Thursday 9 April 2009

ಮದುವೆ ದಿನ ಮಾತ್ರ ಹಠ ಮಾಡಬೇಡ ಪ್ಲೀಸ್…..!!!

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೇ ನನ್ನದು
ತನುವು ನಿನ್ನದು ಮನವು ನಿನ್ನದು

ಹೌದು ನನ್ನ ತನು ಮನ ಎಲ್ಲಾ ನಿಂದೆ…. ನನ್ನ ಹೃದಯವನ್ನ ಸಂಪೂರ್ಣವಾಗಿ ನಿನ್ನ ಹೆಸರಿಗೆ ಬರೆದು, ಅದರ ಕದದ ಕೀಲಿ ಕೈ ನಿನ್ನ ಕೈಗೆ ಕೊಟ್ಟಾಗಿನಿಂದ ನನ್ನ ಮನೆಗೆ ನಾನೇ ಅತಿಥಿ….. ನನ್ನದೇ ಹೃದಯದ ಕೊಟೆಯಲ್ಲಿ ಸುತ್ತಾಡಲೂ ನನಗೀಗ ನಿನ್ನ permission ಬೇಕು… ಆ ಸ್ಥಿತಿಗೆ ಬಂದು ತಲುಪಿದ್ದೇನೆ….. ಅಂತಾದ್ದರಲ್ಲಿ ನೀನು ಹೀಗೆ ಮಾಡೋದು ಎಷ್ಟು ಸರಿ….?? ನಿನ್ನ ರೂಮಿನ ಕಿಟಕಿ, ಕಿಟಕಿಯನ್ನು ಬಳಸಿದ ಬಳ್ಳಿಗೆ ಗೊತ್ತಿರುವ ನಿನ್ನ ಬೇಕು ಬೇಡಗಳು ನನಗೆ ಗೊತ್ತಿಲ್ಲವಾ….?? ನೀನಲ್ಲಿ ಭುವಿಯನ್ನಪ್ಪಿದ ಮೊದಲ ಮಳೆಯಂತೆ, ಅಮ್ಮನ ಮಡಿಲಲ್ಲಿ ನಗುವ ಮಗುವಂತೆ, ಹುಣ್ಣಿಮೆಯ ಬೆಳದಿಂಗಳಂತೆ, ಗೋಡೆ ಮೇಲೆ ನಗುವ ಮೋನಾಲೀಸಾ ನಂತೆ, ಯಾವಾಗ್ಲೂ ನಗ್ ನಗ್ತಾ ಹಾಯಾಗಿದೀಯಾ ಅನ್ನೋ ಒಂದೇ ಕಲ್ಪನೆ ಹಾಗೂ ಭರವಸೆ ಹೊತ್ತು ನಾನು ಬದುಕ್ತಾ ಇದ್ರೆ, ಬರೆಯೋ ಪತ್ರಗಳಿಗೆಲ್ಲ ಕೊನೆಯಲಿ ಕಣ್ಣೀರ ಬಿಂದುಗಳನ್ನ ಅಂಟಿಸಿರ್ತೀಯಾ….ಫೋನ್ನಲ್ಲಿ ಮಾತಾಡುವಾಗ ನನ್ನನ್ನ ಸಿಕ್ಕಾಪಟ್ಟೆ ನಗಿಸಿ ಕೊನೆಯಲ್ಲಿ I miss You ಕಣೋ ಅಂತ ಬಿಕ್ಕಳಿಸುತ್ತೀಯಾ… ನನ್ನ ಮೇಲೆ ಇಷ್ಟು ಪ್ರೀತಿ ಇರೋ ನೀನು, ಅದ್ಯಾವುದೋ ವೆಂಕ ಭಟ್ಟರು ಹೇಳಿದ ಒಂದೇ ಒಂದು ಮಾತಿಗೆ, ನನ್ನ ಚಿಕ್ಕಿ ನನಗಾಗಿ ಯಾರದ್ದೋ ಜಾತಕ ತಂದ ಸುದ್ದಿ ಕೇಳಿದ್ದಕ್ಕೆ ಹೀಗೆ ಮಾಡ್ತೀಯಾ ಅಂತ ಅಂದುಕೊಂಡಿರಲಿಲ್ಲ ಕಣೇ ಜಿಂಕೆಮರಿ….

ದಾಹ ನೀಗೋ ಗಂಗೇಯೇ ದಾಹ ಎಂದು ಕುಂತರೇ…
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೇ…
ದಾರಿ ತೋರೊ ನಾಯಕ ಒಂಟಿ ಎಂದುಕೊಂಡರೆ……..
ಧೈರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ……..
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲಿ……..
ದಾರಿಯಿಲ್ಲ ಕಾಡಿನಲಿ ಆಸೆ ಇಲ್ಲ ಬಾಳಿನಲಿ…….
ನಂಬಿಕೆ ತಾಳುವ ಅಂಜಿಕೆ ನೀಗುವ……
ಶೋಧನೆ ಸಮಯ ಚಿಂತಿಸಿ ಗೆಲ್ಲುವ…..

ಬೇಡ ಮುದ್ದು…. ಇನ್ನು ಮೇಲೆ….

ಒಂದೇ ಒಂದು ಕಣ್ಣ ಬಿಂದು ಜಾರಿದರೂ ನನ್ನಾಣೆ….
ನಿನ್ನ ನೋವಾ ಜೊತೆ ಎಂದು ನಾನಿರುವೆ ನಿನ್ನಾಣೆ….

ದಿನವೂ ಬೇಲಿ ಸಂದಿಗಳಲ್ಲಿ ಹುಡುಕಿ ಜೇಬಿಗಿಳಿಸೋ ನನಗಾಗಿ ಬರೆದ ನಿನ್ನ ಪತ್ರಗಳು ಬರೀ ಪತ್ರಗಳಲ್ಲ…. ಕದ್ದ ಚಂದ್ರನ ತುಂಡುಗಳು….ನಾನು ತಾತನಾದ್ರೂ ನನ್ನಲ್ಲಿ ಹರೆಯದ ಉತ್ಸಾಹ ತುಂಬೋ ತಾಕತ್ತಿದೆ ಅವುಗಳಿಗೆ…ಕೊನೇ ತನಕ ಮರೆಯಲಾರದಂತೆ ಕಣ್ಣುಗಳಲ್ಲಿ ಬಚ್ಚಿಟ್ಟಿಕೊಂಡಿರೋ ನಿನ್ನ ಮುಖ ಬರೀ ಮುಖವಲ್ಲ… ಚಿಪ್ಪಿನಲ್ಲಿ ಸೇರಿ ಮುತ್ತಾಗೋ ಮೊದಲ ಮಳೆ ಹನಿಗಳು…. ಹೀಗಿರೋವಾಗ, ಪ್ರೀತಿ ಹಂಚಿಕೊಳ್ಳಲಾಗ್ದೇ, ಹೇಳಿಕೊಳ್ಳಲಾಗ್ದೇ ನರಳಿ, ಅರ್ಥ ಮಾಡಿಕೊಳ್ಳದ ಪಾಪಿ ದುನಿಯಾ ಮುಂದೆ ನೀನು ಕಣ್ಣಿರಿಗೆ ಆವಿಯಾಗೋ ಪಾಠ ಕಲಿಸೋದನ್ನ ನೋಡುತ್ತ , ಇನ್ನೊಬ್ಬ ಸುಂದರ, ಓದಿದ ಹುಡುಗಿ ಜೊತೆ ಚಕ್ಕಂದವಾಡ್ತಾ ಕೂರೋ ಪಾಪಿ ನಾನಾಗ್ತೀನಾ….?? ಖಂಡಿತಾ ಇಲ್ಲ…. ಗಿರಿನಗರದ ಹರಳೆಣ್ಣೇ ಮುಖದ ಚಿಕ್ಕಿ ತಂದ ಜಾತಕ, ಫೋಟೋ ಎರಡನ್ನೂ care of dust bin ಮಾಡಿದ್ದೇನೆ….. ನಿನ್ನ ಮುಂದೆ ಸುಳ್ಳು ಹೇಳಿದ ವೆಂಕ ಭಟ್ಟರು ಬರುವ ದಾರಿ ಕಾಯ್ತಾ ಕುಳಿತಿದ್ದೇನೆ… ಮೊನ್ನೆ ಅವರು ನಮ್ಮ ಮನೆಯಲ್ಲಿ ಮಾಡಿದ ಕಥೆಗೆ ಸರಿಯಾದ ದಕ್ಷಿಣೆ ಸಿಗದ ಉರಿಗೆ ಹೀಗೆ ಹೇಳಿದ್ದು ಅಂತ ಕಾಣ್ಸತ್ತೆ…. ನನ್ನ ಮದುವೆಗೆ ಆಗಲೇ ಛತ್ರ book ಆಗಿದೆ ಅಂತ ಸುಳ್ಳು ಹೇಳೋ ಮನಸ್ಸಾದರೂ ಹೇಗೆ ಬಂತೋ ಅವರಿಗೆ…. ಅವರ ಮುಖದ ಮೇಲೆ ಇನ್ನೊಂದು 500 ರ ನೋಟು ಬಿಸಾಕಿ ನಮ್ಮಿಬ್ಬರ ಮದುವೆಯನ್ನೂ ಮಾಡಿಸುವ agreement ಮಾಡಿಕೊಳ್ತೇನೆ… ಬಸವನಗುಡಿಯಲ್ಲಿರೋ ಛತ್ರದಲ್ಲಿ ಹಾರ ಬದಲಾಯಿಸಿಕೊಂಡು, ಗುರು-ಹಿರಿಯರ ಕಾಲಿಗೆರಾಗಿ ನೂರು ಕಾಲ ಸುಖವಾಗಿ ಬಾಳಿ ಮಕ್ಕಳಿರಾ ಅಂತ ಅವರಿಂದ ಆಶೀರ್ವಾದ ಪಡೆಯೋಕೆ ನಾನೂ ಕಾತುರನಾಗಿದ್ದೇನೆ….. ಆದ್ರೇ ಮದುವೆ ದಿನ ಮಾತ್ರ ಕುರುಚಲು ಗಡ್ಡ ಹಾಗೇ ಇರಲಿ ಅಂತ ಹಠ ಮಾಡಬೇಡ ಪ್ಲೀಸ್…..

ಎಂದೆಂದಿಗೂ ನಿನ್ನವನು…

1 comment: