Thursday, 12 September 2019

ವಯೋಧರ್ಮ



ಬಾಗಿಬಳಲಿದ ದೇಹ 
ಸುರುಟಿದೊಣ ಚರ್ಮ...
ಮಸುಪು ಕಣ್ಣಿನ ನೋಟ
ತೊದಲು ವಯೋಧರ್ಮ!

ಮಂದ ಕಿವಿಯಾಲಿಕೆಯು
ಕಂಪಿಸುವ ಕೈಯಿ...
ಕೃತಕ‌ದಂತದ ಕವಚ
ಠಂಕಿಸಿದ ಬಾಯಿ!

ಮಾಗಿದೆನ್ನಯ ಬಾಳು
ಪರಿಪೂರ್ಣ ಗ್ರಂಥ
ಕನ್ನಡಿಯ ಹೊರಗಿನ್ನೂ
ನಾನು ಜೀವಂತ!

ಹಾಲುಬಿಳುಪಿನ ದೇಹ
ಹೊಳೆವ ಮೈಕಾಂತಿ..
ಮೊನಚುಗಣ್ಣಿನ ನೋಟ
ಮಾತಿನಲಿ ಛಾತಿ!

ಮಿನುಗುಮುತ್ತಿನ ದಂತ
ಅಪ್ಸರೆಯ ಉಡುಗೆ..
ನವಿಲನಾಟ್ಯಕು ಚಂದ
ಮೇನಕೆಯ ನಡುಗೆ!

ಬಾಳಪುಟಗಳ ಬರೆವ
ಆಸೆ ದಾವಂತ..
ಕನ್ನಡಿಯ ಒಳಗಿನ್ನೂ
ನಾನು ಶ್ರೀಮಂತ..!!

ಗೆಳೆತನ







ಬಯಸೆ ನಾನು ಎಂದಿಗು 
ದೊಡ್ಡ ಜನರ ಗೆಳೆತನ...
ಅಳತೆಗೋಲು ಆಗದು 
ಸ್ನೇಹಕ್ಕೆ ಪದವಿ ಸಿರಿತನ..
ಬೊಗಸೆಯೊಡ್ಡಿ ಬೇಡುವೆ 
ಹರಸು ದೇವ ಅನುದಿನ..
ಸ್ನೇಹಿತರ ಬಾಳು ಬೆಳಗಲಿ,
ಸಿಗಲಿ ಕೀರ್ತಿ ಹಿರಿತನ..

ನೋವ ಮರೆಸಿ ನಲಿವ ಬಲವ
ಸ್ನೇಹ ತುಂಬಿ ಕೊಡುವುದು...
ಸೋಲಿನಲ್ಲು ಗೆಲುವ ಛಲವ
ಸ್ನೇಹ ಹೊತ್ತು ತರುವುದು...
ಶುದ್ದ ಸ್ನೇಹವಿರುವ ಕಡೆಗೆ
ಸ್ವಾರ್ಥವೆಂದು ಸುಳಿಯದು...
ಉಸಿರು ಇರುವವರೆಗು ಜೊತೆಗೆ
ಸ್ನೇಹವೊಂದೆ ಉಳಿವುದು...

ಜಾತಿಮತ ಮೇಲುಕೀಳು
ಸ್ನೇಹವೆಂದೂ ಕೇಳದು..
ಊರುಕೇರಿ ವೇಷಭಾಷೆ
ಸ್ನೇಹಕೆಂದೂ ಕಾಣದು...
ಅಸೂಯೆಈರ್ಷ್ಯೆ ಭೇದಭಾವ
ಸ್ನೇಹವೆಂದೂ ತೋರದು..
ಹೊನ್ನುಮಣ್ಣು ಆಸ್ತಿಪಾಸ್ತಿ
ಸ್ನೇಹವೆಂದೂ ಬೇಡದು...

ನೂರು ಕಹಿಯ ಮರೆಸುವಂತ
ಸ್ನೇಹಶಕ್ತಿ ಅದ್ಬುತ..
ಸಾವಗೆಲುವ ಶಕ್ತಿಯೀವ
ಸ್ನೇಹವೊಂದು ಅಮೃತ..
ಭೂಮಿಬಾನ ನಡುವ ಬಂಧ
ಸ್ನೇಹದಿಂದ ಪ್ರೇರಿತ...
ನಾಲ್ಕು ದಿನದ ಬಾಳಿನಲ್ಲಿ
ಸ್ನೇಹವೊಂದೆ ಶಾಶ್ವತ..

ಕ್ಷಣದ ಕೋಪ


ಹರಿದ ಹಾಳೆ, ಒಡೆದ ಗಾಜು 
ಮರಳಿ ಒಂದುಗೂಡದು
ಕ್ಷಣದ ಕೋಪದಿಂದ ಮುರಿದ 
ಮನಸು ಮತ್ತೆ ಸೇರದು..!

ಹರಿವ ಹೊಳೆ ಪ್ರವಾಹವಾಗೆ 
ಬಾಳಿಗಿಹುದೆ ಆಸರೆ...?
ಸಿಟ್ಟ ನೆರೆಗೆ ಕೊಚ್ಚಿಹೋದ
ಪ್ರೀತಿ ತಿರುಗಿ ಬಾರದು..!

ಹರಿತ ಮಾತು, ಮುನಿಸ ಮೌನ 
ಈಟಿಯಂತೆ ಇರಿಯಲು
ಕೋಪ ಕೊರೆದ ಮನದಗಾಯ
ಸಹಜವಾಗಿ ಆರದು..!

ಪ್ರೀತಿ ಜನರ ನಡುವೆ ಕೆಸರ
ಎರಚೆ ಕ್ಷಣದ ಕೋಪವು
ಕೆಡುವ ನಂಟು ಕೊಚ್ಚೆಯಂತೆ 
ಅಪ್ಪಿಕೊಳಲು ಆಗದು..!

ಕೃತಜ್ಞತೆ!



ತೆರೆಯಮರೆಯಲಿ
ತರಳುತರುವಿನತೆರದಿ
ಪೊರೆವ ಜನನಿಯ ಋಣವ
ತೆರಲಿಹುದೆ ಎಣೆಯು

ಗುರಿಯನರುಹಿದ
ಗುರುಹಿರಿಯರನವರತ
ಗುರುತಿನಲಿ ನಮಿಸುವದು
ಗುರುತರದ ಹೊಣೆಯು

ಉಮೆಯ ಒಡೆಯನ
ರಮೆಯ ರಮಣನ ಹರಕೆ
ವಿಮೆಯಿರಲು ಇರುವಿನಲಿ
ರಮ ಮನದ ಮನೆಯು

ಅವನಿಯುಸಿರನು
ನೆವವಿರದೆ ನೆರವಿಗಿಡೆ
ನವಿರು ಬದುಕಿನ ಪಥವು
ಬವಣೆಗಳ ಕೊನೆಯು

ಅರಿಯದನುದಿನ
ಇರಿವ ನುಡಿಯನು ನುಡಿವ
ಅರಿಗಳಿಗೊಳಿತಿನೊಸಗೆ
ಹರಸುವದೆ ಕಣೆಯು



ತರಳುತರು = ತೆಂಗಿನಮರ, ಕಲ್ಪ ವೃಕ್ಷ
ಒಸಗೆ = ಉಡುಗೊರೆ
ರಮ = ಸಂತೋಷದಾಯಕವಾದುದು
ಕಣೆ = ಬಾಣ ( ಇಲ್ಲಿ ಪ್ರತೀಕಾರ ಎಂಬ ಅರ್ಥದಲ್ಲಿ ಬಳಸಿದ್ದೇನೆ)






ನಲಿವ ಹಿಂದಿನ ನೋವು



ಹೊಸ ಚಿಗುರುಗಳದೋ ಬೆಡಗು ಬಿನ್ನಾಣ ರಸಕೇಳಿ
ಚಿಗುರೊಡೆವ ನೋವ ಹಳೆಯ ಕೊಂಬೆಗಳಿಗೆ ಕೇಳಿ

ಪತಂಗಗಳದೋ ಬೆಳಕ ನೋಡುತ ಮೈಮರೆತ ಕುಣಿತ
ಉರಿದುರಿದು ಬೆಳಗುವ ಉರಿಯ ದೀಪಗಳಿಗೆ ಕೇಳಿ

ಮುಡಿಗೆ ಹೂ ಮುಡಿದು ಮುದದಿ ಮೆರೆವಳು ಲಲನೆ
ಬೆವರುಣಿಸಿ ಹೂ ಬೆಳೆವ ಗುಟ್ಟ ಮಾಲಿಯನು ಕೇಳಿ

ಕವಿಪುಂಗವರಿಗೆ ಸ್ಫೂರ್ತಿ ಸೆಲೆಯಂತೆ ಶಿಲಾಬಾಲಿಕೆ
ಉಳಿಯ ಪೆಟ್ಟಿನ ನೋವ ಕಡೆದ ಶಿಲೆಗಳಿಗೆ ಕೇಳಿ

ರೆಕ್ಕೆ ಬಲಿತು ಬಾನೆತ್ತರ ಜಿಗಿವ ಮರಿಗಳದದೇನು ಅಂದ
ಹೊಟ್ಟೆಕಟ್ಟಿ ಮೊಟ್ಟೆಕಾಯ್ವ ಬವಣೆ ಹಿರಿಹಕ್ಕಿಯ ಕೇಳಿ

ಆಸ್ತಿ ಅಂತಸ್ತಿನ ಮದದಿ ಮೆರೆವುದೇ ಸಾಧನೆಯೇ..?
ಕರುಳಕುಡಿಗಾಗಿ ತೊರೆದ ಆಸೆಗಳೇನೆಂದು ಹೆತ್ತವರ ಕೇಳಿ

ಸಂತ ಪಥ




ಮಾಳಿಗೆಯ ಹಂಗಿರದೆ ನಿಲದೆ ನಡೆದಿಹ ಸಂತ
ಜೋಳಿಗೆಯ ತುಂಬಿಹುದು ಅನುಭಾವ ಬುತ್ತಿ
ನಾಲಿಗೆಯು ನಂಬಿರಲು ಸರ್ವಶಕ್ತನ ಮಂತ್ರ
ಹೋಳಿಗೆಯೂ ತುಂಬದಿಹ ಹಸಿವೆ ಭಕುತಿ

ಹಾಡುಹಕ್ಕಿಗೆ ಏಕೆ ಬಿರುದು ಬಾವಲಿಯೊಲವು
ಬೀದಿಗುನ್ನಿಗೆ ಬೇಕೆ ಮಹಲ ಕಾವಲಿನೊಲವು
ನಾಡಿಯಲಿ ಹರಿಯೆ ದೇವ ನಾಮದ ಭಲವು
ಸೋಲೇನು? ಗೆಲುವೇನು? ಸಮ ನೋವು ನಲಿವು

ಹುಟ್ಟು ಅವನಿಚ್ಛೆ ಸಾವು ಅವನಿಚ್ಛೆ
ನಾನು ನನದೆನಲು ನಡುವೆ ಇನ್ನೇನಿದೆ
ತೊಟ್ಟು ಖಾವಿಯ ತೊರೆದು ಬಂಧಗಳ
ಅವಗೆ ಶರಣೆನದೆ ಗತಿ ಬೇರೇನಿದೆ

ನೀಲ ನಭದಡಿಗೆ ಅವನರಸಿ ಸವೆಸಿರಲು
ಕೊನೆಯೆ ಕಾಣದಿಹ ಜಂಗಮದ ಹಾದಿ
ಕಾಲಗರ್ಭದಿ ಅಳಿದು ನಶಿಸೆ ಸ್ಥಾವರವು
ಆತ್ಮಕಂಟಿಹುದು ಪರಮಾತ್ಮ ಸಂಗಮದ ವ್ಯಾದಿ

ಜಲದ ಸಾಗರ ದಾಟೆ ನೌಕೆ ನೂರಿಹುದಿಲ್ಲಿ
ಭವದ ಸಾಗರ ದಾಟೆ ನೌಕೆಯೊಂದೆ
ತಮದ ಕೂಪಕೆ ಎಳೆವ ಹಲವು ದಾರಿಗಳಿಲ್ಲಿ
ಬೆಳಕ ರೂಪದಿ ಸೆಳೆವ ದೈವವೊಂದೆ

Saturday, 27 July 2019

ನಿರುಪಯೋಗಿ ಕವಿತೆಗಳು

ಬರದಿ ಬಿರಿದ ಬರಡು ಭೂಮಿ ಮೇಲಣ ಅಂಬರ 
ಕನಿಕರದ ಕಂಬನಿ ಸುರಿಸುವದಿಲ್ಲ..
ಹಸಿರ ‌ಹೆಸರು ಮರೆತ ಮರದ ರೆಂಬೆಗಳಲ್ಲಿ
ಹೊಸ ಚೈತ್ರದ ಚಿಗುರು ಕುಡಿಯೊಡೆಯುವದಿಲ್ಲ..
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...

ಚೆಲ್ಲಿದರು ತರ್ಪಣಕೆ ಎದೆ ಬಗೆದು ನೆತ್ತರನು
ಕಲ್ಲು ದೇವರು ಕಣ್ಣ ತೆರೆಯುವದೆ ಇಲ್ಲ
ಕಣ್ಣುಗಳಲಿ ನೀರ್ಬತ್ತಿ ಹರಿದರೂ ಹನಿ ರಕ್ತವದು
ಮಣ್ಣು ಸೇರಿದ ಪ್ರೀತಿ ಮಾತನಾಡುವದೆ ಇಲ್ಲ...
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...

ಉಸಿರು ನಿಲ್ಲುವವರೆಗೆ ಗೆಯ್ದರೂ ಕಾಯಕವ
ಹಸಿದ ಹೊಟ್ಟೆಗೆ ಹಿಟ್ಟು ಹುಟ್ಟುವದೆ ಇಲ್ಲ
ಎಡೆಬಿಡದೆ ಎಡೆಎಡೆಯಲಿ ಗುಗ್ಗಳವ ಸುರಿದರೂ
ಒಡೆದ ಕನ್ನಡಿ ಹರಳು ಕೂಡುವದೆ ಇಲ್ಲ
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ..

Wednesday, 26 February 2014

ತರಗೆಲೆಗಳು ಮತ್ತು ಹೊಸಚಿಗುರು - ಒಂದು ಜೀವನ ಪ್ರೀತಿಯ ಕಾವ್ಯ..!!

ಮುತ್ತ ಮಾಲೆಯೆನ್ನದಿರಿ ನೋಡಿ ಹೊಳೆವ ಇಬ್ಬನಿ
ಚಿತ್ತ ಕಾಡುತಿದ್ದ ಕೊಳೆಯ ಕುಳಿತು ತೊಳೆದ ಕಂಬನಿ

ತಾಕದಿನ್ನು ಕನಕವರ್ಣ ಸೂರ್ಯಕಿರಣ ದೇಹಕೆ
ಬಾಗೆವಿನ್ನು ಖಗಕೂಟದ ಕಲರವದಾ ಮೋಹಕೆ
ಇಲ್ಲ ಇನ್ನು ದಣಿದ ಮನಕೆ ನೆರಳನೀವ ಸಂಭ್ರಮ
ಮೆಲ್ಲ ಇನ್ನು ಇಣುಕಲಾರ ನಮ್ಮ ನಡುವೆ ಚಂದ್ರಮ

ಗಾಳಿತೂರಿದೆಡೆಗೆ ನಡೆ.. ಭಲಹೀನ ಭವಿಷ್ಯವು..
ಮಾಲಿಕಾರಿದೊಡೆ ಕಿಚ್ಚು.. ಬೂದಿಕ್ಷಣದಿ ಶರೀರವು..
ನಕ್ಕು ನಲಿದ ಕ್ಷಣದ ಮೆಲುಕು ಮನದಲಿನ್ನು ಪ್ರತೀಕ್ಷಣ
ಮಣ್ಣ ಸೇರಿ ಮಣ್ಣಾಗುವ ಆ ದಿನಗಳದೆ ನಿರೀಕ್ಷಣ

ನಿನ್ನೆ ಸುರಿದ ಸೋನೆಮಳೆಗೆ ಕನಸೊಂದರ ಅಂಕುರ
ನಾಳೆ ಬರುವ ಖುಷಿಯ ನೆನೆದು ಸ್ವರ್ಗಕಿಲ್ಲ ಅಂತರ
ಅಡಗಿಸಿಟ್ಟ ಬಯಕೆ ಬೀಜ ಹಸಿರು ಮೊಳಕೆ ಹಡೆದಿದೆ...
ನೋವ ಜೊತೆಗೆ ನಲಿವಿನಾಟ ಅವ್ಯಾಹತ ನಡೆದಿದೆ..

Wednesday, 20 November 2013

ನನ್ನ ಕವನಗಳಲ್ಲಿ

ನನ್ನ ಕವನಗಳಲ್ಲಿ
ಅವರಿವರ ಓಲೈಕೆಗೆ
ಮಲ್ಲಿಗೆ ಸಂಪಿಗೆಗಳು ಬಿರಿದು 
ಅತ್ತರಿನ ಘಮ ಬೀರುವುದಿಲ್ಲ... 
ಭೃಷ್ಟರ ವಿರುದ್ದ ಧಿಕ್ಕಾರ.. 
ಶೋಷಿತರ ಚೀತ್ಕಾರ... 
ಬಿತ್ತರವಾಗುವುದಿಲ್ಲ... 
ಜಾತಿ ಮತದ ಹೆಸರಲಿ
ನೆತ್ತರು ಹರಿಯುವುದಿಲ್ಲ.. 
ನನ್ನ ಕವನಗಳಲ್ಲಿ 
ಯಾರಿಗೋ ಬಹುಪರಾಕು..
ಇನ್ಯಾರನೋ ಹೀಗಳೆವ ಸರಕು..
ಮರೆತು ಕೂಡ ಇಣುಕುವದಿಲ್ಲ... 

ನನ್ನ ಕವನಗಳು 
ನೀತಿಪಾಠ, ಬುದ್ದಿವಾದ
ಕುಣಿಸುವ ನಿನಾದ 
ಕುಲಗೆಡಿಸುವ ವಿವಾದಗಳ ಬಸಿರು 
ಹೊರುವದಿಲ್ಲ... 
ನಲಿಸುವ ವಿನೋದ 
ನೋಯಿಸುವ ವಿಷಾದ
ಮನ ಕಲಕುವ ಸಂವಾದ 
ಮತಿಗೆಡಿಸುವ ಪವಾಡಗಳ 
ಹಡೆಯುವುದಿಲ್ಲ.... 

ನನ್ನ ಕವನಗಳಲ್ಲಿ 
ಕೇವಲ ನೀನಿರುವೆ.. 
ನಿನ್ನ ಮುತ್ತುಗಳಿವೆ.. 
ನಿನ್ನ ಬಿಸಿ ಅಪ್ಪುಗೆಯ 
ಆಸರೆಯಲಿ ಜಗವನ್ನೇ 
ಮರೆತ ನಿಶಾನೆಗಳಿವೆ... 
ಇನ್ನೂ ತೆಗೆಯದ ಖುಷಿಯ 
ಕೋಟಿ ಖಜಾನೆಗಳಿವೆ... 
ಮತ್ತೆ.. ಆ ಮುತ್ತ ಮತ್ತಲ್ಲಿ 
ಮತ್ತೆ ಮತ್ತೆ ಮುಳುಗೇಳುವ 
ಕನಸ ಹೊತ್ತ ಉನ್ಮತ್ತ 
ನಾನಿರುವೆ..!!