Sunday, 21 June 2009
ಸಬೂಬು..!!
ಕೋಗಿಲೆಗೆ ದನಿಯ ಇಂಪು...
ಹೂಗಳಿಗೆ ಕಂಪು...
ನದಿಗೆ ಕಲರವ
ಸಾಗರಕೆ ಅಲೆಯ ಸ್ಪರ್ಶ
ಸೂರ್ಯ, ಚಂದ್ರ,
ತಾರೆಗಳಿಗೆಹೊಳಪು...
ನೀನೆ ಕಲಿಸಿರುವೆಯoತೆ...!!
ಅವುಗಳದ್ದು ಒಂದೇ ಪುಕಾರು...
ಗುರುದಕ್ಷಿಣೆ ಸ್ವೀಕರಿಸದೇ
ಬಂದಿರುವೆಯಂತೆ...??
ನಾನೀಗ ಅವುಗಳ ರಾಯಭಾರಿ...
ಸಾವಿರದ ಒಂದು ಮುತ್ತುಗಳನ್ನು
ನಿನಗೆ ಕಾಣಿಕೆಯಾಗಿ ನೀಡಿವೆ....
ಹೇಳು ಚೆಲುವೆ....
ಯಾವಾಗ ಕೊಡಲಿ......??
Tuesday, 19 May 2009
ಹೆಸರಿಡದ ಹನಿಗಳು....!!
1.
ಅದೇನು ಆತುರ ನಿನಗೆ..??
ನಾನು ಕಣ್ಣು ಮಿಟುಕಿಸುವ ಮೊದಲೇ...
ನನ್ನ ಗಲ್ಲವ ಕಚ್ಛಾಯ್ತು...!!
ಅದೆಷ್ಟು ಗಾಢ ವರ್ಣ
ನಿನ್ನ ಲಿಪ್ ಸ್ಟಿಕ್ನದು..??
ನನಗರಿವಿಲ್ಲದೆಯೇ
ನಾಳಿನ ನ್ಯೂಸ್ ಪೇಪರ್
ಅಚ್ಛಾಯ್ತು.....!!
****************************
2.
ಮಂದಿರದ ಕೇಸರಿ ಪತಾಕೆ....
ಮಸೀದಿಯ ಹಸಿರು ಗೋಡೆ....
ಚರ್ಚಿನ ಬಿಳಿಯ ಬಾಗಿಲು....
ಸೂರ್ಯನುದಯಕ್ಕೆ ಕಾತರಿಸಿವೆ...
ಸೂರ್ಯನ ಬೆಳಕಲ್ಲಿ ಅವುಗಳ
ನೆರಳಿಗೆ ಒಂದೇ ಬಣ್ಣ.....!!
****************************
3.
ನವ ವಧುವಂತೆ
ಸಿಂಗರಿಸಿಕೊಂಡು
ಭೂ ತಾಯಿ
ಮೆರವಣಿಗೆ ಹೊರಟಿದ್ದಾಳೆ...
ಚೆಲುವಿಗೆ
ಮನಸೋತ ತಾರೆಗಳು
ಮೋಡದ ಮರೆಯಲ್ಲಿ ನಿಂತು
ಫೋಟೋ ಕ್ಲಿಕ್ಕಿಸುತ್ತಿವೆ...!!
Thursday, 14 May 2009
ತಪ್ಪಿರುವ ಕಾಗುಣಿತ....!!!
ಅಲ್ಪಪ್ರಾಣ...
ನೀನೆಂಬ ಮಾಯೆಯ ಮೇಲೆ
ಮಹಾಪ್ರಾಣ....
ಎಲ್ಲೋ ಉದ್ಘಾರ ವಾಚಕ,
ಇನ್ನೆಲ್ಲೋ ಪ್ರಶ್ನಾರ್ತಕ....
ಅಲ್ಲೆಲ್ಲೋ ಅಲ್ಪವಿರಾಮ,
ಮತ್ತೆಲ್ಲೋ ಪೂರ್ಣವಿರಾಮ...
ಹೃಸ್ವ, ಧೀರ್ಘ....,
ಕೊಂಬು, ತಲೆಗಟ್ಟು ಯಾವುದೂ
ಇರಬೇಕಾದಲ್ಲಿ ಇಲ್ಲ....
ಪ್ರತಿ ಸಾಲಿನಲ್ಲೂ ತಪ್ಪು ಹೆಜ್ಜೆಯಿಟ್ಟು
ತಡವರಿಸುತ್ತಿರುವ ಕಾಗುಣಿತ...
ಆದರೂ ನಿಶ್ಚಿಂತೆ....
ಏನೂ ಇಲ್ಲದಿದ್ದರೂ
ನೀನಿರುವೆಯೆಂಬ ಕಲ್ಪನೆಯೊಂದಿದೆ..
ಆ ಕಲ್ಪನೆಯಿಂದಲೇ
ನನ್ನ ಕವಿತೆಗಳಿಗೆ ಹೊಸ ಅರ್ಥ ಬಂದಿದೆ...
Saturday, 2 May 2009
ಕೋರಿಕೆ......!!
ನಿನ್ನ ಕಣ್ಣಿoದ ಹೊರಟಿತು ಮಾತು
ನಾ ಜಾರಿದೆ ಪ್ರೀತಿಯ ಹೊಳೆಗೆ...
ಬಿಡದೆ ಸೆಳೆದಿದೆ ನಿನ್ನಯ ನಶೆಯು

ಮೈ ಮರೆತಿಹೆ ಪ್ರೀತಿಯ ಕರೆಗೆ.....
ಪ್ರೀತಿಯೆಂದರೆ ನೋವಿನ ಸಂತೆ
ಎನ್ನುವ ಮೂಢರಿಹರು ಈ ಜಗದೊಳಗೆ.......
ಸಾವ ಭಯವ ಮೀರಿಸಿ ಸೆಳೆವುದು..
ಪ್ರೀತಿಯೇ ಪತಂಗವ ದೀಪದ ಕಡೆಗೆ...
ಪ್ರೀತಿಯಿನಿತಿಲ್ಲ ನಿನಗೆ ನನ್ನಲ್ಲಿ
ಸುಮ್ಮನೆ ನಾಟಕ ಗೊತ್ತೆನಗೆ...
ನಾಟಕವಾದರೂ ಬೇಸರವಿಲ್ಲ
ಮಾಡುತಲಿರು ನಾ ಇರೋವರೆಗೆ...
ನನ್ನಯ ಕೋರಿಕೆ ಇಷ್ಟೇ ಚೆಲುವೆ
ಆದರೆ ಒಮ್ಮೆ ಬಂದುಬಿಡು.....
ಬಂದೆಯೆಂದರೆ ಇರಲೇಬೇಕು
ನನ್ನ ಕೊನೆಯುಸಿರು ಇರೋವರೆಗೆ....
Thursday, 23 April 2009
ಉತ್ತರದ ಅಪೇಕ್ಷೆಯಿಲ್ಲದ ಪ್ರಶ್ನೆಗಳು....
ಮುದ್ದು ಜಿಂಕೆಮರಿ....
ಇವತ್ತು ನಿನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳೋದಕ್ಕಿದೆ.... ಎಂದಿನಂತೆ, ಉತ್ತರಿಸಲೇ ಬೇಕು ಎನ್ನೋ Condition ಇವತ್ತೂ ಇಲ್ಲ.... ಹಾಗೇ ಸುಮ್ಮನೇ ಓದಿ ಮುಗುಳ್ನಕ್ಕರೆ ಸಾಕು... ಸೂರ್ಯನ ಬೆಳಕನ್ನು ಪ್ರತಿಪಲಿಸಿ ಚಂದ್ರ ಹೊಳೆವಂತೆ, ಆ ನಗುವ ನೋಡಿ ನಾನೂ ಸ್ವಲ್ಪ ನಗುತ್ತೇನೆ.... ನಿನ್ನ ಕಣ್ಣುಗಳಲ್ಲಿ ಹೊಳೆದು ಮಾಯವಾಗೋ ಉತ್ತರಗಳನ್ನ ಹಾಗೇ ನನ್ನ ಕಣ್ಣ ಕನ್ನಡಿಯಲ್ಲಿ ಖೈದು ಮಾಡಿಕೊಳ್ಳುತ್ತೇನೆ....ಕಂಗಳ ಹೊಳಪು ಅಂದ ಕೂಡಲೇ ನೆನಪಾಯ್ತು ನೋಡು... ನಾನು ಕೇಳಬೇಕಿದ್ದ ಮೊದಲ ಪ್ರಶ್ನೆ ಅದೇ.... ಮುಂದೇನು ಎಂದು ತೋಚದೇ ನಾನು ಕತ್ತಲಲ್ಲಿ ಕೊಸರಾಡುತ್ತಿರುವಾಗಲೆಲ್ಲ ಬೆಳಕಾಗಿ ನನ್ನನ್ನ ಕತ್ತಲಿಂದ ಹೊರಗೆ ತರೋದು ಅದೇ ನಿನ್ನ ಕಂಗಳ ಹೊಳಪು... ಆ ಕಣ್ಣುಗಳಲ್ಲಿ ಕಣ್ಣನಿಟ್ಟು ನೋಡ್ತಾ ಇದ್ರೆ ಮನಸ್ಸು
ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು....
ಕಣ್ಣಿನ ಮಾತುಗಳು ಬಿಡಿಸ್ಹೇಳದ ಒಗಟುಗಳು
ಕಣ್ಣಿನ ಹಾಡುಗಳು ತಿರು ತಿರುಗಿಸೋ ರಾಟೆಗಳು
ಇಂತೋಳ ಕಣ್ಣಿನಲಿ ನಾನು ಸೇರಿಕೊಳ್ಳಲೆ ಹಾಡಿಕೊಳ್ಳಲೆ......
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
ಅಂತ ಹಾಡೋಕೆ ಶುರುವಿಟ್ಟುಕೊಳ್ಳುತ್ತದೆ....
ನೀನು ಆ ಹೊಳಪನ್ನು ಕದ್ದು ಕಣ್ಣಿಗೇರಿಸಿಕೊಂಡದ್ದಾದ್ರೂ ಯಾರಿಂದ...?? ಜಗವ ಬೆಳಗೋ ಜವಾಬ್ದಾರಿ ಹೊತ್ತು, ತನ್ನೊಡಲಲ್ಲಿ ಉರಿಯೋ ಬೆಂಕಿಯನ್ನಿಟ್ಟುಕೊಂಡು ಜಗತ್ತಿಗೇ ಬೆಳಕು ಕೊಡೋ ಸೂರ್ಯನಿಂದಲಾ...?? ತಾಯಿ ಮಗುವಿಗೆ ಊಟ ಮಾಡಿಸಲು ಹೆಳೆಯಾಗೋ, ಪ್ರೇಮಿಗಳಿಗೆ ಪ್ರಿಯತಮೆಯ ಹೋಲಿಕೆಗೆ ಕೈ ಸಿಗೋ, ಕವಿಗಳ ಕವಿತೆಗೆ ಸ್ಪೂರ್ತಿಯಾಗೋ ಚಂದ್ರನಿಂದಲಾ...?? ಅಥವಾ ದಿನ ರಾತ್ರಿ ಆಗಸಕ್ಕೆ ದೀಪದ ಅಲಂಕಾರ ಮಾಡೋ ಕೋಟಿ ತಾರೆಗಳಿಂದಲಾ...?? ದೇವರ ಗುಡಿಯಲ್ಲಿ ಆಗತಾನೆ ಬೆಳಗಿಸಿಟ್ಟ ದೀಪದಿಂದಲಾ..?? ಇಲ್ಲಾ ದೀಪಾವಳಿಯಂದು ಮನೆ ಮನೆಯಲ್ಲಿ ಸಿಂಗರಿಸಿಕೊಂಡು ಬೆಳಗೋ ಆಕಾಶಬುಟ್ಟಿಯಿಂದಲಾ...?? ಆಗಸದಿಂದ ಧರೆಗೆ ಚಿಮ್ಮಿ, ನೀನು ಕಿಟಾರ್ ಅಂತ ಕಿರುಚಿ ನನ್ನೆದೆಗೆ ಒರಗುವಂತೆ ಮಾಡೋ ಮುಂಗಾರಿನ ಮಿಂಚಿನಿಂದಲಾ...?? ಇಲ್ಲಾ ಗಣೇಶೋತ್ಸವದ ವಿದ್ಯುದಲಂಕಾರದಂತೆ ಮಿನುಗಿ ಪ್ರತಿ ಇರುಳಿಗೂ ಹೊಸ ಮೆರುಗು ನೀಡೋ ಜೀವ ಜಗದ ವಿಸ್ಮಯ ಮಿಂಚು ಹುಳದಿಂದಲಾ...?? ಚೆಂದುಳ್ಳಿ ಚೆಲುವೆಯರ Ramp Walk ಗೆ ಸಾಥ್ ನೀಡೋ Shoping Mall ಗಳ ರಂಗು ರಂಗಿನ ದಿಪಗಳಿಂದಲಾ.....?? ಅಥವಾ ಸಿರಸಿ ಜಾತ್ರೆಯ ಜಂಬೋ ಸರ್ಕಸ್ ನವರು ಆಕಾಶಕ್ಕೊಂದು ಏಣಿ ಬರೆದಂತೆ ತೇಲಿ ಬಿಟ್ಟ ಸರ್ಚ್ ಲೈಟ್ ನಿಂದಲಾ...??
ಅದು ಏನು ಅಂತ ನಿನ್ನ ದನಿಯಲ್ಲೇ ಕೇಳುವಾಸೆ... ಹೌದು... ನಿನ್ನ ದ್ವನಿ ಕೇಳಿದಾಗಲೆಲ್ಲ ಹೃದಯ
ನಿನ್ನ ನುಡಿಯು ಹೊನ್ನ ನುಡಿಯು
ಜೇನ ಹನಿಯು ಅಧರಕೆ...
ನನ್ನ ಎದೆಯ ವೀಣೆ ತಂತಿಯ ಮೀಟಿ ಓಡಿದೇ ಏತಕೆ...??
ಅಂತ ಹಾಡತೊಡಗುತ್ತದೆ...
ನಿನ್ನ ಗಂಟಲಲ್ಲಿ ಇಷ್ಟು ಮಧುರ ದ್ವನಿಯಾದ್ರೂ ಯಾತರಿಂದ ಸೇರಿಕೊಂಡಿತು..?? ಮಾವಿನ ಮರದಲ್ಲಿ ಅಡಗಿ ಕುಳಿತು ವಸಂತನಿಗೆ ಸ್ವಾಗತ ಹಾಡೋ ಕೊಗಿಲೆಯಿಂದಲಾ...?? ಅಥವಾ ಮಂದಿರದಲ್ಲಿ ಮೊಳಗುವ ಮಂತ್ರಘೋಶದಿಂದಲಾ...?? ಅಮ್ಮನ ಮಡಿಲಲ್ಲಿ ಕೇಕೆ ಹಾಕೋ ಕಂದಮ್ಮನಿಂದಲಾ....?? ಅಥವಾ ದ್ವಾಪರದ ಕೃಷ್ಣ ನುಡಿಸಿದ ಕೊಳಲಿನಿಂದಲಾ...?? ವಿಧ್ಯಾದಿದೇವತೆ ಸರಸ್ವತಿಯ ಕೈಲಿರೋ ವೀಣೆಯಿಂದಲಾ...?? ಅಥವಾ ಬಿಸ್ಮಿಲ್ಲಾ ಖಾನರ ಶೆಹನಾಯಿಯಿಂದಲಾ..?? ನಿನ್ನಷ್ಟಕ್ಕೆ ನೀನು ಹಾಡಿಕೊಳ್ಳೋದು, ಮುಂಗಾರಿನ ಮಳೆಯಂತೆ ೨೪/೭ non stop ಮಾತನಾಡೋದು, ಕಲ್ಲನ್ನೂ ಕರಗಿಸೋ ಹಾಗೆ ನಗೋದು, ದೂರದಲ್ಲಿದ್ರೆ ಕೋತೀ ssssssss ಅಂತ ನನ್ನ ಕೂಗೋದು... ಹತ್ತಿರದಲ್ಲಿದ್ರೆ ನನ್ನ ಕಿವಿಯಲ್ಲೇ ಪಿಸುಗುಟ್ಟೋದು.... wooooooow.... ಸಪ್ತ ಸ್ವರ ಮಾದುರ್ಯವನ್ನ, ಸಂಗೀತದ ರಾಗ ತಾಳ ಲಯವನ್ನ ಆ ಬ್ರಹ್ಮ ನಿನ್ನ ಕೊರಳಲ್ಲಿ ತುಂಬಿಯೇ ಭೂಮಿಗೆ ಕಳಿಸಿದ್ದಾನೆ ಅಂತ ಅನಿಸೋದು ಅತಿಶಯವಲ್ಲ...
ಮೊದಲೇ ಹೇಳಿದಂತೆ ಈ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು ಅಂತೇನು ಇಲ್ಲ... ಸುಮ್ಮನೆ ಓದಿ ನಕ್ಕರೆ ಸಾಕು... ಸ್ವರ್ಗ ಇಲ್ಲಿಯೇ ಕಂಡುಕೊಳ್ಳುತ್ತೇನೆ....
ನಿನ್ನ ಮುದ್ದಿನ ಕೋತಿ....
Wednesday, 22 April 2009
ನಶೆ
ನಶೆಯದೆಷ್ಟು ಚೆಲುವೆ...
ನಿನ್ನ ಕಣ್ಣುಗಳ ರಂಗಿನಲಿ...??
ನೋಡಿ ನಾನಾದೆ ದಂಗು...
ನಿಜ, ಕೇವಲ ಕಣ್ಣುಗಳಲ್ಲ ಅವು...
ನಶೆಯನೀಯೊ ಗಡoಗು...!!
ಸೂರ್ಯನತ್ತ ಅಗ್ನಿಶಾಮಕ
Thursday, 16 April 2009
ಪ್ರೀತ್ಸೋಣ ಬಾ
ಪ್ರೀತಿ ಕೆಡಿಸುತ್ತೆ ಮತಿ...
ಮರೆಸುತ್ತೆ ನಮ್ಮ ಇತಿ-ಮಿತಿ...
ಜಗವೆ ಹುಚ್ಚರ ಸಂತೆ...
ಬಾ ತಲೆ ಕೆಡಿಸಿಕೊಳ್ಳೋಣ ನಾವೂ...!!
ಪ್ರೀತಿ ನೋವ ಒಡತಿ...
ನಲಿವು ಅದರ ಸವತಿ...
ಯಾರಿಗಿಲ್ಲ ನೋವು...??
ಬಾ ಈ ನೋವ ಸವಿಯೋಣ ನಾವು...!!
ಪ್ರೀತಿ ವಿಷದ ರೀತಿ...
ಹೇಳೋದು ಜಗದ ನೀತಿ...
ಯಾರಿಗಿಲ್ಲ ಸಾವು...??
ಬಾ ಈ ವಿಷವ ಕುಡಿಯೋಣ ನಾವು...!!
Friday, 10 April 2009
ಕಾರಣ..!!
ಹುಡುಕಿದರೂ ಸಿಗದು ಕಾರಣ..
ದಿನ ರಾತ್ರಿ ಕನಸುಗಳ ಅನಾವರಣ...
ನೀರಸ...ನಿರಾಕಾರ....

ಪ್ರಸಾರ ಕಪ್ಪು-ಬಿಳುಪು....
ನೀ ಸುಳಿದರೆ ಮಾತ್ರ....
ಅವುಗಳಿಗೆ ಮಳೆಬಿಲ್ಲ ವರ್ಣ....
ಹುಡುಕಿದರೂ ಸಿಗದು ಕಾರಣ...
ಬರೆದ ಪಲ್ಲವಿಗಳಿಗೆ ಸಿಗದು ಚರಣ...
ಅಸ್ಪಷ್ಟ... ಅಸಂತುಷ್ಟ...
ಸಾಲುಗಳೆಲ್ಲ ತಪ್ಪು-ತಪ್ಪು...
ನೀ ಪದವಾದರೆ ಮಾತ್ರ....
ಕವಿತೆಗಳಲಿ ಜೀವ ಸ್ಫುರಣ....

