್ನು ತುಂಬಿಕೊಳ್ಳುತ್ತಿರುವ ರಾಕ್ಷಸ…. ನಿನಗೂ ಸಾಕಾಗಿ ಹೋಗಿದೆ ಅಲ್ವೇನೇ…? ನಿನ್ನ ಪ್ರೀತಿ ತುಂಬಿದ ಮಾತುಗಳಿಗೆ, ನನ್ನ ಮೇಲಿನ ಕಾಳಜಿಯಿಂದ ಕೇಳುವ ಪ್ರಶ್ನೆಗಳಿಗೆ ನನ್ನ ಒರಟು ಉತ್ತರಗಳನ್ನ ಕೇಳಿ…. ಐಸ್ ಕ್ರೀಮೂ, ಪಾಪ್ ಕಾರ್ನು ಹಿಡ್ಕೊಂಡು ಪಾರ್ಕ್‌ನಲ್ಲಿ ಅಲೆಯೋಕೆ, ಹೊಸ ಹೊಸ romantic ಸಿನೆಮಾಗಳನ್ನ ಬಾಲ್ಕನಿಯಲ್ಲಿ ಕುಳಿತು ನೋಡೋಕೆ, shoping mall ಗಳ ರಂಗಿನಲ್ಲಿ ಕಳೆದು ಹೋಗೋಕೆ, ದೇವಸ್ಥಾನದಲ್ಲಿ ಪೂಜಾರಿಯ ಮುಂದೆ ನಿಂತು ನನ್ನ ಹೆಸರು, ಗೋತ್ರ, ನಕ್ಷತ್ರ ಹೇಳೋಕೆ ನಿನಗೂ ಆಸೆಯಿದೆ ಅಲ್ವಾ….??? ಆದ್ರೆ ಆ ಆಸೆಗಳಲ್ಲಿ ಒಂದನ್ನಾದ್ರೂ ತೀರ್ಸೋ ಮನಸ್ಸು ಈವರೆಗೂ ಮಾಡಿಲ್ಲ ನೋಡು ಈ ಕೋತಿ… ಅವತ್ತು ನಿನ್ನ Birthday….. ಅದೆಷ್ಟು ಸಿಂಗರಿಸಿಕೊಂಡು ನನಗಿಷ್ಟದ ಸ್ವೀಟ್ ಮಾಡಿಕೊಂಡು ಬಲಮುರಿ ಗಣೇಶನ ದೇವಸ್ಥಾನದೆದುರು ಕಾಯ್ತಾ ಕುಳಿತಿದ್ದೆಯಲ್ಲಾ… ನಿನ್ನನ್ನು ಬರೋಬ್ಬರಿ 3.30 ಗಂಟೆ ಕಾಯಿಸಿ, ನೀ ಕೊಟ್ಟ ಸ್ವೀಟನ್ನ ಹಸಿವಿಲ್ಲ ಅಂತ ನೆಪವೊಡ್ಡಿ ಮೂಸಿಯೂ ನೋಡದೇ, ನಿನಗೆ ಸರಿಯಾಗಿ ವಿಶ್ ಕೂಡ ಮಾಡದೆ, ಒಂದು ಚೆಂದದ ಗಿಫ್ಟ್ ಕೂಡಾ ಕೊಡದೆ ನಿನ್ನ ಕಣ್ಣಲ್ಲಿ ಕಾವೇರಿ ಅವತರಿಸುವಂತೆ ಮಾಡಿಬಿಟ್ನಲ್ಲಾ….?? ನೆನೆಸಿಕೊಂಡ್ರೆ ನನ್ನದನ್ನ ತಗೊoಡು ನಾನೇ ಹೊಡ್ಕೋಬೇಕು ಅನ್ನೋವಷ್ಟು ಕೋಪ ಬರ್ತಿದೆ….

ಹೂವಿಂದ ಬರೆವ ಕಥೆಯಾ…. ಮುಳ್ಳಿಂದ ಬರೆದೆ ನಾನು….
ಆನಂದ ತರುವ ಮನಕೆ…. ನೋವನ್ನೆ ತಂದೆ ನಾನು….
ತಿಳಿಯಾದ ನೀರಿನಲ್ಲಿ… ಕಲ್ಲೊಂದು ಜಾರಿದಂತೆ…
ಇಂಪಾದ ಹಾಡಿನಲ್ಲಿ ಅಪಸ್ವರವು ಮೂಡಿದಂತೆ…
ನಾನಾದಿನಾ ಆಡಿದಾ ನುಡಿ ಒರಟಾಯಿತು… ಕಹಿಯಾಯಿತು….
ಇನ್ನೆಂದು ಹೀಗೆ ನಾ ಮಾಡೆನು…. ನನ್ನಾಣೆ ನಂಬು ನೀ ನನ್ನನು…
Sorry… I am Very Sorry…..

ಹೌದು ಕಣೇ…. ಇನ್ನು ಜೀವನದಲ್ಲಿ ಎಂದೂ ಹೀಗೆ ಮಾಡೋದಿಲ್ಲ...…. ನೀನು ಹಗಲೂ ಇರುಳು ಕೂರಿಸಿಕೊಂಡು ಕಥೆ ಹೇಳು… ಹೂಂ ಅನ್ನುತ್ತಾ ಕೇಳುತ್ತಾ ಕುಳಿತಿರ್ತೀನಿ….. ನನ್ನ ಬಾಳನ್ನು ನೆಟ್ಟಗೆ ಮಾಡೋಕೆ ಛೀ ಗುಟ್ಟಿದಾಗೆಲ್ಲ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಭಾಷೆ ಕೊಟ್ಟು ನಿನ್ನಿಂದ cute ಕೋತಿ ಅಂತ ಕರೆಸಿಕೊಳ್ತೀನಿ…. ಹೂಂ… Life ನಲ್ಲಿ First Time ಕೊಡ್ತಿರೋ Birth Day Gift ಈ coverನಲ್ಲಿದೆ… ನೋಡಿ ನಗಬೇಡ ಮಾರಾಯ್ತಿ… ಗೆಳೆಯ ಹುಡ್ಗೀರ್ಗೆ Teddy Bear ಇಷ್ಟ ಅಂದ ಅಂತ ತಗೊಂಡು ಬಂದೆ…. Wish You Belated Happy Birthday…. With Tons of Love…….

ನಿನ್ನ ಮುದ್ದಿನ ಕೋತಿ……….

ನನ್ನಾಸೆಯಾ ಹೂವೆ….. ಬೆಳದಿಂಗಳಾ ಚೆಲುವೆ….

ನನ್ನಾಸೆಯಾ ಹೂವೆ….. ಬೆಳದಿಂಗಳಾ ಚೆಲುವೆ….

ಕಾಲೇಜ್ ದಿನಗಳಲ್ಲಿ “ಮಿತ್ರಾ ಮಿತ್ರಾ ಮಿತ್ರಾ… ನೀ ಬರೆದುಕೊಡೋ ಪ್ರೇಮ ಪತ್ರಾ……” ಅಂತ ಹಿಂದೆ ಬೀಳುತ್ತಿದ್ದ ಅದೆಷ್ಟೋ ಹುಡುಗರಿಗೆ ಪತ್ರ ಬರೆದುಕೊಟ್ಟು ಅವರ ಲವ್ ಸಕ್ಸೆಸ್ ಆಗಲು ಸಹಾಯ ಮಾಡಿದವ ನಾನು…. ಆದರೆ ನನ್ನ ಲೈಫ್ ನಲ್ಲಿ ನಿನ್ನ0ತ ಬೆಳದಿಂಗಳ ಬಾಲೆ ಎಂಟ್ರೀ ಕೊಡ್ತಾಳೆ…. ನನ್ನ ಎದೆಬಡಿತ ದಾರಿತಪ್ಪುತ್ತೆ…. ನಾನೂ ಕೂಡ ಪ್ರೇಮದ ಬಲೆಯಲ್ಲಿ ಸಿಕ್ಕಿಬಿದ್ದು ಹೇಳೋಕೂ ಆಗ್ದೇ… ಸುಮ್ನಿರೋಕೂ ಆಗ್ದೇ ವಿಲಿ ವಿಲಿ ಒದ್ದಾಡ್ತೇನೆ…. ಆಮೇಲೆ ಈ ತರ ಪೆನ್ನು ಪೇಪರ್ ಹಿಡಿದು ಬಾರದ ಶಬ್ದಗಳಿಗಾಗಿ ತಡಕಾಡ್ತಾ ಕೂತ್ಗೋತೇನೆ ಅಂತ ನನ್ಮಾವನಾಣೆ (ಐ ಮೀನ್ ನಿನ್ನಪ್ಪನಾಣೆ) ನಾನು ಕನಸು ಮನಸಿನಲ್ಲಿ ಯೋಚನೆ ಮಾಡಿರ್ಲಿಲ್ಲ…. ಪ್ರೀತಿ ಯಾವಾಗ ಹುಟ್ಟುತ್ತೆ ಅಂತ ಅದ್ಯಾವನ್ನೋ ಕೇಳಿದ್ದಕ್ಕೆ…” ನಿನ್ನ ಟೈಮ್ ಕೆಟ್ಟಾಗ… ನಿನ್ನ ಮೇಲೆ ಶನಿಯ ವಕ್ರದೃಷ್ಟಿ ಬಿದ್ದಾಗ… ಪಾಪಿ ದೇವ್ರು ನಿನ್ನನ್ನ ಮಂಗನಂತೆ ಆಟ ಆಡ್ಸಿ ತಮಾಷೆ ತೊಗೊಳೋ ಮೂಡ್ನಲ್ಲಿ ಇದ್ದಾಗ….” ಅಂತ ಹೇಳಿದ್ನ0ತೆ….. ಹೌದು ಹುಡುಗಿ….. ನಿಜಕ್ಕೂ ನನ್ನ ಟೈಮ್ ಕೆಟ್ಟಿದೆ ಅನ್ಸೋಕೆ ಶುರುವಾಗಿದೆ… ಶನಿಯ ವಕ್ರದೃಷ್ಟಿ ನನ್ನ ಮೇಲೆ ಬಿದ್ದಿದ್ದಾಗಿದೆ…. ದೇವ್ರು ಆಗ್ಲೇ ಆಟ ಆಡ್ಸೋಕೆ ಶುರುವಿಟ್ಟುಕೊಂಡಿದ್ದಾನೆ….ಹೇಳು… ಅವತ್ತು ನಾನು ಬಾಲ್ಕನಿಯಲ್ಲಿ ನಿಂತಿದ್ದಾಗ ನೀನು ಹಾಗೇ ನನ್ನೆದುರು ಹಾದು ಹೋಗಿದ್ದೇಕೆ… ಸುಮ್ನೇ ಹೋದ್ರೆ ಆಗ್ತಿತ್ತು… ಆ ಸಲುಗೆಯ ಕಣ್ಣೋಟ ನನ್ನತ್ತ ಬೀರಿದ್ದೇಕೆ…. ಆ ಘಳಿಗೆಯಿಂದ
“ಕಣ್ ಕಣ್ಣ ಸಲುಗೆ… ಸಲುಗೆ ಅಲ್ಲ ಸುಲಿಗೆ..
ನೀನಿನ್ನು ನನಗೆ….. ನನಗೆ… ನನ್ನನಗೆ….”

ಎಂದು ಹೃದಯ ಹಾಡೋಕೆ ಶುರುವಿಟ್ಟಿದೆ…….

“ನೀನು ನನಗಾಗಿ… ನನ ಹೃದಯ ಮಿಡಿಯುವದೆ ನಿನಗಾಗಿ…..
ನೀನು ನನಗಾಗಿ… ನನ ಉಸಿರು ಆಡೋದೆ ನಿನಗಾಗಿ…..
ನೀನು ನನಗಾಗಿ…. ಭುವಿಗಿಳಿದು ಬಂದಿರುವೆ ಹೆಣ್ಣಾಗಿ…..
ನೀನು ನನಗಾಗಿ…… ಮುಡಿಪಿಡುವೆ ಬದುಕನ್ನೇ ನಿನಗಾಗಿ….”

ಅಂತ ಡಿಸೈಡ್ ಮಾಡಿಬಿಟ್ಟಿದ್ದೇನೆ……

ಇನ್ನು ಹೆಚ್ಚು ತಡ ಮಾಡೋದಿಲ್ಲ….. ಹೇಳೇ ಬಿಡ್ತೇನೆ…..
“ಚೆಲುವೆ ಒಂದು ಕೇಳ್ತೀನಿ… ಇಲ್ಲಾ ಅನ್ದೇ ಕೊಡ್ತೀಯಾ….
ನಿನ್ನಾ ಪ್ರೀತಿ ಮಾಡ್ತೀನಿ… ಮನಸು ಹೃದಯಾ ಕೊಡ್ತೀಯಾ…?”

ಹೌದು ಚೆಲುವೆ… I LOVE YOU…. ILOVE YOU… I LOVE YOU……

ನಿನ್ನುತ್ತರಕ್ಕಾಗಿ ಕಾಯ್ತಿರೋ…….

ಮದುವೆ ದಿನ ಮಾತ್ರ ಹಠ ಮಾಡಬೇಡ ಪ್ಲೀಸ್…..!!!

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೇ ನನ್ನದು
ತನುವು ನಿನ್ನದು ಮನವು ನಿನ್ನದು

ಹೌದು ನನ್ನ ತನು ಮನ ಎಲ್ಲಾ ನಿಂದೆ…. ನನ್ನ ಹೃದಯವನ್ನ ಸಂಪೂರ್ಣವಾಗಿ ನಿನ್ನ ಹೆಸರಿಗೆ ಬರೆದು, ಅದರ ಕದದ ಕೀಲಿ ಕೈ ನಿನ್ನ ಕೈಗೆ ಕೊಟ್ಟಾಗಿನಿಂದ ನನ್ನ ಮನೆಗೆ ನಾನೇ ಅತಿಥಿ….. ನನ್ನದೇ ಹೃದಯದ ಕೊಟೆಯಲ್ಲಿ ಸುತ್ತಾಡಲೂ ನನಗೀಗ ನಿನ್ನ permission ಬೇಕು… ಆ ಸ್ಥಿತಿಗೆ ಬಂದು ತಲುಪಿದ್ದೇನೆ….. ಅಂತಾದ್ದರಲ್ಲಿ ನೀನು ಹೀಗೆ ಮಾಡೋದು ಎಷ್ಟು ಸರಿ….?? ನಿನ್ನ ರೂಮಿನ ಕಿಟಕಿ, ಕಿಟಕಿಯನ್ನು ಬಳಸಿದ ಬಳ್ಳಿಗೆ ಗೊತ್ತಿರುವ ನಿನ್ನ ಬೇಕು ಬೇಡಗಳು ನನಗೆ ಗೊತ್ತಿಲ್ಲವಾ….?? ನೀನಲ್ಲಿ ಭುವಿಯನ್ನಪ್ಪಿದ ಮೊದಲ ಮಳೆಯಂತೆ, ಅಮ್ಮನ ಮಡಿಲಲ್ಲಿ ನಗುವ ಮಗುವಂತೆ, ಹುಣ್ಣಿಮೆಯ ಬೆಳದಿಂಗಳಂತೆ, ಗೋಡೆ ಮೇಲೆ ನಗುವ ಮೋನಾಲೀಸಾ ನಂತೆ, ಯಾವಾಗ್ಲೂ ನಗ್ ನಗ್ತಾ ಹಾಯಾಗಿದೀಯಾ ಅನ್ನೋ ಒಂದೇ ಕಲ್ಪನೆ ಹಾಗೂ ಭರವಸೆ ಹೊತ್ತು ನಾನು ಬದುಕ್ತಾ ಇದ್ರೆ, ಬರೆಯೋ ಪತ್ರಗಳಿಗೆಲ್ಲ ಕೊನೆಯಲಿ ಕಣ್ಣೀರ ಬಿಂದುಗಳನ್ನ ಅಂಟಿಸಿರ್ತೀಯಾ….ಫೋನ್ನಲ್ಲಿ ಮಾತಾಡುವಾಗ ನನ್ನನ್ನ ಸಿಕ್ಕಾಪಟ್ಟೆ ನಗಿಸಿ ಕೊನೆಯಲ್ಲಿ I miss You ಕಣೋ ಅಂತ ಬಿಕ್ಕಳಿಸುತ್ತೀಯಾ… ನನ್ನ ಮೇಲೆ ಇಷ್ಟು ಪ್ರೀತಿ ಇರೋ ನೀನು, ಅದ್ಯಾವುದೋ ವೆಂಕ ಭಟ್ಟರು ಹೇಳಿದ ಒಂದೇ ಒಂದು ಮಾತಿಗೆ, ನನ್ನ ಚಿಕ್ಕಿ ನನಗಾಗಿ ಯಾರದ್ದೋ ಜಾತಕ ತಂದ ಸುದ್ದಿ ಕೇಳಿದ್ದಕ್ಕೆ ಹೀಗೆ ಮಾಡ್ತೀಯಾ ಅಂತ ಅಂದುಕೊಂಡಿರಲಿಲ್ಲ ಕಣೇ ಜಿಂಕೆಮರಿ….

ದಾಹ ನೀಗೋ ಗಂಗೇಯೇ ದಾಹ ಎಂದು ಕುಂತರೇ…
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೇ…
ದಾರಿ ತೋರೊ ನಾಯಕ ಒಂಟಿ ಎಂದುಕೊಂಡರೆ……..
ಧೈರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ……..
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲಿ……..
ದಾರಿಯಿಲ್ಲ ಕಾಡಿನಲಿ ಆಸೆ ಇಲ್ಲ ಬಾಳಿನಲಿ…….
ನಂಬಿಕೆ ತಾಳುವ ಅಂಜಿಕೆ ನೀಗುವ……
ಶೋಧನೆ ಸಮಯ ಚಿಂತಿಸಿ ಗೆಲ್ಲುವ…..

ಬೇಡ ಮುದ್ದು…. ಇನ್ನು ಮೇಲೆ….

ಒಂದೇ ಒಂದು ಕಣ್ಣ ಬಿಂದು ಜಾರಿದರೂ ನನ್ನಾಣೆ….
ನಿನ್ನ ನೋವಾ ಜೊತೆ ಎಂದು ನಾನಿರುವೆ ನಿನ್ನಾಣೆ….

ದಿನವೂ ಬೇಲಿ ಸಂದಿಗಳಲ್ಲಿ ಹುಡುಕಿ ಜೇಬಿಗಿಳಿಸೋ ನನಗಾಗಿ ಬರೆದ ನಿನ್ನ ಪತ್ರಗಳು ಬರೀ ಪತ್ರಗಳಲ್ಲ…. ಕದ್ದ ಚಂದ್ರನ ತುಂಡುಗಳು….ನಾನು ತಾತನಾದ್ರೂ ನನ್ನಲ್ಲಿ ಹರೆಯದ ಉತ್ಸಾಹ ತುಂಬೋ ತಾಕತ್ತಿದೆ ಅವುಗಳಿಗೆ…ಕೊನೇ ತನಕ ಮರೆಯಲಾರದಂತೆ ಕಣ್ಣುಗಳಲ್ಲಿ ಬಚ್ಚಿಟ್ಟಿಕೊಂಡಿರೋ ನಿನ್ನ ಮುಖ ಬರೀ ಮುಖವಲ್ಲ… ಚಿಪ್ಪಿನಲ್ಲಿ ಸೇರಿ ಮುತ್ತಾಗೋ ಮೊದಲ ಮಳೆ ಹನಿಗಳು…. ಹೀಗಿರೋವಾಗ, ಪ್ರೀತಿ ಹಂಚಿಕೊಳ್ಳಲಾಗ್ದೇ, ಹೇಳಿಕೊಳ್ಳಲಾಗ್ದೇ ನರಳಿ, ಅರ್ಥ ಮಾಡಿಕೊಳ್ಳದ ಪಾಪಿ ದುನಿಯಾ ಮುಂದೆ ನೀನು ಕಣ್ಣಿರಿಗೆ ಆವಿಯಾಗೋ ಪಾಠ ಕಲಿಸೋದನ್ನ ನೋಡುತ್ತ , ಇನ್ನೊಬ್ಬ ಸುಂದರ, ಓದಿದ ಹುಡುಗಿ ಜೊತೆ ಚಕ್ಕಂದವಾಡ್ತಾ ಕೂರೋ ಪಾಪಿ ನಾನಾಗ್ತೀನಾ….?? ಖಂಡಿತಾ ಇಲ್ಲ…. ಗಿರಿನಗರದ ಹರಳೆಣ್ಣೇ ಮುಖದ ಚಿಕ್ಕಿ ತಂದ ಜಾತಕ, ಫೋಟೋ ಎರಡನ್ನೂ care of dust bin ಮಾಡಿದ್ದೇನೆ….. ನಿನ್ನ ಮುಂದೆ ಸುಳ್ಳು ಹೇಳಿದ ವೆಂಕ ಭಟ್ಟರು ಬರುವ ದಾರಿ ಕಾಯ್ತಾ ಕುಳಿತಿದ್ದೇನೆ… ಮೊನ್ನೆ ಅವರು ನಮ್ಮ ಮನೆಯಲ್ಲಿ ಮಾಡಿದ ಕಥೆಗೆ ಸರಿಯಾದ ದಕ್ಷಿಣೆ ಸಿಗದ ಉರಿಗೆ ಹೀಗೆ ಹೇಳಿದ್ದು ಅಂತ ಕಾಣ್ಸತ್ತೆ…. ನನ್ನ ಮದುವೆಗೆ ಆಗಲೇ ಛತ್ರ book ಆಗಿದೆ ಅಂತ ಸುಳ್ಳು ಹೇಳೋ ಮನಸ್ಸಾದರೂ ಹೇಗೆ ಬಂತೋ ಅವರಿಗೆ…. ಅವರ ಮುಖದ ಮೇಲೆ ಇನ್ನೊಂದು 500 ರ ನೋಟು ಬಿಸಾಕಿ ನಮ್ಮಿಬ್ಬರ ಮದುವೆಯನ್ನೂ ಮಾಡಿಸುವ agreement ಮಾಡಿಕೊಳ್ತೇನೆ… ಬಸವನಗುಡಿಯಲ್ಲಿರೋ ಛತ್ರದಲ್ಲಿ ಹಾರ ಬದಲಾಯಿಸಿಕೊಂಡು, ಗುರು-ಹಿರಿಯರ ಕಾಲಿಗೆರಾಗಿ ನೂರು ಕಾಲ ಸುಖವಾಗಿ ಬಾಳಿ ಮಕ್ಕಳಿರಾ ಅಂತ ಅವರಿಂದ ಆಶೀರ್ವಾದ ಪಡೆಯೋಕೆ ನಾನೂ ಕಾತುರನಾಗಿದ್ದೇನೆ….. ಆದ್ರೇ ಮದುವೆ ದಿನ ಮಾತ್ರ ಕುರುಚಲು ಗಡ್ಡ ಹಾಗೇ ಇರಲಿ ಅಂತ ಹಠ ಮಾಡಬೇಡ ಪ್ಲೀಸ್…..

ಎಂದೆಂದಿಗೂ ನಿನ್ನವನು…

$$ ನಿನ್ನ ನೆನಪು $$ಗಾಳಿ ತಂಪಿಗೆ.., ಮಣ್ಣ ಕಂಪಿಗೆ
ಹನಿಯ ಚಿಟ ಪಟ ಇಂಪಿಗೆ….
ಗುಡುಗೊ ಗುಡುಗಿಗೆ.., ಸುಳಿವ ಮಿಂಚಿಗೆ
ಮಿಂದು ತಣಿದಿಹ ಹೆಂಚಿಗೆ….
ಸೋತರೂ.., ಮೈ ಮರೆತು ಕುಳಿತರೂ….
ಬಿಡದೆ ಕಾಡುತಿದೆ ನಿನ್ನಯಾ ನೆನಪು….
ನಿನ್ನೆನಪೆ ಕೇದಿಗೆ ಸಂಪಿಗೆ

ಹರಿಯೋ ನೀರಲಿ ಕಾಗದದ ದೋಣಿ
ಕಾಗದದ ಮೇಲೆ ನನ್ನೆದೆಯ ವಾಣಿ
ಬರೆದಿರುವೆ ಕೊನೆಗೆ ನಿನ್ಹೆಸರ ರಾಣಿ
ಗುಟ್ಟಾಗಿ ಹೇಳಿರುವೆ ನೀನಿರುವ ಓಣಿ….
ದೋಣಿ ತೇಲುತ ಕಣ್ ತಪ್ಪಿ ಹೋದರೂ
ಬಿಡದೆ ಕಾಡುತಿದೆ ನಿನ್ನಯಾ ನೆನಪು..
ನಿನ್ನೆನಪೆ ನನ್ನೆದೆಯ ಬೀದಿಗೆ….

ಮುಸ್ಸಂಜೆ ಹೊಸ್ತಿಲಲಿ ಮಿನುಮಿನುಗೋ ದೀಪ….
ಅವನ ಒಲಿಸಲು ಜೊತೆಗೆ ಘಮ ಘಮದ ದೂಪ
ತೊಟ್ಟಿಲಲಿ ಕಿಲ ಕಿಲನೆ ಕೇಕೆ ಹಾಕುವ ಪಾಪ
ಕವಿಯ ಗರ್ಭದಲಿ ಕವಿತೆ ತಾ ತಳೆದು ರೂಪ
ಶಬ್ದ ಕೈಸಿಗದೆ ಕಂಗೆಟ್ಟು ಕುಳಿತರೂ
ಬಿಡದೆ ಕಾಡುತಿದೆ ನಿನ್ನಯಾ ನೆನಪು..
ನಿನ್ನೆನಪೆ ನನ ಹಾಡ ಸಾಲಿಗೆ….

ಮಳೆ ಸುರಿದು ನೆಲ ಹಸಿರು
ಧಣಿದ ಜಗಕೀಗ ಹೊಸ ಬಾಳು ಹೊಸ ಉಸಿರು
ನೀನೀರದೆ ನಾನಿಲ್ಲನೀನಿರದೆ ಏನಿಲ್ಲ
ನಿನ್ಹೆಸರ ಜಪವೊ0ದೇ ನನ್ನೆದೆಗೆ ಉಸಿರು….
ಬೆಳಕ ನುಂಗಿ ಕಾಡುತಿರೆ ಕತ್ತಲೆ….
ಮತ್ತೆ ಮೂಡುತಿದೆ ನಿನ್ನಯಾ ನೆನಪು….
ನಿನ್ನೆನಪೆ ನನ ಬಾಳ ದೀವಿಗೆ…..