Wednesday 20 November 2013

ನನ್ನ ಕವನಗಳಲ್ಲಿ

ನನ್ನ ಕವನಗಳಲ್ಲಿ
ಅವರಿವರ ಓಲೈಕೆಗೆ
ಮಲ್ಲಿಗೆ ಸಂಪಿಗೆಗಳು ಬಿರಿದು 
ಅತ್ತರಿನ ಘಮ ಬೀರುವುದಿಲ್ಲ... 
ಭೃಷ್ಟರ ವಿರುದ್ದ ಧಿಕ್ಕಾರ.. 
ಶೋಷಿತರ ಚೀತ್ಕಾರ... 
ಬಿತ್ತರವಾಗುವುದಿಲ್ಲ... 
ಜಾತಿ ಮತದ ಹೆಸರಲಿ
ನೆತ್ತರು ಹರಿಯುವುದಿಲ್ಲ.. 
ನನ್ನ ಕವನಗಳಲ್ಲಿ 
ಯಾರಿಗೋ ಬಹುಪರಾಕು..
ಇನ್ಯಾರನೋ ಹೀಗಳೆವ ಸರಕು..
ಮರೆತು ಕೂಡ ಇಣುಕುವದಿಲ್ಲ... 

ನನ್ನ ಕವನಗಳು 
ನೀತಿಪಾಠ, ಬುದ್ದಿವಾದ
ಕುಣಿಸುವ ನಿನಾದ 
ಕುಲಗೆಡಿಸುವ ವಿವಾದಗಳ ಬಸಿರು 
ಹೊರುವದಿಲ್ಲ... 
ನಲಿಸುವ ವಿನೋದ 
ನೋಯಿಸುವ ವಿಷಾದ
ಮನ ಕಲಕುವ ಸಂವಾದ 
ಮತಿಗೆಡಿಸುವ ಪವಾಡಗಳ 
ಹಡೆಯುವುದಿಲ್ಲ.... 

ನನ್ನ ಕವನಗಳಲ್ಲಿ 
ಕೇವಲ ನೀನಿರುವೆ.. 
ನಿನ್ನ ಮುತ್ತುಗಳಿವೆ.. 
ನಿನ್ನ ಬಿಸಿ ಅಪ್ಪುಗೆಯ 
ಆಸರೆಯಲಿ ಜಗವನ್ನೇ 
ಮರೆತ ನಿಶಾನೆಗಳಿವೆ... 
ಇನ್ನೂ ತೆಗೆಯದ ಖುಷಿಯ 
ಕೋಟಿ ಖಜಾನೆಗಳಿವೆ... 
ಮತ್ತೆ.. ಆ ಮುತ್ತ ಮತ್ತಲ್ಲಿ 
ಮತ್ತೆ ಮತ್ತೆ ಮುಳುಗೇಳುವ 
ಕನಸ ಹೊತ್ತ ಉನ್ಮತ್ತ 
ನಾನಿರುವೆ..!!




5 comments:

  1. ವಾವ್ ಎಷ್ಟು ಚೆಂದದ ಕವನ. ಓದಿ ತುಂಭಾ ಖುಷ ಪಟ್ಟೆ.

    ReplyDelete
  2. ತುಂಬಾ ಚನ್ನಾಗಿದೆ...ಬ್ಲಾಗ್ ಡಿಸೈನ್ ಕೂಡ ತುಂಬಾನೆ ಇಷ್ಟ ಆಯ್ತು :)

    ReplyDelete
  3. ಸು೦ದರ ಬ್ಲಾಗ್ ;)

    ReplyDelete