Tuesday, 14 May 2013

ಬೆಳೆಯಬಾರದಿತ್ತು ನಾವು..!!






ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು
ಚಂದಮಾಮನೆಡೆಗೆ ಬರೆದ ಚೋಟುದ್ದದ ಏಣಿ..
ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು 
ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ..

ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು
ಅಜ್ಜಿ ಹೇಳೋ ಕಥೆಗಳಲ್ಲಿ ಚಿನ್ನದಂತ ರಾಣಿ...
ಅಪ್ಪನ ಕೈ ಹಿಡಿದು ನಡೆದ ಮರೆಯದೂರ ದಾರಿಗಳು
ಅಮ್ಮನ ಮಡಿಲಲ್ಲಿ ಕಲಿತ ಮುತ್ತಿನಂತ ವಾಣಿ... 

ಭೇದಭಾವ ಮರೆತು ಕಲೆತು ಆಡುತಿದ್ದ ಆಟಗಳು 
ಹಬ್ಬದುಡುಗೆ ತೊಟ್ಟು ಮೆರೆಯುತಿದ್ದ ಓಣಿ... 
ಎಲ್ಲ ಈಗ ಬಿಡದೆ ಕಾಡಿ ಕೊಲುವ ಕನಸುಗಳು 
ಬೆಳೆಯಬಾರದಿತ್ತು ನಾವು ನಂಬಿ ದೇವರಾಣಿ..!!





ಚಿತ್ರ ಕೃಪೆ:http://images.fineartamerica.com/

Saturday, 8 September 2012

ಸಖಿಯಿರದ ರಾತ್ರಿಗಳಲಿ...!
















ಸಖಿಯಿರದ ರಾತ್ರಿಗಳಲಿ 
ನಿದಿರೆಗೆ ಬರ ಬಡಿದಿದೆ...
ನೆನಪುಗಳ ಲೋಕದಲ್ಲಿ
ಮನವು ಕಳೆದು ಹೋಗಿದೆ...

ಅವಳ ನೋಟ, ಪ್ರೀತಿಯಾಟ
ಅವಳ ಮಾತು, ಮುತ್ತಿನೂಟ
ಸಿಗದೆ ಸುಡುವ ಶೋಕದಲ್ಲಿ
ಹೃದಯ ಮುಳುಗಿ ಹೋಗಿದೆ..

ಇಲ್ಲ ಮನದ ಮಳಿಗೆಯಲ್ಲಿ 
ಹೊಸ ಕನಸುಗಳ ಆವಕ...
ಮಾರಿ ಮುತ್ತ ಪಡೆಯುತಿದ್ದ 
ಆ ದಿನಗಳದೆಷ್ಟು ಮೋಹಕ...

ಹೊರಗೆ ಸುರಿವ ಸೋನೆ ಮಳೆ..

ಒಳಗೆ ಸುಡುವ ವಿರಹ ಪಾವಕ
ಕಾಯಿಸಿ ಸತಾಯಿಸುತಿಹನೆ..?
ಪಾಪಿ ಕಾಲ ಸಮಯ ಸಾಧಕ..


ಆವಕ = ಬರುವಿಕೆ
ಪಾವಕ = ಬೆಂಕಿ

ಚಿತ್ರ ಎತ್ತಿದ್ದು : http://www.benreed.net/index.php/2011/01/12/mostly-forgotten/ ಇಲ್ಲಿಂದ 

Tuesday, 4 September 2012

ಇನ್ನೂ ಇದೆ..!!


















ಕೊರಗದಿರು, ಮರುಗದಿರು
ವಿರಹ ಸುಡುತಿಹುದೆಂದು..
ಕತ್ತಲೆಯ  ಬೆನ್ನಲ್ಲೆ  ಹಗಲೂ ಇದೆ...
ಕನಸುಗಳ ಕೊಲ್ಲದಿರು
ಎಲ್ಲ ಮುಗಿದಿಹುದೆಂದು
ಕಣ್ತೆರೆಯೆ ಕೈಯ್ಯಲ್ಲೇ ಮುಗಿಲೂ ಇದೆ...

ಕೈ ಬಳೆಯ ತಾಳಕ್ಕೆ,
ಬಿಸಿ ಉಸಿರ ಮೇಳಕ್ಕೆ,
ಮಾನಸದಿ ವೀಣೆ ನುಡಿಸುವದಿದೆ...
ಗೆಳತಿ, ತಾನನಕೆ ನಾವ್ ಕೂಡಿ ಕುಣಿಯುವದಿದೆ...

ಹುಸಿ ಮುನಿಸ ಮರೆತು,
ಮುಸಿ ನಗುತ ಬೆರೆತು,
ಯೌವನದ ಕಡಲ ಕಡೆಯುವದಿದೆ...
ಗೆಳತಿ, ಜೀವನದ ಪಥದಿ ಜೊತೆ ನಡೆಯುವದಿದೆ..

ಕರಗದಿರು, ಸೊರಗದಿರು
ಬಾಳ ಪಯಣದಿ ದಣಿದು..
ಕತ್ತಲೆಯ ಬೆನ್ನಲ್ಲೆ ಹಗಲೂ ಇದೆ
ಕಣ್ತೆರೆಯೆ ಕೈಯ್ಯಲ್ಲೇ ಮುಗಿಲೂ ಇದೆ..


ಚಿತ್ರ: http://www.mylot.com/w/keywords/flaws.aspx ಇಲ್ಲಿಂದ ಎತ್ತಿದ್ದು..

Wednesday, 29 August 2012

ಮತ್ತೆ ನಾ ಬರೆಯಬಾರದಿತ್ತು...!!

ಹೊದ್ದು ಮಲಗಿಹ ಮನಕೆ
ಕುಣಿವ ಆಸೆಯನುಣಿಸಿ
ನೆನಪುಗಳ ನಾದಸ್ವರ
ನುಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...

ಆಯ್ದು ಪದಕುಸುಮಗಳ
ಒಲವ ದಾರದಿ ಕಟ್ಟಿ
ಮುದದಿ ಮಡದಿಯ ಮುಡಿಗೆ
ಮುಡಿಸಬಾರದಿತ್ತು....
ಮತ್ತೆ ನಾ ಬರೆಯಬಾರದಿತ್ತು...

ಕದ್ದು ಕೆಲ ಕನಸುಗಳ
ಬರುವ ನಾಳೆಗಿರಲೆಂದು
ಬಚ್ಚಿಟ್ಟ ಭಾವದ ಬುತ್ತಿ
ಬಿಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...!

Sunday, 17 July 2011

ಕಲೆ ಒಳ್ಳೆಯದು..!

ಬೇಡ..
ಮುದ್ದೆಯಾಗಿ ಬಿದ್ದುದನ್ನು
ಎತ್ತಿ ಕುಡುಗಿ...
ಅರ್ಧ ಮೇಲೆ ಮಡಿಸಿದ
ಕೈ ಪೂರ್ತಿ ಬಿಡಿಸಿ
ಉಲ್ಟಾ ಮಾಡಿ
ಸಾಬೂನಿನ ಹಾಲ್ನೊರೆ
ನೀರಲ್ಲಿ ದಿನವಿಡೀ ನೆನೆಸಿ
ತಿಕ್ಕಿ ತೊಳೆದು
ನೀರಲ್ಲಿ ಅದ್ದದ್ದಿ ತೆಗೆದು
ಹಿಂಡಿ ತಂತಿ ಮೇಲೆಸೆದು
ಗಾಳಿಗೆ ಹಾರದಂತೆ
ಕ್ಲಿಪ್ಪಿನಿಂದ ಬಂದಿಸುವ ಮೊದಲು
ಒಮ್ಮೆ ಸರಿಯಾಗಿ ನೋಡು...

ನಿನ್ನೆ ರಾತ್ರಿ ನನ್ನನಪ್ಪಿ

ನೀನಿತ್ತ ಮುತ್ತು ಗುರಿ ತಪ್ಪಿ
ಅಂಗಿಯ ಮೇಲೆ
ಕೆಂದುಟಿಯ ಕಲೆ ಮೂಡಿದೆ..

ನೀ ಮತ್ತೆ ಮರಳಿ ಬರುವವರೆಗೆ

ಮುತ್ತ ಹೊತ್ತು ತರುವವರೆಗೆ
ನೋಡಿ ಸಂಭ್ರಮಿಸಬೇಕು ನಾನು...
ನೆನಪ ಮಳೆಯಲಿ ನೆನೆದು
ವಿರಹಾಗ್ನಿ ಸುಡದಂತೆ
ನಿನ್ನ ಕಾಯಬೇಕು ನಾನು..

ಹೊಸ ಅಂಗಿ ಕಲೆಯಾಯ್ತೆಂದು

ಬೇಸರ ಬೇಡ..
ಕಲೆಯಿಂದ ಒಳ್ಳೆಯದಾಗೋದಾದ್ರೆ
ಕಲೆ ಒಳ್ಳೆಯದು..!!

Tuesday, 5 July 2011

ನೆನಪಿನ ಯಾತ್ರೆಗೆ

ಅದೋ..
ಇಷ್ಟು ಹೊತ್ತು ಗುಡುಗು ಮಿಂಚಿನ
ಜೊತೆ ತಾಲೀಮು ನಡೆಸಿದ್ದ
ಮಳೆರಾಯ ಬಂದೇ ಬಿಟ್ಟ..
ಚಿಟ ಪಟ.. ಪಟ ಚಿಟ...
ಹನಿಗಳ ಗೆಜ್ಜೆ ನಾದ ಬೇರೆ..
ಮತ್ತು ಮತಿಗೇರಿದಂತೆ
ಕುಣಿದೇ ಬಿಟ್ಟ..

ಆಗಿದ್ದಾಗಲಿ..ಬಿಡಬೇಡ..

ಕತ್ತಿಯಿಂದ ಕಡಿ...
ಹೆರೆಮಣೆಯಲ್ಲಿ ಉದ್ದುದ್ದಗೆ ಸಿಗಿ..
ಕುಡಿವ ಎಣ್ಣೆಯಲ್ಲಿ ಕರಿ..
ಅಚ್ಚ ಖಾರದ ಪುಡಿ ಸ್ವಲ್ಪ ಸೋಕು...
ವ್ಹಾರೆ ವ್ಹಾ...!
ತುಂಬದ ಬಾಯಿಯ ತಿರುಪತಿ ಹುಂಡಿಗೆ..
ಗರಿ ಗರಿ ಹಲಸಿನ ಸಂಡಿಗೆ..

ನೆನಪಿನ ಯಾತ್ರೆಗೆ 
ಮನಸಿನ ಜಾತ್ರೆಗೆ..
ಸಾಕಿಷ್ಟು ತಯಾರಿ..
ಹಾಂ... ಮರೆತೆ.. ಜೊತೆಗೊಂದು ಲೋಟ...
ಬಿಸಿ ಬಿಸಿ ಕಾಫಿ ಬೇಕೇ ಬೇಕು..

Saturday, 2 July 2011

ಆ ಬಾಗಿಲುಗಳ ತೆಗೆದುಬಿಡು..!!


 


ಇಷ್ಟದ ಬಣ್ಣವೇನೋ ಹೌದು..
ಆದರೆಷ್ಟು ದಿನ..?
ಜೇಡ ಕಟ್ಟಿದ.. ಬಣ್ಣ ಮಾಸಿದ..
ಅದೇ ನಾಲ್ಕು ಗೋಡೆಯನ್ನು
ತದೇಕಚಿತ್ತದಿಂದ ನೋಡುವುದು...?

ಹಾಡು ಕುಣಿತ ಆಟ ಓಟ
ಅತ್ತೆ ಸೊಸೆ ಕಾದಾಟ
ಸುದ್ದಿ ವಾಹಿನಿಗಳ ದೊಂಬರಾಟ...
ಬದಬದಲಿಸಿ ಚಾನಲ್ಲು
ದೂರದರ್ಶನದೆದುರು ಹೊತ್ತು ದೂಡುವುದು..?

ಹೊರಗೆ ಗ್ಯಾಲರಿಯಲ್ಲಿ
ವಿಂಡ್ ಚೈಮ್ ನುಡಿಸುತಿರುವ
ತಣ್ಣನೆಯ ಗಾಳಿ ಒಳ ತೂರಬಹುದು...
ಕವಿದ ಮಬ್ಬು ಸರಿಯುವಂತೆ
ಸೂರ್ಯನ ಪುಗಸಟ್ಟೆ ಬೆಳಕು ಒಳ ಚಿಮ್ಮಬಹುದು...
ದಾರಿಯಲ್ಲಿ ಹೋಗುವ ವಾಹನಗಳ ಸದ್ದು
ಪಾರ್ಕಿನಲ್ಲಿ ನಲಿವ ಮಕ್ಕಳ ಕೇಕೆ
ಕಿವಿಗೆ ಅಪ್ಪಳಿಸಲೂ ಬಹುದು..
ರಾತ್ರಿಯ ಸಿ ಎಫ್ ಎಲ್ ಬೆಳಕಿನ ಮೋಹದಿ
ಒಂದೆರಡು ಹುಳ ಹಪ್ಪಡೆ ಹಾರಿ ಬರಬಹುದು..
 ಮೊದಲ ಮಳೆಗೆ ಹರಡಿದ ಮಣ್ಣಿನ ಕಂಪು
ಮೂಗಿಗೆ ಬಡಿದರೂ ಆಶ್ಚರ್ಯವಿಲ್ಲ..
ಮತ್ತೆ ಯೋಚನೆ ಬೇಡ...ಆಗಿದ್ದಾಗಲಿ.. 
ಆ ಕಿಡಕಿಯ ಎರಡು ಬಾಗಿಲುಗಳನ್ನು ತೆಗೆದುಬಿಡು...

Wednesday, 27 April 2011

ಕಣ್ಣೀರ ಕಡಲು...!!



ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ
ಧೋ..ಎಂದು ಸುರಿಯುತ್ತಿದೆ.. ಮಳೆ...
ಸುತ್ತಲೂ ಕತ್ತಲು... ಕಣ್ಣೀರ ಕಡಲು...

ಎಲ್ಲದಕ್ಕು ಕಾರಣ ಆ ಚಂದ್ರಮ...
ಪ್ರತಿ ಸಾರಿಯಂತೆ ನಿನ್ನೆ ಮತ್ತೆ...
ಪೌರ್ಣಮಿಯ ನೆವವೊಡ್ಡಿ..
ಲಲನೆಯರ ಸೆಳೆವ ತೆವಲು ಹೆಚ್ಚಿ
ಸೂರ್ಯನಿಂದ ಒಂದಿಷ್ಟು ಬೆಳಕು
ಕಡ ತಂದು ಮಿರ್ರನೆ ಮಿಂಚುತ್ತಿದ್ದ..

ಏನನಿಸಿತೋ ನನ್ನ ನೋಡಿ...
 ಒಮ್ಮೆ ತನ್ನತ್ತ ಸೆಳೆದ...
ಗೆಳೆಯಾ.. ಎನ್ನುತ್ತಾ ಮಾತಿಗೆಳೆದ...

ವಿರಹ.. ದುಃಖ.. ಏಕಾಂತ.. ಬೇಸರ...
ಎಲ್ಲ ತೋಡಿಕೊಂಡೆ.. 
ಪರಿಹರಿಸು ಗೆಳೆಯಾ..
ಪರಿ ಪರಿಯಾಗಿ ಬೇಡಿಕೊಂಡೆ..

ಪಾಪಿ.. ನನ್ನ ಕಥೆಯ 
ಹೋಗಿ ಹೋಗಿ ಮೋಡಗಳಿಗೆ ಹೇಳುವದೆ...??

ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ ಸುರಿಸುತಿವೆ....
ಸುತ್ತೆಲ್ಲ ಕತ್ತಲು.. ಕಣ್ಣೀರ ಕಡಲು...

Saturday, 23 April 2011

ಮೂರು ಹನಿ...!!

~ ೧ ~ 


ಸ್ವಾರ್ಥಿಗಳ ಲೋಕವಿದು
ಗೆಳೆಯಾ..ಜನರೆದುರು 
ಕಣ್ಣೀರ ಸುರಿಸದಿರು.. ಅದು ತಪ್ಪು...

ಮನದ ಗಾಯಗಳ
ತಪ್ಪಿಯೂ ತೋರದಿರು..
ಎಲ್ಲ ಕೈಯ್ಯಲ್ಲಿ ಹಿಡಿದಿಹರು ಉಪ್ಪು...!!


~ ೨ ~


ಕಾಡದಿರಿ ನೆನಪುಗಳೇ ಇಂದು..
ಜಗದ ಮೆರವಣಿಗೆಯಲಿ
ನಾನು ಸಹ ಒಂದಾಗಿ ಸಾಗ ಬೇಕು

ಜಿನುಗುವಾ ಕಣ್ಣೀರ
ಮರೆಸಿ ನಾ ಮರೆಯಲ್ಲಿ
ಸುಮ್ಮನೆ ಸುಳ್ಳು ನಗೆ ನಗ ಬೇಕು..!



~ ೩ ~


ಬಂಧನದ ಭಯವಿರದೆ
ದಣಿಯದೇ ಕುಣಿಯುತಿಹೆ
ನೋಡಿ ನರ್ತನದಾ ಹೆಜ್ಜೆ..

ಬೆಸೆದು ಬೀಗಿಹನು ಕಾಲ
ಕಾಲ್ಗಳಲಿ ಸರಪಳಿಯ..
ನನಗದುವೆ ಬಣ್ಣದಾ ಗೆಜ್ಜೆ..!!

Thursday, 7 April 2011

ಇದು ಕನ್ನಡಿಗರ ಹಾಡು..!!

ಹೆಚ್. ಎಸ್. ವೆಂಕಟೇಶಮೂರ್ತಿ ವಿರಚಿತ, ಪ್ರವೀಣ್ ಕುಮಾರ್ ಸಂಗೀತ ನಿರ್ದೇಶನದ, ಕನ್ನಡದ ಹೆಸರಾಂತ ಹಲವು ದಿಗ್ಗಜರು ಹಾಡಿದ ಹಾಡಿಗೆ ನನ್ನ ಪ್ರಿಯ ಮಿತ್ರ ವಿನಯ್ ಭಟ್ ಅತ್ಯಂತ ಸುಂದರವಾದ ವೀಡಿಯೊ ಮಾಡಿದ್ದಾರೆ.. ಕೇಳಿ.. ನೋಡಿ.. ಆನಂದಿಸಿ... ಹೇಗಿದೆ ಅಂತ ಹೇಳಿ..