Wednesday 26 February 2014

ತರಗೆಲೆಗಳು ಮತ್ತು ಹೊಸಚಿಗುರು - ಒಂದು ಜೀವನ ಪ್ರೀತಿಯ ಕಾವ್ಯ..!!

ಮುತ್ತ ಮಾಲೆಯೆನ್ನದಿರಿ ನೋಡಿ ಹೊಳೆವ ಇಬ್ಬನಿ
ಚಿತ್ತ ಕಾಡುತಿದ್ದ ಕೊಳೆಯ ಕುಳಿತು ತೊಳೆದ ಕಂಬನಿ

ತಾಕದಿನ್ನು ಕನಕವರ್ಣ ಸೂರ್ಯಕಿರಣ ದೇಹಕೆ
ಬಾಗೆವಿನ್ನು ಖಗಕೂಟದ ಕಲರವದಾ ಮೋಹಕೆ
ಇಲ್ಲ ಇನ್ನು ದಣಿದ ಮನಕೆ ನೆರಳನೀವ ಸಂಭ್ರಮ
ಮೆಲ್ಲ ಇನ್ನು ಇಣುಕಲಾರ ನಮ್ಮ ನಡುವೆ ಚಂದ್ರಮ

ಗಾಳಿತೂರಿದೆಡೆಗೆ ನಡೆ.. ಭಲಹೀನ ಭವಿಷ್ಯವು..
ಮಾಲಿಕಾರಿದೊಡೆ ಕಿಚ್ಚು.. ಬೂದಿಕ್ಷಣದಿ ಶರೀರವು..
ನಕ್ಕು ನಲಿದ ಕ್ಷಣದ ಮೆಲುಕು ಮನದಲಿನ್ನು ಪ್ರತೀಕ್ಷಣ
ಮಣ್ಣ ಸೇರಿ ಮಣ್ಣಾಗುವ ಆ ದಿನಗಳದೆ ನಿರೀಕ್ಷಣ

ನಿನ್ನೆ ಸುರಿದ ಸೋನೆಮಳೆಗೆ ಕನಸೊಂದರ ಅಂಕುರ
ನಾಳೆ ಬರುವ ಖುಷಿಯ ನೆನೆದು ಸ್ವರ್ಗಕಿಲ್ಲ ಅಂತರ
ಅಡಗಿಸಿಟ್ಟ ಬಯಕೆ ಬೀಜ ಹಸಿರು ಮೊಳಕೆ ಹಡೆದಿದೆ...
ನೋವ ಜೊತೆಗೆ ನಲಿವಿನಾಟ ಅವ್ಯಾಹತ ನಡೆದಿದೆ..

4 comments:

  1. ಇಲ್ಲ ಇನ್ನು ದಣಿದ ಮನಕೆ ನೆರಳನೀವ ಸಂಭ್ರಮ
    ಮೆಲ್ಲ ಇನ್ನು ಇಣುಕಲಾರ ನಮ್ಮ ನಡುವೆ ಚಂದ್ರಮ

    wow..!! super,,,

    ReplyDelete
  2. ಕವಿತೆಯ ಹೂರಣ ಮತ್ತು ಭಾಷಾ ಬಳಕೆ ಎರಡೂ ಅಮಿತವಾಗಿ ಮನಸೆಳೆದವು. ನೂರಾರು ಕವಿತೆಗಳು ನಿಮ್ಮಿಂದ ಬರಲಿ ನಮಗಾಗಿ.

    ReplyDelete
  3. ಓಹ್ ೨+೪*೩ ಪದ್ಯ....ನಂಗೂ ಇಷ್ಟಾ ಈ ಥರದ್ದು :) :). .
    ಮೊದಲಿಗೆ ಬೀಳುವಿಕೆಗೆ ಸಿದ್ಧಗೊಳಿಸಿ,ನಂತರ ಬೀಳುವಿಕೆಯಲ್ಲು ಹೊಸಹುಟ್ಟಿನ ಸಾರ್ಥಕತೆ ಕಾಣುವ ಕವನದ ಹರಿವು ಇಷ್ಟವಾಯ್ತು :).."ಮಾಲಿಕಾರಿದೊಡೆ" ಹೊಸದೆನಿಸಿತು...ಅರ್ಥ ತಿಳಿಸಿದ್ದಕ್ಕೂ ವಂದನೆಗಳು :) :)...
    ಒಟ್ಟಿನಲ್ಲಿ "ಬೀಳು-ಏಳು" ಇಷ್ಟವಾಯ್ತು..
    ಬರೆಯುತ್ತಿರಿ ;)
    ನಮಸ್ತೆ ;)

    ReplyDelete