Tuesday 14 May 2013

ಬೆಳೆಯಬಾರದಿತ್ತು ನಾವು..!!






ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು
ಚಂದಮಾಮನೆಡೆಗೆ ಬರೆದ ಚೋಟುದ್ದದ ಏಣಿ..
ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು 
ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ..

ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು
ಅಜ್ಜಿ ಹೇಳೋ ಕಥೆಗಳಲ್ಲಿ ಚಿನ್ನದಂತ ರಾಣಿ...
ಅಪ್ಪನ ಕೈ ಹಿಡಿದು ನಡೆದ ಮರೆಯದೂರ ದಾರಿಗಳು
ಅಮ್ಮನ ಮಡಿಲಲ್ಲಿ ಕಲಿತ ಮುತ್ತಿನಂತ ವಾಣಿ... 

ಭೇದಭಾವ ಮರೆತು ಕಲೆತು ಆಡುತಿದ್ದ ಆಟಗಳು 
ಹಬ್ಬದುಡುಗೆ ತೊಟ್ಟು ಮೆರೆಯುತಿದ್ದ ಓಣಿ... 
ಎಲ್ಲ ಈಗ ಬಿಡದೆ ಕಾಡಿ ಕೊಲುವ ಕನಸುಗಳು 
ಬೆಳೆಯಬಾರದಿತ್ತು ನಾವು ನಂಬಿ ದೇವರಾಣಿ..!!





ಚಿತ್ರ ಕೃಪೆ:http://images.fineartamerica.com/

8 comments:

  1. ಮೊದಲು ನಿಮಗೆ ಅಭಿನಂದನೆಗಳು. ನಮ್ಮನ್ನು ಕಾಲದ ಯಂತ್ರದಲ್ಲಿ ಕೂರಿಸಿ ಸಲೀಸಾಗಿ ಬಾಲ್ಯಕ್ಕೆ ಕರೆದೊಯ್ದ ನಿಮ್ಮ ಕವನಕ್ಕೆ ಗೆಳೆಯ.

    "ಭೇದಭಾವ ಮರೆತು ಕಲೆತು ಆಡುತಿದ್ದ ಆಟಗಳು " ಎನ್ನುವಾಗ ನಮ್ಮಲ್ಲಿದ್ದ ಸಮಾನ ಮನಸ್ಕ ಮನಸು ಮತ್ತು ಬೆಳೆದಂತೆಲ್ಲ ನಾವು ಅರಿಯದೇ ಹಾಕಿಕೊಳ್ಳುವ ಗೆರೆಗಳ ಬಗ್ಗೆ ನಿಮ್ಮ ವಿಷಾದ "ಬೆಳೆಯಬಾರದಿತ್ತು ನಾವು ನಂಬಿ ದೇವರಾಣಿ..!!" ಏತದೂ ಮನಗೆದ್ದವು.

    ReplyDelete

  2. ಸಾಲುಗಳ ಚಂದ ಹುಡುಕಲು ಹೊರಟರೆ ಇಡೀ ಕವನವನ್ನೇ ಮತ್ತೆ ಕಾಪಿ ಮಾಡಬೇಕು. ಬಾಲ್ಯ ಮರೆಯಾಗಲೇಬಾರದಿತ್ತು. ನಿಮ್ಮ ಕವನದ ಮೂಲಕ ಮತ್ತೆ ಎಲ್ಲ ನೆನಪುಗಳು ಹಸಿ ಹಸಿ ವಾಪಸ್ ಬರುವ ಮನಸ್ಸೇ ಇಲ್ಲ .

    ಹೌದು ಬೆಳೆಯಲೇಬಾರದಿತ್ತು ನಾವು... !!!!

    ReplyDelete
  3. ಬದರೀ ಸರ್.. ನಮಸ್ತೆ...
    ಬೆಳೀತಾ ಬೆಳೀತಾ ನಮ್ಮ ಸಹಜತೆಗಳನ್ನ ಮರೆತು ನಾವಲ್ಲದ ನಾವುಗಳಾಗೋದಕ್ಕೆ ಶತಾಯ ಗತಾಯ ಹಂಬಲಿಸುತ್ತೇವಲ್ಲ... ಅಲ್ಲಿಂದ ಶುರುವಾಗತ್ತೆ ಮತ್ತೆ.. ಮುಂದೊಮ್ಮೆ ಹಿಂದಿರುಗಿ ಹೋಗಿ ಮತ್ತೆ ಬಾಲ್ಯವನ್ನು ಜೀವಿಸೋಣ ಎಂಬ ಆಸೆ ವಿಪರೀತವಾಗುವ ಕಾಲಘಟ್ಟದ ಮುನ್ನುಡಿ... ಕವನ ಓದಿ ಕಾಲಯಂತ್ರದ ಮುಖೇನ ಬಾಲ್ಯವನ್ನೊಮ್ಮೆ ಸುತ್ತಿ ಬಂದು ಹರಸಿದ್ದಕ್ಕೆ ಧನ್ಯವಾದಗಳು..

    ReplyDelete
  4. ಸಂಧ್ಯಾ...
    ಕವನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಬೇಡ ಅಂದರೂ ಬಂದಾಗಿದೆ... ಇಲ್ಲಿ ಇರಬೇಕಾದುದು ವಾಸ್ತವ.. ಅವಕಾಶ ಸಿಕ್ಕಾಗಲೆಲ್ಲ ನೆನಪುಗಳ ನೆಪವೊಡ್ಡಿ ಆ ದಿನಗಳಿಗೊಮ್ಮೆ ಹೋಗಿ ಬರೋದು ನಮಗಿರೋ ಒಂದೇ ಆಯ್ಕೆ..

    ReplyDelete
  5. ನಿಜ ಬೆಳೆಯಬಾರದಿತ್ತು ನಾವು ...
    ಅದೇ ಹಳ್ಳಿಯ ಪುಟ್ಟ ಹುಡುಗರಾಗಿ ಹಾಗೆಯೇ ಮಸ್ತಿ, ಪ್ರೀತಿ,ಸ್ನೇಹಗಳ ಜೊತೆ ನೆಮ್ಮದಿಯಾಗಿರೋ ಪುಟ್ಟ ಪೋರರಾಗಿಯೇ ಉಳಿಯಬೇಕಿತ್ತೆಂಬ ನಿಮ್ಮ ಭಾವ ನನ್ನದೂ ಕೂಡಾ :)
    ಇಷ್ಟವಾಯ್ತು ಭಾವ ಲಹರಿಯಲ್ಲಿನ ನೆನಪುಗಳ ನೆನಪು ...
    ಬರೀತಾ ಇರಿ
    ನಮಸ್ತೆ

    ReplyDelete
  6. ಭಾಗ್ಯ ಭಟ್.. ಭಾವ ಲಹರಿಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. ಬಾಲ್ಯವೇ ಹಾಗೆ.. ಎಂತವರ ಮನಸ್ಸಿನಲ್ಲೂ ಒಮ್ಮೆ ನೆನಪುಗಳ ಮಳೆ ಸುರಿದು ಪುಳುಕ ಹುಟ್ಟಿಸುತ್ತದೆ.. ಯಾರಿಗೂ ಕಾಯದೆ ಓದುವ ಕಾಲದ ಕೈ ಗೊಂಬೆಗಳು ನಾವು.. ನೆನಪುಗಳ ಆಳಗಳಲ್ಲಿ ಆಗಾಗ ಕಳೆದು ಹೋಗುವ ಅವಕಾಶ ನಮಗಿರುವುದಕ್ಕೆ ಹೆಮ್ಮೆ ಪಡಬೇಕಷ್ಟೆ..

    ReplyDelete
  7. ಬಾಲ್ಯವನ್ನು ಮತ್ತ್ತೊಮ್ಮೆ ನೆನಪಿಸಿ ಮುತ್ತಿಕ್ಕಿ ಕಚಗುಳಿ ಇಡುವ ಹಾಗೆ ಮಾಡಿದ ಬಹಳ ಸುಂದರ ಕವನ ದಿಲೀಪ್ ಅವರೇ . ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ ಇದು . ಆಗಾಗ ಬಂದು ನಿಮ್ಮ ಕವನಗಳನ್ನು ಓದಿ ಸಂಭ್ರಮಿಸುತ್ತೇನೆ . ಸಾದ್ಯವಾದರೆ ಒಮ್ಮೆ ನನ್ನ ಬ್ಲಾಗಿಗೋ ಇಣುಕಿ ನೋಡಿ :)

    ReplyDelete